ಬೆಳಗಾವಿ: ‘ನಮ್ಮ ಸಭೆಯನ್ನು ಭಿನ್ನಮತೀಯ ಚಟುವಟಿಕೆ, ಅತೃಪ್ತರ ಸಭೆ ಎಂದು ಬಿಂಬಿಸಲಾಗುತ್ತಿದೆ. ಆದರೆ, ಅತೃಪ್ತರ ಸಭೆಯಲ್ಲ’ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಧಾನಸಭೆ ಚುನಾವಣೆಯಲ್ಲಿ ನಮಗೆ ಹೀನಾಯ ಸೋಲಾಯಿತು. ನಂತರ ನಡೆದ ಲೋಕಸಭೆ ಚುನಾವಣೆಯಲ್ಲೂ ನಮ್ಮ ನಿರೀಕ್ಷೆ ತಲುಪಲಾಗಲಿಲ್ಲ. ರಾಜ್ಯದಲ್ಲಿ ಮುಂಬರುವ ಚುನಾವಣೆ ಗಮನದಲ್ಲಿ ಇರಿಸಿಕೊಂಡು ಈ ಸಭೆ ಮಾಡಿದ್ದೇವೆ. ನಮ್ಮಲ್ಲಿರುವ ದೋಷ ಸರಿಪಡಿಸಿಕೊಂಡು, ಪಕ್ಷ ಬಲಪಡಿಸುವ ವಿಚಾರವಾಗಿ 12 ಮಂದಿ ನಾಯಕರು ಸೇರಿಕೊಂಡು ಚರ್ಚಿಸಿದ್ದೇವೆ. ಇದು ಬಿಜೆಪಿ ಬಲವರ್ಧನೆಗಾಗಿಯೇ ಮಾಡಿದ ಸಭೆ’ ಎಂದರು.
‘ವಾಲ್ಮೀಕಿ ನಿಗಮದ ಹಣ ದುರುಪಯೋಗವಾಗಿದೆ. ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಲಾಗುತ್ತಿದೆ. ಇದರ ವಿರುದ್ಧ ಕೂಡಲಸಂಗಮದಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಲು ತೀರ್ಮಾನಿಸಿದ್ದೇವೆ. ಈ ವಿಷಯವನ್ನು ಹೈಕಮಾಂಡ್ ಗಮನಕ್ಕೆ ತರುತ್ತೇವೆ’ ಎಂದು ಹೇಳಿದರು.
‘ಮೈಸೂರು ಪಾದಯಾತ್ರೆಯಲ್ಲಿ ನೀವೇಕೆ ಪಾಲ್ಗೊಳ್ಳಲಿಲ್ಲ’ ಎನ್ನುವ ಪ್ರಶ್ನೆಗೆ, ‘ಬಳ್ಳಾರಿ ಪಾದಯಾತ್ರೆ ಮಾಡಲು ಶಕ್ತಿ ಬೇಕಲ್ಲವೆ? ಅದಕ್ಕಾಗಿ ಹೋಗಿಲ್ಲ’ ಎಂದು ಹೇಳಿ ಜಾರಿಕೊಂಡರು.