ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿರೋಧ ಪಕ್ಷ ನಾಯಕ ಯಾರು? ಬಿಜೆಪಿಯಲ್ಲಿ ಬಗೆಹರಿಯದ ಗೊಂದಲ

Published : 1 ಜುಲೈ 2023, 23:30 IST
Last Updated : 1 ಜುಲೈ 2023, 23:30 IST
ಫಾಲೋ ಮಾಡಿ
Comments

ಬೆಂಗಳೂರು: 16ನೇ ವಿಧಾನಸಭೆಯ ಮೊದಲ ಜಂಟಿ ಅಧಿವೇಶನದ ಆರಂಭಕ್ಕೆ ಒಂದೇ ದಿನ ಬಾಕಿ ಇದ್ದರೂ, ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲ ಬಿಜೆಪಿಯಲ್ಲಿ ಬಗೆಹರಿದಿಲ್ಲ.

ಭಾನುವಾರ(ಜು.2) ಮಧ್ಯಾಹ್ನದ ಬಳಿಕ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಅಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ನಾಯಕರಾಗಿ ಆಯ್ಕೆ ಮಾಡುವ ಸಂಭವ ಇದೆ ಎಂದು ಪಕ್ಷದ ಮೂಲಗಳು ಹೇಳಿದ್ದವು. 

‘ಶಾಸಕಾಂಗ ಪಕ್ಷದ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ಯಾರಾಗಬೇಕು ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಬಂದಿಲ್ಲ. ಹಾಗಾಗಿ, ಭಾನುವಾರ ಸಭೆ ನಡೆಯುವುದು ಅನುಮಾನ. ಸೋಮವಾರ ಬೆಳಿಗ್ಗೆ ಕಲಾಪ ಆರಂಭವಾಗುವುದಕ್ಕೆ ಮುನ್ನ, ನಾಯಕನ ಆಯ್ಕೆಗೆ ವರಿಷ್ಠರು ಸೂಚನೆ ನೀಡುವ ಸಾಧ್ಯತೆ ಇದೆ’ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದರು. 

ಶನಿವಾರ ಸಂಜೆ ನಡೆದ ದಿಢೀರ್ ಬೆಳವಣಿಗೆಯಲ್ಲಿ ಪಕ್ಷದ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ‍್ಪ ಅವರಿಗೆ ದೆಹಲಿಗೆ ಬರುವಂತೆ ವರಿಷ್ಠರು ಸಂದೇಶ ಕಳುಹಿಸಿದ್ದಾರೆ. ಭಾನುವಾರ ಮಧ್ಯಾಹ್ನ 2ಗಂಟೆಗೆ ಅವರು ದೆಹಲಿ ತಲುಪಲಿದ್ದಾರೆ. ಅವರ ಜತೆ ಸಮಾಲೋಚನೆ ನಡೆಸಿದ ಬಳಿಕ, ನಾಯಕನ ಆಯ್ಕೆಯ ಸೂತ್ರ ಹೊರಬೀಳಲಿದೆ. ಅದಾದ ಬಳಿಕ, ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಬರಲಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕನ ಆಯ್ಕೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಕೇಂದ್ರ ಸಚಿವ ಸಂಪುಟ ಸದ್ಯವೇ ಪುನಾರಚನೆಯಾಗಲಿದೆ. ರಾಜ್ಯದಿಂದ ಯಾರನ್ನು ಕೈಬಿಟ್ಟು, ಮತ್ತೆ ಯಾರನ್ನು ಸೇರ್ಪಡೆ ಮಾಡಬೇಕು ಎಂಬ ವಿಷಯದ ಕುರಿತು ವರಿಷ್ಠರು ಯಡಿಯೂರಪ್ಪನವರ ಜತೆ ಚರ್ಚೆ ನಡೆಸಲಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ  ಬಸನಗೌಡ ಪಾಟೀಲ ಯತ್ನಾಳ ತೀವ್ರ ಯತ್ನ ನಡೆಸಿದ್ದಾರೆ. ತಮ್ಮ ವಿರುದ್ಧ ನಿರಂತರ ವಾಗ್ದಾಳಿ ನಡೆಸಿಕೊಂಡು ಬಂದು, ಸರ್ಕಾರದ ವರ್ಚಸ್ಸು ಕೆಡಲು ಯತ್ನಾಳ ಕಾರಣ ಎಂದು ವಾದಿಸುತ್ತಿರುವ ಯಡಿಯೂರಪ್ಪ, ಯತ್ನಾಳ ಆಯ್ಕೆಗೆ ಸುತರಾಂ ಒಪ್ಪುವುದಿಲ್ಲ. ಹೀಗಾಗಿ, ಬಸವರಾಜ ಬೊಮ್ಮಾಯಿ ಆಯ್ಕೆ ಸಾಧ್ಯತೆ ಹೆಚ್ಚು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT