ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಗನ ಬಗ್ಗೆ ಗ್ರಾಮಸ್ಥರಲ್ಲಿ ಗೌರವವಿದೆ’

Last Updated 7 ಮಾರ್ಚ್ 2019, 19:28 IST
ಅಕ್ಷರ ಗಾತ್ರ

ಮಡಿಕೇರಿ: ‘ವೀರರ ನಾಡು’ ಕೊಡಗು. ಜಿಲ್ಲೆಯ ಪ್ರತಿ ಊರಿನಲ್ಲೂ ದೇಶ ಕಾಯುವ ಸೈನಿಕರು ಸಿಗುತ್ತಾರೆ. ದೇಶ ಸೇವೆಗೆ ಕಳುಹಿಸುವುದೇ ಪೋಷಕರಿಗೆ ಹೆಮ್ಮೆ. ಕೊಡಗಿನವರು ಭಾರತೀಯ ಸೇನೆಯ ವಿವಿಧ ಹಂತದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ತಾಲ್ಲೂಕಿನ ಮದೆನಾಡು ಗ್ರಾಮದ ಯಶೋದಾ ಅವರು ತಮ್ಮ ಪುತ್ರ ದರ್ಶನ್‌ ಅವರ ದೇಶಸೇವೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ.

ದರ್ಶನ್‌ ಅವರು ಭಾರತೀಯ ಸೇನೆಗೆ ಸೇರಿ ಆರು ವರ್ಷಗಳು ಕಳೆದಿವೆ. ಆರಂಭದಲ್ಲಿ ಜಮ್ಮು– ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದರು. ಈಗ ರಾಜಸ್ಥಾನದಲ್ಲಿ (66 ಮೀಡಿಯಂ ವಿಭಾಗ) ಸೇವೆ ಸಲ್ಲಿಸುತ್ತಿದ್ದಾರೆ.

‘ಅದೊಂದು ದಿನ ಮಗ ಸೇನೆಗೆ ಹೋಗಲು ಹೊರಟು ನಿಂತಾಗ ಮರು ಮಾತಿಲ್ಲದೇ ಒಪ್ಪಿದೆ. ಈಗ ನಮ್ಮ ಜನರನ್ನು ಕಾಪಾಡುತ್ತಿರುವುದು ಸಂತಸ ತಂದಿದೆ. ಗಡಿಯಲ್ಲಿ ಆತಂಕದ ಸ್ಥಿತಿಯಿದ್ದರೂ ನನಗೇನು ಭಯವಿಲ್ಲ. ಆತನದ್ದು ಹೋರಾಟದ ಮನೋಭಾವ. ನಾವೆಲ್ಲರೂ ಧೈರ್ಯದಿಂದ ಇದ್ದೇವೆ. ಕೆಚ್ಚೆದೆಯಿಂದ ಹೋರಾಟ ನಡೆಸಿ ಬರುತ್ತಾನೆಂಬ ನಂಬಿಕೆ ನಮ್ಮದು’ ಎಂದು ಯಶೋದಾ ನುಡಿದರು.

‘ಅಲ್ಪಸ್ವಲ್ಪ ಜಮೀನಿದೆ. ಅದರಲ್ಲಿ ಬರುವ ಆದಾಯ ಸಾಲದು. ಹೊರಗೆ ಕೆಲಸಕ್ಕೆ ಹೋಗುತ್ತೇನೆ. ಪುತ್ರನೂ ಖರ್ಚಿಗೆಂದು ಒಂದಷ್ಟು ಹಣ ನೀಡುತ್ತಾನೆ. ಖರ್ಚು ಮಾಡುವಾಗ ಪುತ್ರನ ದುಡಿಮೆಯೇ ಕಣ್ಮುಂದೆ ಬರುತ್ತದೆ. ದೇಶ ಉಳಿದರೆ ನಾವು. ಹೀಗಾಗಿ, ಸಂಬಂಧಿಕರಲ್ಲಿ ಹಾಗೂ ಗ್ರಾಮಸ್ಥರಲ್ಲಿ ನನ್ನ ಪುತ್ರನ ಸೇವೆಯ ಬಗ್ಗೆ ಗೌರವವಿದೆ’ ಎಂದು ಸ್ಮರಿಸುತ್ತಾರೆ.

‘ಗಡಿಯಲ್ಲಿ ವಿಷಮ ಸ್ಥಿತಿಯಿದೆ ಎನ್ನುವ ಸುದ್ದಿ ಟಿ.ವಿಯಲ್ಲಿ ಬರುತ್ತದೆ. ಆದರೆ, ನನ್ನ ಮಗನಂತೆಯೇ ಇತರ ಯೋಧರೂ ಇದ್ದಾರೆಂದು ಧೈರ್ಯ ತಂದುಕೊಳ್ಳುತ್ತೇನೆ. ವರ್ಷಕ್ಕೆ ಎರಡು ಬಾರಿ ಊರಿಗೆ ಬರುತ್ತಾನೆ. ಆಗಲೇ ನಮಗೆ ಸಮಾಧಾನ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT