ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಹಿತಿಗಳೂ ರಾಜಕಾರಣಿಗಳೇ! ಪಕ್ಷದ ಕಚೇರಿಯಲ್ಲಿ ಸಭೆ ಮಾಡಿದ್ದರಲ್ಲಿ ತಪ್ಪೇನಿದೆ:DKS

Published 18 ಜೂನ್ 2024, 11:00 IST
Last Updated 18 ಜೂನ್ 2024, 11:00 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಂಗ್ರೆಸ್‌ ಪಕ್ಷದ ಕಚೇರಿಗೆ ಸಾಹಿತಿಗಳನ್ನು ಕರೆದದ್ದು ನಾನೇ ರೀ, ಅದರಲ್ಲಿ ತಪ್ಪೇನಿದೆ. ನಿಮಗೆ (ಮಾಧ್ಯಮ) ತಪ್ಪು ಎನಿಸಬಹುದು. ಸಾಹಿತಿಗಳೂ ರಾಜಕಾರಣಿಗಳೇ, ಅವರೂ ರಾಜಕಾರಣಕ್ಕೆ ಬರಬಹುದು’!

ಈ ರೀತಿ ಹೇಳಿಕೆ ನೀಡಿದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌.

ಕೆಲ ದಿನಗಳ ಹಿಂದೆ ಕೆಪಿಸಿಸಿ ಕಚೇರಿಗೆ ಸಾಹಿತ್ಯ, ಸಂಸ್ಕೃತಿ ಮತ್ತು ಇತರ ಅಕಾಡೆಮಿಗಳ ಅಧ್ಯಕ್ಷರ ಮತ್ತು ಪದಾಧಿಕಾರಿಗಳನ್ನು ಕರೆಸಿಕೊಂಡ ವಿಚಾರವಾಗಿ ಸಾರ್ವಜನಿಕವಾಗಿ ಆಕ್ಷೇಪ ವ್ಯಕ್ತ ಆಗುತ್ತಿರುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದಾಗ, ಅವರು ತಮ್ಮ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡರು.

‘ಅಕಾಡೆಮಿ ಅಧ್ಯಕ್ಷರು, ಪದಾಧಿಕಾರಿಗಳನ್ನು ಕರೆಸಿಕೊಂಡ ಬಗ್ಗೆ ಅಕ್ಷೇಪ ವ್ಯಕ್ತವಾಗುತ್ತಿದೆಯಲ್ಲ’ ಎಂಬ ಪ್ರಶ್ನೆಗೆ, ‘ಅಕಾಡೆಮಿ ಅಧ್ಯಕ್ಷರ ಸಭೆ ನಾನೇ ಕರೆದಿದ್ದು ರೀ. ಅದರಲ್ಲೇನಿದೆ. ಪಕ್ಷದ ಕಚೇರಿಯಲ್ಲಿ ಕರೆದಿದ್ದು ಸರಿಯಲ್ಲ ಅಂತ ನಿಮಗೆ ಅನ್ನಿಸಿರಬಹುದು. ಇದು ಸರ್ಕಾರದ ನೇಮಕ. ಹೀಗಾಗಿ ಎಲ್ಲಿ ಬೇಕಾದರೂ ಕರೆಸಿಕೊಳ್ಳಬಹುದು. ಎಲ್ಲಿ ಬೇಕಾದರೂ ಸಭೆ ಮಾಡಬಹುದು. ಅವರು (ಸಾಹಿತಿ–ಕಲಾವಿದರು) ರಾಜಕಾರಣಿಗಳು ಆಗಬಾರದು ಅನ್ನೋದೆನಿಲ್ಲ’ ಎಂದು ಹೇಳಿದರು.

‘ನಾವು ಪಕ್ಷದ ಪದಾಧಿಕಾರಿಗಳನ್ನು, ರಾಜಕಾರಣಿಗಳನ್ನು ಬೇರೆ ಬೇರೆ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಿಸುವುದಿಲ್ಲವೇ. ನೇಮಕ ಮಾಡೋದು ಸರ್ಕಾರ ಇಚ್ಛೆ. ಈಗ ನಿಮ್ಮನ್ನೂ ಪ್ರೆಸ್‌ ಸೆಕ್ರೆಟರಿ ಮಾಡೋದಿಲ್ವೆ, ನೀವು ಬೆಳಗಿಂದ ಸಾಯಂಕಾಲದ ತನಕ ನಮ್ಮ ಹಿಂದೆ ಓಡಾಡುವುದಿಲ್ಲವೇ? ನಮಗೋಸ್ಕರ ಬಡಿದಾಡೋದಿಲ್ವೆ’ ಎಂದು ಶಿವಕುಮಾರ್ ಮರು ಪ್ರಶ್ನೆ ಹಾಕಿದರು.

‘ಸಾಹಿತ್ಯ ಮತ್ತು ಸಂಸ್ಕೃತಿಗೆ ಸೇರಿದ ಅಕಾಡೆಮಿಗಳು ಸ್ವತಂತ್ರ ಸಂಸ್ಥೆಗಳಲ್ಲವೇ, ಅವುಗಳ ಅಧ್ಯಕ್ಷರನ್ನು ಕರೆಸೋದು ಎಷ್ಟು ಸರಿ’ ಎಂಬ ಪ್ರಶ್ನೆಗೆ ಅವರ ಉತ್ತರ ಹೀಗಿತ್ತು–

‘ಅವೆಲ್ಲಾ ಇಂಡಿಪೆಂಡೆಂಡ್‌ ಬಾಡಿ ಅಲ್ಲ, ಆಲ್‌ ಆರ್‌ ಪೊಲಿಟೀಷಿಯನ್ಸ್‌, ಅವರದ್ದೇ ಆದ ಸಿದ್ಧಾಂತಗಳನ್ನು ಇಟ್ಟುಕೊಂಡು ಅವರೂ ರಾಜಕೀಯ ಮಾಡ್ತಾರೆ. ಆದರೆ, ಅದನ್ನು ಅವರು ಹೇಳಿಕೊಳ್ಳದೇ ಇರಬಹುದು. ಅವರಿಗೆ ಅವರದ್ದೇ ಆದ ಹಕ್ಕುಗಳಿವೆ. ನಾನು ಕರೆದಾಗ, ಇಷ್ಟ ಇದ್ದೋರು ಬಂದಿದ್ದಾರೆ. ಕೆಲವರು ಬಂದಿಲ್ಲ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT