ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರದ ವರ್ಗಾವಣೆ ದಂಧೆಗೆ ಮತ್ತೊಂದು ಬಲಿ: PSI ಸಾವು ಖಂಡಿಸಿ ಶಾಸಕ ಯತ್ನಾಳ ಕಿಡಿ

Published 3 ಆಗಸ್ಟ್ 2024, 7:44 IST
Last Updated 3 ಆಗಸ್ಟ್ 2024, 7:44 IST
ಅಕ್ಷರ ಗಾತ್ರ

ಬೆಂಗಳೂರು: ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಮುಂದುವರಿಯಲು ₹30 ಲಕ್ಷ ಹಣಕ್ಕಾಗಿ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಅವರ ಪುತ್ರ ಪಂಪನಗೌಡ (ಸನ್ನಿಗೌಡ) ಬೇಡಿಕೆ ಇಟ್ಟಿದ್ದರಿಂದಲೇ ಪರಶುರಾಮ್ ಮೃತಪಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.

ಪರಶುರಾಮ್ ಪತ್ನಿ ಶ್ವೇತಾ ನೀಡಿರುವ ದೂರಿನ ಪ್ರತಿಯನ್ನು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಯತ್ನಾಳ, ‘ಪಿಎಸ್‌ಐ ಪರಶುರಾಮ್ ಅವರಿಗೆ ಕಿರುಕುಳ ನೀಡಿ, ಹಣಕ್ಕಾಗಿ ಪೀಡಿಸಿ ಅವರ ಸಾವಿಗೆ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಮತ್ತು ಅವರ ಮಗ ಸನ್ನಿ ಗೌಡ ಕಾರಣರಾಗಿದ್ದಾರೆ. ಕಳೆದ ಏಳು ತಿಂಗಳ ಹಿಂದಷ್ಟೇ ₹30 ಲಕ್ಷ ಹಣ ನೀಡಿ ನಗರ ಠಾಣೆಗೆ ವರ್ಗಾವಣೆಯಾಗಿದ್ದ ಪರಶುರಾಮ ಅವರು ಸಾಲದ ಸುಳಿಗೆ ಸಿಲುಕಿದ್ದರು. ಇದೀಗ ‌ಮತ್ತೆ ನಿಯಮಬಾಹಿರ ವರ್ಗಾವಣೆ ಮಾಡಿಸಿ ಹಣಕ್ಕಾಗಿ ಕಿರುಕುಳ ನೀಡಿದ್ದಾರೆ. ಈ ಪ್ರಕರಣದ ಕುರಿತು ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

ಯಾದಗಿರಿಯಲ್ಲಿ ಮೃತ ಪರಶುರಾಮ್ ಪತ್ನಿ ಶ್ವೇತಾ ಮಾತನಾಡಿ, ‘ನನ್ನ ಪತಿ ಕಳೆದ 7 ತಿಂಗಳಿಂದ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಮತ್ತೆ ಸೆನ್ ಠಾಣೆಗೆ ವರ್ಗಾವಣೆ ಮಾಡಿದ್ದರು. ನಗರ ಠಾಣೆಯಲ್ಲಿ ಮುಂದುವರಿಯಲು ₹30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಮನನೊಂದಿದ್ದರು’ ಎಂದು ಹೇಳಿದ್ದಾರೆ.

‘ಅವಧಿ ಮುಗಿಯುವವರೆಗೆ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಮುಂದುವರಿಸಲು ಹೇಳಿದಾಗ ಶಾಸಕ, ಅವರ ಪುತ್ರ ಹಣ ಕೊಡದಿದ್ದರೆ ಇಲ್ಲಿ ಯಾಕೆ ಇರುತ್ತೀಯಾ... ಎಂದು ಹೇಳಿ ಜಾತಿ ನಿಂದನೆ ಮಾಡಿದ್ದಾರೆ. ಇದರಿಂದ ನನ್ನ ಪತಿ ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT