ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಸಂಖ್ಯಾತರ ಆಯೋಗದಲ್ಲಿ ಬೌದ್ಧರಿಗೆ ಪ್ರಾತಿನಿಧ್ಯ: ಜಮೀರ್ ಅಹಮದ್ ಭರವಸೆ

Published 28 ಜೂನ್ 2023, 23:18 IST
Last Updated 28 ಜೂನ್ 2023, 23:18 IST
ಅಕ್ಷರ ಗಾತ್ರ

ಬೆಂಗಳೂರು: ‘ಅಲ್ಪಸಂಖ್ಯಾತರ ಆಯೋಗದಲ್ಲಿ ಬೌದ್ಧ ಸಮುದಾಯಕ್ಕೆ ಪ್ರಾತಿನಿಧ್ಯ ಕಲ್ಪಿಸಲಾಗುವುದು’ ಎಂದು ಬೌದ್ಧ ಗುರುಗಳ ನಿಯೋಗಕ್ಕೆ ವಸತಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹಮದ್ ಭರವಸೆ ನೀಡಿದರು.

ನಿಯೋಗದಿಂದ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಸಚಿವರು, ‘ಬೌದ್ಧ ಸಮುದಾಯದ ವಿದ್ಯಾರ್ಥಿಗಳು ಜಾತಿ ಪ್ರಮಾಣಪತ್ರ ಮತ್ತು ಮತದಾರರ ಗುರುತಿನ ಚೀಟಿ ಪಡೆಯಲು ಎದುರಿಸುತ್ತಿರುವ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟ ಸಚಿವರ ಜತೆ ಚರ್ಚಿಸಲಾಗುವುದು’ ಎಂದರು.

‘ಹುಣಸೂರಿನ ಬೈಲುಕುಪ್ಪೆಯಲ್ಲಿ ಸಮುದಾಯ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗೆ ಕಾಲೇಜು ಹಾಗೂ ಉನ್ನತ ಶಿಕ್ಷಣ ಆರಂಭಿಸಲು ಅನುಮತಿ ದೊರಕಿಸಿಕೊಡಲಾಗುವುದು. ಅಲ್ಪಸಂಖ್ಯಾತ ಆಯೋಗ, ನಿರ್ದೇಶನಾಲಯ, ಅಭಿವೃದ್ಧಿ ನಿಗಮ ಹೀಗೆ ಎಲ್ಲ ಕಡೆ ಸಮುದಾಯಕ್ಕೆ ಪ್ರಾತಿನಿಧ್ಯ ಕಲ್ಪಿಸಿದರೆ ಸಮಸ್ಯೆ ಪರಿಹರಿಸಲು ಅನುಕೂಲವಾಗಲಿದೆ. ಒಂದು ವರ್ಷದಲ್ಲಿ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು’ ಎಂದೂ ನಿಯೋಗಕ್ಕೆ  ಆಶ್ವಾಸನೆ ನೀಡಿದರು.

ಮೈಸೂರಿನ ಮುಡಾದಲ್ಲಿ ಶೈಕ್ಷಣಿಕ ಉದ್ದೇಶಕ್ಕೆ ನಿವೇಶನ ನೀಡಬೇಕು ಮತ್ತು ದಲೈ ಲಾಮಾ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ಚೋದ್ದಿ ತಾಶಿ ಲುಮ್ಪೋ ಸಾಂಸ್ಕೃತಿಕ ಸೊಸೈಟಿಗೆ ಅನುದಾನ ನೀಡಬೇಕು ಎಂದು ನಿಯೋಗವು ಮನವಿ ಮಾಡಿತು. ಇದಕ್ಕೆ ಸ್ಪಂದಿಸಿದ ಸಚಿವರು ತಕ್ಷಣ ಅನುದಾನ ನೀಡುವ ಭರವಸೆ ನೀಡಿದರು.

ಟಿಬೆಟಿಯನ್ ಸಾಂಪ್ರದಾಯಿಕ ಗೌರವ ನೀಡಿ ಸಚಿವರನ್ನು ಸನ್ಮಾನಿಸಿದ ನಿಯೋಗವು, ಬೆಂಗಳೂರಿನ ಗಾಂಧಿ ನಗರದಲ್ಲಿರುವ ಮಹಾಬೋಧಿ ಸೊಸೈಟಿಗೆ ಭೇಟಿ ನೀಡುವಂತೆ ಆಹ್ವಾನಿಸಿತು. ದಕ್ಷಿಣ ಭಾರತದ ಸೆಂಟ್ರಲ್ ಟಿಬೆಟಿಯನ್ ಆಡಳಿತ ವಿಭಾಗದ ಪ್ರತಿನಿಧಿಗಳು ನಿಯೋಗದಲ್ಲಿದ್ದರು.

ದರ್ಗಾ ಮಸೀದಿಗಳಿಗೆ ಕಾಣಿಕೆ ಸಲ್ಲಿಸಲು ಇ–ಹುಂಡಿ

ಮುಜರಾಯಿ ದೇವಾಲಯಗಳ ಮಾದರಿಯಲ್ಲೇ ವಕ್ಫ್‌ ಅಧೀನದ ದರ್ಗಾ ಮತ್ತು ಮಸೀದಿಗಳಿಗೆ ಕಾಣಿಕೆ ಮತ್ತು ದೇಣಿಗೆ ನೀಡಲು ಇ–ಹುಂಡಿ ಆ್ಯಪ್‌ ಸಿದ್ಧಪಡಿಸಲಾಗಿದೆ. ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್‌ ಅವರು ಮಂಗಳವಾರ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಮಂಡಳಿ ಸಭೆಯಲ್ಲಿ ನೂತನ ಆ್ಯಪ್‌ಗೆ ಚಾಲನೆ ನೀಡಿದರು. ದರ್ಗಾ ಮತ್ತು ಮಸೀದಿಗಳಿಗೆ ಸಮುದಾಯ ನೀಡುವ ಕಾಣಿಕೆ ಮತ್ತು ದೇಣಿಗೆ ದುರುಪಯೋಗ ಆಗದಂತೆ ಹಾಗೂ ನಿಗದಿತ ಉದ್ದೇಶಕ್ಕೇ ಬಳಕೆ ಆಗುವಂತೆ ನೋಡಿಕೊಳ್ಳಲು ಆ್ಯಪ್‌ ಸಿದ್ಧಪಡಿಸಲಾಗಿದೆ ಎಂದರು. ಆರಂಭದಲ್ಲಿ ಬೆಂಗಳೂರಿನ ಹಜರತ್‌ ತವಕ್ಕಲ್ ಮಸ್ತಾನ್ ಶಾ ದರ್ಗಾದಲ್ಲಿ ಇ–ಹುಂಡಿ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಗೆ ಬರಲಿದ್ದು ಮುಂದಿನ ದಿನಗಳಲ್ಲಿ ವಕ್ಫ್‌ ವ್ಯಾಪ್ತಿಗೆ ಬರುವ 3131 ದರ್ಗಾಗಳು 10398 ಮಸೀದಿಗಳಲ್ಲಿ ಜಾರಿಗೊಳಿಸಲಾಗುವುದು. ಸಮುದಾಯದ ಜನ ಎಲ್ಲಿಂದ ಯಾವುದೇ ಸಮಯದಲ್ಲಿ ಪೋನ್‌ಪೇ ಗೂಗಲ್‌ ಪೇ ಮೂಲಕ ದೇಣಿಗೆ ಕಾಣಿಕೆ ನೀಡಬಹುದು ಎಂದು ಜಮೀರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT