ಚಿತ್ರದುರ್ಗ: ಮಾತು ಕಿಮ್ಮತ್ತು ಕಳೆದುಕೊಂಡಿದೆ. ಸಭೆ-ಸಮಾರಂಭ ತ್ರಾಸದಾಯಕ ಅನಿಸಿದೆ. ವಿಶ್ವಾಸ ನಷ್ಟ ಹಳ್ಳಿಯ ಅರಳಿಕಟ್ಟೆವರೆಗೂ ಇಳಿದಿದೆ. ಈಗ ಏನಿದ್ದರೂ ನೇರಾನೇರ. ಮತದಾರನೊಂದಿಗೆ ಖುದ್ದು `ವ್ಯವಹಾರ'.

ಪಕ್ಷ ರಾಜಕಾರಣದಲ್ಲಿ ತಾತ್ವಿಕತೆ ಕಡಿಮೆಯಾದ ಕಾರಣ ಭಾಷಣಗಳು ಬೆಲೆ ಕಳೆದುಕೊಂಡಿವೆ. ಮುಖಂಡರ ಪ್ರಭಾವ ಜಾತಿಗೋ ಪ್ರದೇಶಕ್ಕೋ ಸೀಮಿತ ಆಗತೊಡಗಿದೆ. ಚುನಾವಣೆ, ಕೊಡು-ಪಡೆ ಅನ್ನುವ ಮಟ್ಟಕ್ಕೆ ಇಳಿದಿದೆ ಎಂದು ಚುನಾವಣಾ ವ್ಯವಸ್ಥೆ ಹಾದಿತಪ್ಪಿರುವ ಕುರಿತು ಅಭ್ಯರ್ಥಿಯೊಬ್ಬರು ಬೇಸರ ತೋಡಿಕೊಂಡರು.

ಸಾರ್ವಜನಿಕ ಸಭೆ ಆಯೋಜಿಸಿದರೆ ಜನರನ್ನು ಸೇರಿಸಬೇಕು. ಪಕ್ಷ ಪ್ರೀತಿಯಿಂದ ಸಭೆಗೆ ಬರುವ ಪರಿಪಾಠ ಉಳಿದಿಲ್ಲ. ಅದಕ್ಕೂ ಹಣ ಬಿಚ್ಚಬೇಕು. ಅವರಿಗೆ ವಾಹನಗಳನ್ನು ವ್ಯವಸ್ಥೆ ಮಾಡಬೇಕು. ಊಟ-ತಿಂಡಿ ಒದಗಿಸಬೇಕು. ಇದೆಲ್ಲ ಕಷ್ಟದ ಕೆಲಸ. ಪ್ರಯೋಜನವೂ ಕನಿಷ್ಠ ಎಂಬುದು ಅವರ ವಿಶ್ಲೇಷಣೆ.

ಪ್ರಭಾವಿ ಮುಖಂಡರನ್ನು ಕ್ಷೇತ್ರಕ್ಕೆ ಕರೆಸಿ ಭಾಷಣ ಮಾಡಿಸಲು ಹಿಂದೆ ಪೈಪೋಟಿ ಇತ್ತು. ಇಂದಿರಾ ಗಾಂಧಿ ಅಂತಹವರು ಬಂದು ಕೈಬೀಸಿದರೆ ಅಲೆ ಏಳಬಹುದು ಎಂಬ ವಿಶ್ವಾಸ ಇತ್ತು. ಅವರನ್ನು ನೋಡಲು ಪಕ್ಷಭೇದ ಇಲ್ಲದೆ ಜನರು ಮುಗಿ ಬೀಳುತ್ತಿದ್ದರು. ಈಗ ಅಂತಹ ಸ್ಥಿತಿ ಇಲ್ಲ ಎಂದು ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿರುವ ಉಮೇದುವಾರರೊಬ್ಬರು ಅಭಿಪ್ರಾಯಪಟ್ಟರು.

ನಷ್ಟಕ್ಕೆ ಕಾರಣ ಜಾಗೃತಿಯೇ?: ಈ ಬದಲಾವಣೆಗೆ ಜನರಲ್ಲಿ ಮೂಡಿರುವ ಜಾಗೃತಿ ಕಾರಣವೋ ಅಥವಾ ರಾಜ್ಯ ಮತ್ತು ರಾಷ್ಟ್ರಮಟ್ಟದ ಮುಖಂಡರ ವರ್ಚಸ್ಸು ನಷ್ಟ ಆಗಿರುವುದರ ದ್ಯೋತಕವೋ ಎಂಬುದು ವಿಶ್ಲೇಷಣೆಗೆ ಒಳಪಡಬೇಕಿದೆ. ಈ ಸ್ಥಿತಿ ಜಿಲ್ಲೆಯಿಂದ ಜಿಲ್ಲೆಗೆ ಭಿನ್ನ ಆಗಿರಲೂ ಬಹುದು. ಭಾಷಣ ಬೆಲೆ ಕಳೆದುಕೊಂಡಿದೆ ಎಂಬ ಮಾತಿಗೆ ಚಿತ್ರದುರ್ಗ ಜಿಲ್ಲೆಯ ಬೇರೆ ಬೇರೆ ಪಕ್ಷದ ಮೂವರು ಅಭ್ಯರ್ಥಿಗಳು ಸಹಮತ ಸೂಚಿಸಿದರು.

ಸಭೆಗಳಿಗೆ ಜನರನ್ನು ಸೇರಿಸಲು, ಚುನಾವಣಾ ನೀತಿ ಸಂಹಿತೆಯ ಕಟ್ಟುನಿಟ್ಟು ಜಾರಿ ತುಸು ತೊಡಕಾಗಿ ಪರಿಣಮಿಸಿದ್ದರೂ ಅದೊಂದೇ ಕಾರಣ ಆಗಿರಲಾರದು. ನಿಯಮದಡಿ ತೂರುವ ಕಲೆ ರಾಜಕಾರಣಿಗಳಿಗೆ ರಕ್ತದಲ್ಲೇ ಕರಗತ. ಪ್ರಯೋಜನದ ಪ್ರಶ್ನೆಯೇ ಇಲ್ಲಿ ಮುಖ್ಯವಾಗಿರಬಹುದು. ಕಾಂಚಾಣದ ಝಣ ಝಣ ಮುಂದೆ ಮಾತು ಒಣ ಅನಿಸಿದೆ.

ಚುನಾವಣಾ ಸಭೆಗಳಲ್ಲಿ ಮಹಿಳಾ ಸ್ವಸಹಾಯ ಹಾಗೂ ಸ್ತ್ರೀಶಕ್ತಿ ಸಂಘಗಳ ಸಕ್ರಿಯ ಪಾಲ್ಗೊಳ್ಳುವಿಕೆ ಕಳೆದ ಎರಡು ಚುನಾವಣೆಗಳಲ್ಲಿ ತಾರಕಕ್ಕೆ ಏರಿತ್ತು. ಆಮಿಷ ಒಡ್ಡಿ ಸಭೆಗಳಿಗೆ ಕರೆತರುವ ಚಾಳಿ ಶುರುವಾಗಿತ್ತು. ಈ ಸಲ ಅದು ಕೂಡ ಕಾಣಿಸುತ್ತಿಲ್ಲ. ಪ್ರಮುಖರ ಸಭೆಗಳಲ್ಲಿಯೂ ಮಹಿಳೆಯರ ಭಾಗವಹಿಸುವಿಕೆ ಕಡಿಮೆ ಆಗಿದೆ. ಚುನಾವಣಾ ಆಯೋಗದ ನಿಗಾ ಇದಕ್ಕೆ ಕಾರಣ ಎಂಬುದು ಸ್ಥಳೀಯರ ಅಭಿಪ್ರಾಯ.

`ಹಿಂದೆ, ಹಳ್ಳಿಗೆ ಬರ‌್ತೀವಿ ಅಂತ ಹೇಳಿಕಳಿಸಿದರೆ ಜನ ಚಾವಡಿಗೋ ಅರಳಿಕಟ್ಟೆಗೋ ಬಂದು ಸೇರುತ್ತಿದ್ದರು. ಊರಿಗೆ ಆಗಬೇಕಿರುವ ಕೆಲಸಗಳ ಬಗ್ಗೆ ಪ್ರಸ್ತಾಪ ಆಗುತ್ತಿತ್ತು. ಸಹಾಯದ ಭರವಸೆಯೂ ಸ್ಥಳದಲ್ಲೇ ಪ್ರಕಟ ಆಗುತ್ತಿತ್ತು. ಈಗ ಯಾರ ಮಾತನ್ನು ಯಾರೂ ಕೇಳುವುದಿಲ್ಲ. ಹುಡುಗರು ಚಟುವಟಿಕೆ ನಡೆಸಿದ್ದಾರೆ. ಮತ ಬೇಕು ಎಂದರೆ, ಅವರ ಮಾತಿಗೆ ಕಿವಿಗೊಡಲೇಬೇಕು. ಪ್ರತಿ ಗ್ರಾಮಕ್ಕೂ ಹೋಗಬೇಕು. ಗ್ರಾಮದ ಎಲ್ಲ ಜಾತಿ ಮುಖಂಡರನ್ನೂ ಕಾಣಬೇಕು' ಎಂದು ಮೂರೋ ನಾಲ್ಕೋ ಚುನಾವಣೆ ಎದುರಿಸಿರುವ ಅಭ್ಯರ್ಥಿಯೊಬ್ಬರು ಬದಲಾದ ಎರಡು ಕಾಲಘಟ್ಟಗಳನ್ನು ಕಣ್ಣು ಮುಂದೆ ತಂದುಕೊಂಡರು.

ಕಾಡದ ಪಾಪ ಪ್ರಜ್ಞೆ: ಮತದಾರರ ಕೈಗೆ ನೇರವಾಗಿ ಹಣ ತಲುಪಿಸುವ ಚಾಕಚಕ್ಯತೆ ಉಳ್ಳವರಿಗೆ ಗೆಲುವಿನ ಅವಕಾಶಗಳು ಹೆಚ್ಚುತ್ತಿವೆ ಎಂಬ ಅಂಶವನ್ನು ಎಲ್ಲ ಪಕ್ಷಗಳ ಮುಖಂಡರೂ ಒಪ್ಪುತ್ತಾರೆ. ಹಣ ಪಡೆಯುವ ಬಗ್ಗೆ ಮತದಾರರಲ್ಲಿ ಪಾಪಪ್ರಜ್ಞೆ ಇಲ್ಲ. ಹಿರಿಯೂರು ಕ್ಷೇತ್ರ ವ್ಯಾಪ್ತಿಯ ಐಮಂಗಲ ಹೋಬಳಿಯ ಹಲವು ಗ್ರಾಮಗಳ ಜನರನ್ನು ಈ ಕುರಿತು ಕೆದಕಿದಾಗ `ಜನರ ದುಡ್ಡು, ಜನರಿಗೇ ಸೇರಲಿ ಬಿಡಿ' ಎಂಬ ಹಂಸ-ಕ್ಷೀರ ನ್ಯಾಯವನ್ನು ಪ್ರತಿಪಾದಿಸಿದರು.

ಕಳೆದ ಸಲ ಅಭ್ಯರ್ಥಿಗಳ ಕಡೆಯವರು ಹಣ ಹಂಚಿದರೇ ಎಂದು ಕೇಳಿದ್ದಕ್ಕೆ, `ಅದರಲ್ಲಿ ಗುಟ್ಟೇನು? ... ಅವರ ಸಂಬಂಧಿಕರೇ ಊರೂರಿಗೆ ಬಂದು ಬಹಿರಂಗವಾಗಿ ಎಣಿಸಿಕೊಟ್ಟು ಹೋಗಿದ್ದಾರೆ' ಎಂದು ಬುರುಜಿನರೊಪ್ಪದ ರಘು ಹೇಳಿದರು.

ಕೆಲವು ಗ್ರಾಮಗಳಲ್ಲಿ ಸಮುದಾಯ ಭವನ, ಶಾಲಾ ಕಾಂಪೌಂಡ್, ರಸ್ತೆ, ಚರಂಡಿ ಅಂತಹ ಕೆಲಸಗಳು ಅಪೂರ್ಣಗೊಂಡಿವೆ.

ಪೂರ್ಣಗೊಳಿಸಲು ಮತ್ತೊಮ್ಮೆ ಅವಕಾಶ ನೀಡುವಂತೆ ಶಾಸಕರು ಬೇಡಿಕೆ ಇಟ್ಟಿದ್ದಾರೆ. ಕಾಮಗಾರಿಗಳ ಆಮೆ ವೇಗ ಕುರಿತು ಅನುಮಾನ ವ್ಯಕ್ತಪಡಿಸುವ ಮತದಾರರು, ಮತ್ತೆ ಮತ ಪಡೆಯುವ ಹುನ್ನಾರಕ್ಕಾಗಿಯೇ ವಿಳಂಬ ಮಾಡಲಾಗಿದೆ ಎಂದು ಬಾಣ ಬಿಡುತ್ತಾರೆ. ಸೇರಿಗೆ ಸವ್ವಾಸೇರು ಎಂದರೆ ಇದೇ ಇರಬೇಕು.

ಸರ್ಕಾರಿ ಸೇವೆಯಿಂದ ರಾಜಕಾರಣಕ್ಕೆ
ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಚಳ್ಳಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದಿರುವ ಟಿ. ರಘುಮೂರ್ತಿ ಎಂಜಿನಿಯರಿಂಗ್ ಪದವೀಧರ. ಇದೇ ಕ್ಷೇತ್ರದ ಕಡಬನಕಟ್ಟೆ ಗ್ರಾಮದವರು. ಕೆ.ಆರ್.ಐ.ಡಿ.ಎಲ್‌ನಲ್ಲಿ ಉಪ ನಿರ್ದೇಶಕರಾಗಿದ್ದರು. ಸೇವಾವಧಿ ಇನ್ನೂ 13 ವರ್ಷ ಇರುವಾಗಲೇ ಸ್ವಯಂ ನಿವೃತ್ತಿ ಪಡೆದು ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಸರ್ಕಾರಿ ಕೆಲಸ ತೊರೆದು ರಾಜಕೀಯಕ್ಕೆ ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ಪ್ರವೃತ್ತಿ ಹಲವು ಅನುಮಾನಗಳನ್ನೂ ಹುಟ್ಟುಹಾಕಿದೆ.ರಾಜಕೀಯ ಸೆಳೆತ ಕುರಿತು ರಘುಮೂರ್ತಿ ಜತೆ ನಡೆಸಿದ ಕಿರುಸಂದರ್ಶನ ಇಲ್ಲಿದೆ.

ಸರ್ಕಾರಿ ಕೆಲಸ ಬಿಟ್ಟಿದ್ದು ಏಕೆ?
ನಮ್ಮದು ರಾಜಕೀಯ ಹಿನ್ನೆಲೆ ಕುಟುಂಬ. ತಂದೆ ತಿಪ್ಪಯ್ಯ ಮಂಡಲ್ ಪಂಚಾಯ್ತಿ ಅಧ್ಯಕ್ಷರಾಗಿದ್ದರು. ಸಹೋದರ ತಿಪ್ಪೇಸ್ವಾಮಿ ತಾಲ್ಲೂಕು ಪಂಚಾಯ್ತಿ ಸದಸ್ಯರಾಗಿದ್ದರು. ಈ ಕಾರಣಕ್ಕೆ ಸ್ಥಳೀಯರಿಂದ ಒತ್ತಡ ಬಂತು. ಜನರ ಜತೆ ಬೆರೆತು ಕೆಲಸ ಮಾಡುವ ಉದ್ದೇಶದಿಂದ ಸರ್ಕಾರಿ ಸೇವೆಗೆ ವಿದಾಯ ಹೇಳಿದೆ.

ಅಧಿಕಾರಿಗಳಾಗಿ ಗಂಟು ಮಾಡಿಕೊಂಡವರಿಗೆ ರಾಜಕೀಯ ಬಗ್ಗೆ ಮೋಹ ಮೂಡುತ್ತಿದೆ ಎಂಬ ಆರೋಪಗಳಿವೆ...
ಸೇವಾ ಅವಧಿಯಲ್ಲಿ ನಾನು ಯಾವುದೇ ಆರೋಪಕ್ಕೆ ಒಳಗಾಗಿಲ್ಲ. ಕರ್ತವ್ಯಲೋಪಕ್ಕಾಗಿ ಒಂದೇ ಒಂದು ನೋಟಿಸ್ ಪಡೆದಿಲ್ಲ. ನನ್ನ ಸೇವಾ ದಾಖಲೆ ಕಳಂಕರಹಿತ.

ಚುನಾವಣೆ ಎದುರಿಸುವುದು ಎಂದರೆ ಕೋಟಿಗಳ ಲೆಕ್ಕ... ಹಣ ಹೇಗೆ ಹೊಂದಿಸುವಿರಿ?
ಗೆಳೆಯರ ಗುಂಪು ಇದೆ. ಪ್ರೌಢಶಾಲೆಯಲ್ಲಿ ನನ್ನ ಸಹಪಾಠಿಯಾಗಿದ್ದ ಬಾಬು ರೆಡ್ಡಿ ಈಗ ಇಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ. ಅವರದು ವ್ಯಾಪಾರಸ್ಥರ ಕುಟುಂಬ. ಪಕ್ಷದಿಂದಲೂ ಸ್ವಲ್ಪ ಸಹಾಯ ಸಿಗಲಿದೆ.

ರಾಜಕೀಯ ಪ್ರವೇಶಿಸಿದ ಉದ್ದೇಶ ಏನು?
ಅಧಿಕಾರ ದಾಹದಿಂದ ಅಂತೂ ಅಲ್ಲ. ಈ ಭಾಗದಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು, ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂಬ ಬದ್ಧತೆಯೊಂದಿಗೆ ರಾಜಕೀಯಕ್ಕೆ ಬಂದಿದ್ದೇನೆ. ಮೂರು ವರ್ಷಗಳಿಂದ ಜನರ ಜತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ಕೆಲವು ಗ್ರಾಮಗಳಿಗೆ ಈಗಾಗಲೇ 10 ರಿಂದ 15 ಸಲ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಅರಿತಿದ್ದೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.