ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಕುರಿತ ತಪ್ಪು ಕಲ್ಪನೆಗಳ ಪ್ರಚಾರ!

Last Updated 24 ಜೂನ್ 2011, 19:30 IST
ಅಕ್ಷರ ಗಾತ್ರ

ಯುನೆಸ್ಕೊ ಪಾರಂಪರಿಕ ತಾಣಗಳ ಕುರಿತ ಚರ್ಚೆ ಕಾವೇರುತ್ತಿದೆ. ಅಂತೆಯೇ, ಪಟ್ಟಭದ್ರ ಹಿತಾಸಕ್ತಿಗಳು ಆಧಾರವಿಲ್ಲದ ಮಾಹಿತಿಗಳನ್ನು ಹಬ್ಬಿಸುವ ಅಭಿಯಾನವೂ ಗರಿಗೆದರುತ್ತಿದೆ. ಇವುಗಳ ಒಟ್ಟಾರೆ ಪರಿಣಾಮವಾಗಿ, ಸಾಮಾನ್ಯ ಜನರ ಮನದಲ್ಲಿ, ಯುನೆಸ್ಕೊ ಕಠಿಣ ಕಾನೂನನ್ನು ಜಾರಿಗೆ ತಂದು ನಮ್ಮೆಲ್ಲರ ಹಕ್ಕುಗಳನ್ನು ಕಸಿದು ಕೊಂಡು, ಬಲವಂತವಾಗಿ ನಮ್ಮ ನೆಲೆಗಳಿಂದ ಹೊರಹಾಕಿಸಿ ಬಿಡುತ್ತದೆಯೇ ಎಂಬ ಸಂದೇಹ ಮೂಡಿಸಿದೆ.

ಹಾಗಾಗಿ, ಇಂತಹ ಶುದ್ಧ ತಪ್ಪುಕಲ್ಪನೆಗಳನ್ನು ನೀಗಿಸಿ, ತಪ್ಪು ಮಾಹಿತಿ ನೀಡುವ ಅಭಿಯಾನದ ವಿರುದ್ಧ ಎಚ್ಚೆತ್ತುಕೊಳ್ಳುವಂತೆ ಮಾಡಲು ಸಂಬಂಧಿಸಿದ ಕಾನೂನುಗಳನ್ನು ಪರಿಚಯಿಸಿಕೊಳ್ಳುವುದು ಒಳ್ಳೆಯದು.

ಇದಕ್ಕಾಗಿ ಸಂವಿಧಾನದ ಕೆಲವು ಪರಿಚ್ಛೇದಗಳನ್ನು ತಿಳಿದುಕೊಳ್ಳಬೇಕು. ವಿಶ್ವ ಸಂಸ್ಥೆಯ ವಿಷಯ ನಮ್ಮ ಸಂವಿಧಾನದ ಯೂನಿಯನ್ ಪಟ್ಟಿಯಲ್ಲಿ ಇದೆ. ರಾಜ್ಯದ ಕಾರ‌್ಯನೀತಿಗಳಿಗೆ ನಿರ್ದೇಶಕ ತತ್ತ್ವದ ಅಡಿಯಲ್ಲಿ ಅನುಚ್ಛೇದ 48 ಎ ನಲ್ಲಿ  `ರಾಜ್ಯಗಳು ತಮ್ಮ ಪರಿಸರ, ಅರಣ್ಯಗಳು ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಲು ಅಗತ್ಯ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು~ ಎಂದು ಸ್ಪಷ್ಟವಾಗಿ ಹೇಳಿದೆ.

ಸಂವಿಧಾನದ ಪರಿಚ್ಛೇದವು ಪಶ್ಚಿಮಘಟ್ಟಗಳಂತಹ ಸೂಕ್ಷ್ಮ ಅರಣ್ಯಗಳನ್ನು ಸಂರಕ್ಷಿಸುವುದು ರಾಜ್ಯದ ಕರ್ತವ್ಯ ಎಂದೇ ನಿರ್ದೇಶಿಸಿದೆ. ಜೊತೆಗೆ, ನಾಲ್ಕು ಕೇಂದ್ರ ಕಾನೂನುಗಳು ಸಹ ಇವೆ. ಅವುಗಳೆಂದರೆ: 1927ರ ಭಾರತದ ಅರಣ್ಯ ಕಾಯ್ದೆ, 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1980ರ ಅರಣ್ಯ ಸಂರಕ್ಷಣಾ ಕಾಯ್ದೆ, ಮತ್ತು 2006ರ ಅರಣ್ಯ ಹಕ್ಕುಗಳ ಕಾಯ್ದೆ.

ಭಾರತದ ಅರಣ್ಯ ಕಾಯ್ದೆಯಡಿ ಜನರ ಕ್ಲೇಮುಗಳ ಸಮರ್ಪಕ ಇತ್ಯರ್ಥದ ನಂತರವೇ ಒಂದು ನೈಸರ್ಗಿಕ ಪ್ರದೇಶವನ್ನು ರಕ್ಷಿತ ಅರಣ್ಯ ಎಂದು ಘೋಷಿಸಲಾಗುತ್ತದೆ.  ಉದಾಹರಣೆಗೆ, 1963ರ ಕರ್ನಾಟಕ ಅರಣ್ಯ ಕಾಯ್ದೆ ಅಡಿಯಲ್ಲಿಯೂ ಅರಣ್ಯ ಎಂದು ಘೋಷಿಸಲಾಗಿದೆ. ಇವನ್ನು ರಾಜ್ಯ ಅರಣ್ಯ ಎಂದು ಗುರುತಿಸಲಾಗುತ್ತದೆ. ಕಾಯ್ದಿಟ್ಟ ಅರಣ್ಯ ಹಾಗೂ ರಾಜ್ಯ ಅರಣ್ಯಗಳು ಕಾನೂನಿನ ಅಡಿಯಲ್ಲಿ ಒಂದೇ ಸ್ಥಾನ ಪಡೆದಿರುತ್ತವೆ.

ಹೀಗೆ ಅರಣ್ಯಗಳೆಂದು ಅಧಿಸೂಚನೆ ಹೊರಡಿಸುವಾಗ ಜನರ ಅಗತ್ಯಗಳಾದ ಹುಲ್ಲುಗಾವಲು, ಪೈಸಾರಿ ಅಥವಾ ಗೋಮಾಳಗಳಿಗಾಗಿ ಸಾಕಷ್ಟು ಜಾಗವನ್ನು ಮೀಸಲಿಟ್ಟೇ ಅಧಿಸೂಚನೆ ಹೊರಡಿಸಲಾಗಿದೆ. ಇಷ್ಟಾದರೂ, ಇಂದು ಇಂತಹ ಜಾಗಗಳು ಒತ್ತುವರಿಗೊಳಗಾಗಿ ಸಾಗುವಳಿ ನಡೆಯುತ್ತಿದೆ.

ಅರಣ್ಯದಲ್ಲಿನ ಜನರ ಕ್ಲೇಮುಗಳನ್ನು ಇತ್ಯರ್ಥಪಡಿಸುವಾಗ ಅರಣ್ಯವಾಸಿಗಳ ಅಂಗೀಕೃತ ಹಕ್ಕುಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿದ್ದು, ಅವನ್ನು ಅಧಿಸೂಚನೆಯಲ್ಲಿ ದಾಖಲಿಸಲಾಗಿದೆ. ಇವು ಕೃಷಿ ಭೂಮಿ, ಗುರುತಿಸಲಾದ ಹಾದಿಯ ಹಕ್ಕು, ನೀರಿನ ಮೇಲಿನ ಹಕ್ಕುಗಳನ್ನು ಒಳಗೊಂಡಿದೆ. ಅರಣ್ಯದ ಅಧಿಸೂಚನೆಯಲ್ಲಿ ನೀಡಲಾಗಿರುವ ಈ ಎಲ್ಲ ಹಕ್ಕುಗಳನ್ನು, ಯುನೆಸ್ಕೊ ಮಾನ್ಯತೆ ಮೂಲಕ ತಡೆಯಲು ಸಾಧ್ಯವೇ ಇಲ್ಲ.
 
ಸದರಿ ಹಕ್ಕುಗಳು ಮುಂದುವರೆಯುತ್ತವೆ. ಕೆಲವು ಕಾಯ್ದಿಟ್ಟ ಅರಣ್ಯಗಳನ್ನು ವನ್ಯಜೀವಿ ಕಾಯ್ದೆ ಅನುಸಾರ ವನ್ಯಜೀವಿ ಧಾಮ ಅಥವಾ ರಾಷ್ಟ್ರೀಯ ಉದ್ಯಾನ ಎಂದು ಘೋಷಿಸಲಾಗಿದೆ. ಇವುಗಳಲ್ಲಿಯೂ ಸಾವಿರಾರು ಜನರು ದಶಕಗಳಿಂದ ಜೀವಿಸುತ್ತಿದ್ದಾರೆ.

ಇದು ಅವರ ಕಾನೂನು ಬದ್ಧ ಹಕ್ಕು. ಹಾಗಾಗಿ, ಚಾಲ್ತಿಯಲ್ಲಿರುವ ಕಾನೂನಿನಲ್ಲಿ, ಇಂತಹ ಯಾವುದೇ ಸ್ಥಳಗಳಲ್ಲಿ ಜೀವಿಸುತ್ತಿರುವ ಜನರನ್ನು ಏಕಪಕ್ಷೀಯವಾಗಿ ಒಕ್ಕಲೆಬ್ಬಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಅಲ್ಲದೆ, ಯುನೆಸ್ಕೊ ಅಥವಾ ಬೇರೆ ಯಾವುದೇ ಅಂತರರಾಷ್ಟ್ರೀಯ ಸಂಸ್ಥೆ ಯಾವುದೇ ಭೂಮಿಯ ಬಗ್ಗೆ ಅಧಿಸೂಚನೆ ಹೊರಡಿಸಲು ಸಾಧ್ಯವೇ ಇಲ್ಲ. ಕೇವಲ ರಾಜ್ಯ ಸರ್ಕಾರಕ್ಕೆ ಮಾತ್ರ ಅಧಿಸೂಚನೆ ಹೊರಡಿಸುವ ಅಧಿಕಾರವಿದೆ. ಪಟ್ಟಭದ್ರ ಹಿತಾಸಕ್ತಿಗಳು ಸ್ಥಳೀಯ ಜನರ ಹಕ್ಕುಗಳಿಗೆ ತೊಂದರೆಯಾಗುತ್ತದೆ ಎಂದು ಹುಟ್ಟಿಸುತ್ತಿರುವ ಭಯಕ್ಕೆ ಯಾವುದೇ ಆಧಾರಗಳಿಲ್ಲ.

ರಾಜ್ಯದ ಅರಣ್ಯ ಸಚಿವರು ಪ್ರವಾಸೋದ್ಯಮ ಹೆಚ್ಚಾಗಿ ನಮ್ಮ ಅರಣ್ಯಗಳ ಮೇಲೆ ಒತ್ತಡ ಹೆಚ್ಚುತ್ತದೆ ಎಂದು ದನಿಯೆತ್ತಿದ್ದಾರೆ. ಅನೇಕ ರೆಸಾರ್ಟ್ ಮಾಲೀಕರು ಪರಿಸರ ಪ್ರವಾಸೋದ್ಯಮದ (ಇಕೋ ಟೂರಿಸಮ್) ಹೆಸರಿನಲ್ಲಿ ವಾಣಿಜ್ಯ ಪ್ರವಾಸೋದ್ಯಮದ ಪ್ರವರ್ತಕರಾಗಿದ್ದಾರೆ. ಅವೇನೇ ಇರಲಿ, ಪ್ರವಾಸೋದ್ಯಮವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ವನ್ಯಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ಅವಕಾಶಗಳಿವೆ.

ಇವು ಯುನೆಸ್ಕೋ ಮಾನ್ಯತೆಯ ನೈಸರ್ಗಿಕ ಪಾರಂಪರಿಕ ತಾಣ ಎಂದು ಘೋಷಿಸಿದರೂ ಜಾರಿಯಲ್ಲಿರುತ್ತವೆ. ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮತಿಯಿಲ್ಲದೆ ಯಾವುದೇ ರಾಷ್ಟ್ರೀಯ ಉದ್ಯಾನ ಅಥವಾ ವನ್ಯಜೀವಿಧಾಮಗಳಲ್ಲಿ ಪ್ರವಾಸೋದ್ಯಮ ಲಾಡ್ಜ್‌ಗಳನ್ನು ನಿರ್ಮಿಸಲು ಸಾಧ್ಯವಿಲ್ಲ. ಅಲ್ಲದೆ, ಸೂಕ್ಷ್ಮ ಪರಿಸರ ಪ್ರದೇಶಗಳನ್ನು ಗುರುತಿಸುವ ಮೂಲಕ ಅಣಬೆಗಳಂತೆ ಏಳುತ್ತಿರುವ ರೆಸಾರ್ಟ್‌ಗಳಿಗೆ ಕಡಿವಾಣ ಹಾಕಬಹುದು.

ದೂರದರ್ಶಿತ್ವ ಹೊಂದಿದ್ದ ಹಿಂದಿನ ರಾಜಕಾರಣಿಗಳ ಸೃಜನಶೀಲ ಕಾರ್ಯಗಳಿಂದ ದೇಶದ ಅರಣ್ಯ ಸಂರಕ್ಷಣೆಗೆ ಅಗತ್ಯವಾದ ಕಾನೂನಿನ ಚೌಕಟ್ಟು ಒದಗಿದೆ. ಇಂತಹ ಅನೇಕ ಕಾನೂನುಗಳು ಎಪ್ಪತ್ತು ಎಂಬತ್ತರ ದಶಕದಿಂದ ಜಾರಿಯಲ್ಲಿವೆ.

ಇಂದಿನ ರಾಜಕಾರಣಿಗಳು ದುರದೃಷ್ಟವಾಶಾತ್ ಈ ಕಾನೂನುಗಳನ್ನು ಮತ್ತು ನೀತಿಗಳನ್ನು ದುರ್ಬಲಗೊಳಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದು, ಇದಕ್ಕೆ ಅಭಿವೃದ್ಧಿಗೆ ಅಡಚಣೆ ಎಂಬ ಕಾರಣವನ್ನು ನೀಡುತ್ತಿದ್ದಾರೆ. ಇದು ಎಷ್ಟು ಪೊಳ್ಳು ಎಂಬುದಕ್ಕೆ ಎರಡು ಉದಾಹರಣೆ ನೀಡಬಹುದು.

ಕುದುರೆಮುಖ ಕಬ್ಬಿಣ ಅದಿರು ಕಂಪನಿಯನ್ನು ಮುಚ್ಚಲು ಮೊಕದ್ದಮೆ ಹೂಡಿದಾಗ ಆ ಪ್ರದೇಶದ ಆರ್ಥಿಕ ವ್ಯವಸ್ಥೆ ಕುಸಿದು ಬೀಳುತ್ತದೆ ಎಂಬ ವಾದವನ್ನು ಮಂಡಿಸಲಾಗಿತ್ತು. ಆದರೆ ಅಂತಹದ್ದೇನು ಆಗಲಿಲ್ಲ! ಇದಕ್ಕೂ ಮುಂಚೆ 1996 ರಲ್ಲಿ, ಸುಪ್ರೀಂ ಕೋರ್ಟ್ ಈಶಾನ್ಯ ರಾಜ್ಯಗಳಲ್ಲಿ ಟಿಂಬರ್ ಉದ್ದಿಮೆಗಳನ್ನು ಸಂಪೂರ್ಣವಾಗಿ ಮುಚ್ಚಲು ಆದೇಶ ಕೊಟ್ಟಾಗ, ಕೆಲವು ರಾಜ್ಯಗಳು ನಮ್ಮ ರಾಷ್ಟ್ರದಿಂದ ಸಿಡಿದು ಬೇರೆಯೇ ರಾಷ್ಟ್ರವಾಗಿಬಿಡುತ್ತವೆ ಎಂದು ಹುಯಿಲೆಬ್ಬಿಸಲಾಗಿತ್ತು. ಅಂತಹದೇನು ಆಗಲಿಲ್ಲ.

ಜನರ ಆಶೋತ್ತರಗಳನ್ನು ಈಡೇರಿಸಬೇಕಾದಾಗ, ನಮ್ಮ ಚುನಾಯಿತ ಪ್ರತಿನಿಧಿಗಳು ಪಶ್ಚಿಮಘಟ್ಟಗಳಂತಹ ಪ್ರದೇಶಗಳನ್ನು ಸಂರಕ್ಷಿಸಲು ವಿಜ್ಞಾನ ನೀಡಿರುವ ಸಲಹೆಗಳನ್ನು ಪರಿಗಣಿಸಬೇಕು. ನಾವು ಎಷ್ಟು ಬೇಗ ಪಶ್ಚಿಮಘಟ್ಟಗಳ ಸಂರಕ್ಷಣೆ ಮಾಡಿದರೆ, ನಮ್ಮ ಕೃಷಿ, ನೀರಿನ ರಕ್ಷಣೆ ಹಾಗೂ ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ತಡೆಯುವಲ್ಲಿ ಸಹಕಾರಿಯಾಗುತ್ತದೆ.

(ಲೇಖಕರು ವೈಲ್ಡ್‌ಲೈಫ್ ಫಸ್ಟ್‌ನ ಟ್ರಸ್ಟಿ ಮತ್ತು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಮಾಜಿ ಸದಸ್ಯರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT