ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಶಿಷ್ಯ ಇನ್ನಿಲ್ಲ

Last Updated 30 ಮೇ 2016, 19:51 IST
ಅಕ್ಷರ ಗಾತ್ರ

ಮೈಸೂರು: ಅನಾರೋಗ್ಯದಿಂದ ಬಳಲುತ್ತಿದ್ದ ಸಾಹಿತಿ ಡಾ.ದೇ.ಜವರೇಗೌಡ (98) ಅವರು ಇಲ್ಲಿನ ಜಯದೇವ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ 6.30ಕ್ಕೆ ನಿಧನರಾದರು.

ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಜೆ.ಶಶಿಧರಪ್ರಸಾದ್‌ ಹಾಗೂ ಅಮೆರಿಕದಲ್ಲಿ ನೆಲೆಸಿರುವ ಪುತ್ರಿ ಜೆ.ಶಶಿಕಲಾ ಅವರನ್ನು ದೇಜಗೌ ಅಗಲಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಇಲ್ಲಿನ ಜಯಲಕ್ಷ್ಮಿಪುರಂನ ಚಂದ್ರಕಲಾ ಆಸ್ಪತ್ರೆಯಲ್ಲಿ ಮೂರು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಮೇ 28ರಂದು ಹೃದಯ ಸ್ತಂಭನದಿಂದ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರದಿಂದ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಚೆಕ್ಕೆರೆಯಲ್ಲಿ 6.7.1918ರಲ್ಲಿ ಜನಿಸಿದ್ದ ಅವರು, ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪೂರೈಸಿದರು. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ ಪದವಿ ಪಡೆದರು. ಸಹಾಯಕ ಪ್ರಾಧ್ಯಾಪಕರಾಗಿ, ಮೈಸೂರು ವಿ.ವಿ ಪರೀಕ್ಷಾಧಿಕಾರಿಯಾಗಿ, ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದರು. ನಂತರ ಮೈಸೂರು ವಿ.ವಿ ಕನ್ನಡ ಅಧ್ಯಯನ ಸಂಸ್ಥೆಯ ಮೊದಲ ನಿರ್ದೇಶಕರಾದರು. ಮೈಸೂರು ವಿ.ವಿ ಸಿಂಡಿಕೇಟ್‌ ಸದಸ್ಯರಾಗಿದ್ದ ಅವರು, 1969ರಲ್ಲಿ ಮೈಸೂರು ವಿ.ವಿ ಕುಲಪತಿಯಾದರು.

ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಹಾಗೂ ಕುವೆಂಪು ವಿದ್ಯಾ ಪರಿಷತ್‌ ಆರಂಭಿಸಿ ಕುವೆಂಪು ಹೆಸರಿನಲ್ಲಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆ ನಡೆಸುತ್ತಿದ್ದರು. ರಾಜ್ಯೋತ್ಸವ, ಹಂಪಿ ಕನ್ನಡ ವಿ.ವಿ ನಾಡೋಜ, ಬಸವ ರಾಷ್ಟ್ರೀಯ ಪುರಸ್ಕಾರ, ನೃಪತುಂಗ ಪ್ರಶಸ್ತಿ, ಕರ್ನಾಟಕ ರತ್ನ, ಪಂಪ, ಅಲ್ಲಮಶ್ರೀ, ಕನಕಶ್ರೀ, ಪದ್ಮಶ್ರೀ ಮೊದಲಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ದೇಜಗೌ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ 2.30ಕ್ಕೆ  ಗಂಟೆಗೆ ಜಯಲಕ್ಷ್ಮಿಪುರಂನ ಕುವೆಂಪು ವಿದ್ಯಾವರ್ಧಕ ಟ್ರಸ್ಟಿನ ಆವರಣದಲ್ಲಿ ನಡೆಯಲಿದೆ.
*
ಪ್ರಮುಖ ಕೃತಿಗಳು
ಕನ್ನಡದಲ್ಲಿ ಸುಮಾರು 40 ಜೀವನ ಚರಿತ್ರೆಗಳನ್ನು ರಚಿಸಿದ್ದು ದೇಜಗೌ ದಾಖಲೆ. ಅವರ ಭಾಷಣಗಳೇ 4 ಸಂಪುಟಗಳು; ಕುಲಪತಿ ಭಾಷಣಗಳು ಸಂಪುಟ–1, ಕುಲಪತಿ ಭಾಷಣ ಸಂಪುಟ 2, ದೇಜಗೌ ಭಾಷಣ ಸಂಪುಟ–1, ದೇಜಗೌ ಭಾಷಣ ಸಂಪುಟ–2 ಸೇರಿವೆ. ಹೋರಾಟದ ಬದುಕು ಭಾಗ– 1 ಹಾಗೂ ಭಾಗ– 2 ಆತ್ಮಕಥೆಗಳು ಪ್ರಕಟವಾಗಿವೆ. ಜತೆಗೆ, ‘ನೆನಪಿನ ಬುತ್ತಿ’ ಕೃತಿ ಕೂಡಾ ಪ್ರಕಟವಾಗಿದೆ. ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದ ಅವಧಿಯಲ್ಲಿ ಕನ್ನಡ ವಿಶ್ವಕೋಶ ಹಾಗೂ ವಿಷಯ ವಿಶ್ವಕೋಶದ 14 ಸಂಪುಟ ಹೊರತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT