ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿಕೂರು: ಸಂಪರ್ಕ ರಸ್ತೆಯೇ ಅಸಮರ್ಪಕ!

Last Updated 15 ಜೂನ್ 2014, 19:30 IST
ಅಕ್ಷರ ಗಾತ್ರ

ಪಡುಬಿದ್ರಿ (ಉಡುಪಿ ಜಿಲ್ಲೆ): ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಅವರ ಕಿರಿಯ ಸಹೋದರ ಡಿ.ವಿ.ಸುರೇಶ್‌ ಸ್ಟೇಷನ್‌ ಮಾಸ್ಟರ್‌ ಆಗಿ ಕಾರ್ಯ­ನಿರ್ವಹಿಸುತ್ತಿರುವ ಕಾರಣಕ್ಕೆ ನಂದಿಕೂರು ರೈಲು ನಿಲ್ದಾಣ ರಾಷ್ಟ್ರ ಮಟ್ಟದಲ್ಲಿ ಈಗಾಗಲೇ ಗಮನ ಸೆಳೆದಿದೆ. ಆದರೆ ಈ ನಿಲ್ದಾಣಕ್ಕೆ ಸೂಕ್ತ ಸಂಪರ್ಕ ರಸ್ತೆ ಇಲ್ಲದೆ ನಿಲ್ದಾಣ ಜನರಿಂದ ದೂರವೇ ಉಳಿಯುವಂತಾಗಿದೆ.

ನಂದಿಕೂರು ರೈಲು ನಿಲ್ದಾಣ ಸುಸಜ್ಜಿತ­ವಾಗಿಯೇ ಇದೆ. ಆದರೆ ರೈಲು ನಿಲ್ದಾಣಕ್ಕೆ ಬರಬೇಕಾದರೆ ರಾಜ್ಯ ಹೆದ್ದಾರಿಯಿಂದ ಸುಮಾರು 4 ಕಿ.ಮೀ. ಕ್ರಮಿಸಬೇಕು. ಇದರಿಂದಾಗಿ ಪ್ರಯಾಣಿಕ­ರಿಗೆ ಬಸ್ಸಿಗಿಂತ ರೈಲು ಪ್ರಯಾಣವೇ ದುಬಾರಿ ಎನ್ನಿಸಿ­ಬಿಟ್ಟಿದೆ.

ಯುಪಿಸಿಎಲ್‌ ವಿದ್ಯುತ್ ಸ್ಥಾವರಕ್ಕೆ ಕಲ್ಲಿದ್ದಲು ಪೂರೈಸುವ ಮುಖ್ಯ ಉದ್ದೇಶದೊಂದಿಗೆ ಈ ನಿಲ್ದಾಣ­ವನ್ನು 4 ವರ್ಷದ ಹಿಂದೆ ನಿರ್ಮಿಸ­ಲಾಗಿತ್ತು. ಬಳಿಕ ಸ್ಥಳೀ­ಯರ ಬೇಡಿಕೆಗೆ ಅನುಗುಣ­ವಾಗಿ ರೈಲು ನಿಲುಗಡೆಯೂ ಆರಂಭವಾ­ಯಿತು. ನಾಲ್ಕು ವರ್ಷ ಕಳೆದರೂ ನಿಲ್ದಾಣಕ್ಕೆ ಸಂಪರ್ಕ ರಸ್ತೆಯೇ ಸಮರ್ಪಕ­ವಾಗಿ ಇಲ್ಲ. ಹೀಗಾಗಿ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇದೆ.

ಇದೀಗ ರೈಲು ನಿಲ್ದಾಣಕ್ಕೆ ಬರುವ­ವರು ಅಡ್ವೆ ಮೂಲಕ ಫಲಿಮಾರು ಆಗಿ ರೈಲು ನಿಲ್ದಾಣಕ್ಕೆ ತೆರಳ­ಬೇಕು. ರಿಕ್ಷಾದಲ್ಲಿ ಇಲ್ಲಿಗೆ ದುಬಾರಿ ಬಾಡಿಗೆ ತೆತ್ತು ರೈಲಿ­ನಲ್ಲಿ ಪ್ರಯಾಣಿಸುವ ಬದಲು ಬಸ್ಸಿನ­ಲ್ಲಿಯೇ ಪ್ರಯಾಣಿಸುವುದು ಲೇಸು ಎಂಬುವುದು ಹಲವರ ಅನಿಸಿಕೆ.

ನೇರ ರಸ್ತೆ ನಿರ್ಮಿಸಿದರೆ ಕೇವಲ ಒಂದು ಕಿ.ಮೀ.­ನಲ್ಲೇ ನಿಲ್ದಾಣ ತಲುಪಬಹುದು. ಕೊಂಕಣ ರೈಲ್ವೆ ನಿಗಮ ಇದಕ್ಕೆ ಬೇಕಾದ ಜಾಗವನ್ನು ಈಗಾಗಲೇ ಸ್ವಾಧೀನ ಪಡಿಸಿಕೊಂಡಿದೆ. ಆದರೆ, ರೈಲ್ವೆ ಇಲಾಖೆ ಮಾತ್ರ ಈ ಜಾಗದಲ್ಲಿ ರಸ್ತೆ ನಿರ್ಮಿಸಲು ಮೀನ ಮೇಷ ಎಣಿಸುತ್ತಿದೆ.

ಇದೀಗ ಇಲ್ಲಿ ಮಡಗಾಂವ್-–ಮಂಗಳೂರು ಪ್ಯಾಸೆಂಜರ್‌, ಭಟ್ಕಳ–ಮಂಗಳೂರು ಇಂಟರ್‌ ಸಿಟಿ ರೈಲು ನಿಲುಗಡೆ ಇದೆ. ಆದರೆ ಪ್ರಯಾಣಿಕರು ಸುತ್ತು ಬಳಸಿ ಬರಬೇಕಾಗಿದ್ದರಿಂದ ಉಡುಪಿಗೆ ಪ್ರಯಾಣಿಸಿ ಅಲ್ಲಿಂದ ರೈಲಿನಲ್ಲಿ ಹೋಗುವ ಪರಿಪಾಠ ಮಾಡಿಕೊಂಡಿದ್ದಾರೆ.

ಕುದುರೆಮುಖ–-ಪಡುಬಿದ್ರಿ ರಾಜ್ಯ ಹೆದ್ದಾರಿಯ ನಂದಿಕೂರು ರೈಲ್ವೆ ಸೇತುವೆ ಬಳಿಯಿಂದ ನೇರ ರೈಲು ನಿಲ್ದಾಣಕ್ಕೆ ರಸ್ತೆ ಸಂಪರ್ಕ ಆದಲ್ಲಿ ಬಹುತೇಕ ಪ್ರಯಾಣಿಕರಿಗೆ ಲಾಭವಾಗಲಿದೆ. ಪಡುಬಿದ್ರಿ, ಮುದರಂಗಡಿ, ಶಿರ್ವ, ಎರ್ಮಾಳು, ಹೆಜಮಾಡಿ, ನಿಟ್ಟೆ, ಸಾಂತೂರು ಕೊಪ್ಲ, ಕಾರ್ಕಳ, ಬೆಳ್ಮಣ್ ಪ್ರದೇಶದ ಸಾಕಷ್ಟು ಮಂದಿ ರೈಲಿಗಾಗಿ ಇದೀಗ ಉಡುಪಿಗೆ ಪ್ರಯಾಣಿಸಬೇಕು. ನಂದಿಕೂರಿಗೆ ನೇರ ಸಂಪರ್ಕ ರಸ್ತೆ ಮಾಡಿದಲ್ಲಿ ಇಲ್ಲಿನ ಪ್ರಯಾಣಿಕರಿಗೆ ಅನುಕೂಲ­ವಾಗು­ತ್ತದೆ ಎಂದು ನಂದಿಕೂರು ಜನಜಾಗೃತಿ ಸಮಿತಿಯ ಕಾರ್ಯದರ್ಶಿ ಜಯಂತ್ ಕುಮಾರ್ ಹೇಳುತ್ತಾರೆ.

ರೈಲ್ವೆ ಸಚಿವರ ಸಹೋದರ ಇದ್ದಾರೆಂಬ ಕಾರಣಕ್ಕೆ ರಾತ್ರಿ ಬೆಳಗಾಗುವುದರಲ್ಲಿ ಸುದ್ದಿಯಾದ ನಂದಿಕೂರು ನಿಲ್ದಾಣ, ರೈಲ್ವೆ ಸಚಿವರ ನೇರ ಪ್ರಭಾವದಿಂದ ಸಂಪರ್ಕ ರಸ್ತೆ ನಿರ್ಮಾಣ­ವಾಗುವುದನ್ನು ಇದೀಗ ಎದುರು ನೋಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT