ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಧೋಳ ಬಾಯ್ಲರ್ ಸ್ಫೋಟ: ಜಿಲ್ಲಾಡಳಿತದಿಂದ ತನಿಖಾ ತಂಡ ರಚನೆ

24 ಗಂಟೆಯೊಳಗೆ ಪ್ರಾಥಮಿಕ ವರದಿ ನೀಡಲು ಸೂಚನೆ
Last Updated 17 ಡಿಸೆಂಬರ್ 2018, 13:14 IST
ಅಕ್ಷರ ಗಾತ್ರ

ಬಾಗಲಕೋಟೆ: ಮುಧೋಳದ ನಿರಾಣಿ ಶುಗರ್ಸ್‌ನ ಡಿಸ್ಟಿಲರಿ ಘಟಕದ ಎಫ್ಲ್ಯುಯೆಂಟ್ ಟ್ರೀಟ್‌ಮೆಂಟ್‌ ಪ್ಲಾಂಟ್‌ನಲ್ಲಿ ನಡೆದ ಬಾಯ್ಲರ್ ಸ್ಫೋಟ ಘಟನೆಯ ತನಿಖೆಗೆ ಬೆಳಗಾವಿಯ ಬಾಯ್ಲರ್‌ಗಳ ಉಪನಿರ್ದೇಶಕ ರಮೇಶ ರಾಥೋಡ ನೇತೃತ್ವದಲ್ಲಿ ಅಧಿಕಾರಿಗಳ ತಂಡವನ್ನು ಜಿಲ್ಲಾಡಳಿತ ನೇಮಿಸಿದೆ.

ತಂಡದಲ್ಲಿ ಜಮಖಂಡಿ ಡಿವೈಎಸ್‌ಪಿ, ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತರು ಹಾಗೂ ಕಾರ್ಖಾನೆಗಳ ವಿಭಾಗದ ಸಹಾಯಕ ನಿರ್ದೇಶಕರು ಇದ್ದಾರೆ. ತನಿಖೆಯ ಪ್ರಾಥಮಿಕ ವರದಿಯನ್ನು 24 ಗಂಟೆಗಳಲ್ಲಿ ನೀಡುವಂತೆ ಸೂಚನೆ ನೀಡಲಾಗಿದೆ.

ಕಾರ್ಖಾನೆ ಹಾಗೂ ಬಾಯ್ಲರ್‌ಗಳ ಇಲಾಖೆ ನಿರ್ದೇಶಕ ಜಿ.ಬಿ.ರಾಜಗೋಪಾಲ್ ಮುಧೋಳದಲ್ಲಿಯೇ ಇದ್ದು, ತನಿಖೆಯ ಮೇಲ್ವಿಚಾರಣೆ ವಹಿಸಿದ್ದಾರೆ.

’ಮಿಥೇನ್ ಅನಿಲದೊಂದಿಗೆ ಆಮ್ಲಜನಕ ಸಂಪರ್ಕಕ್ಕೆ ಬಂದ ಕಾರಣ ಸ್ಫೋಟ ಸಂಭವಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ತನಿಖೆ ಪೂರ್ಣಗೊಂಡ ನಂತರ ವಾಸ್ತವಾಂಶ ತಿಳಿಯಲಿದೆ’ ಎಂದು ರಾಜಗೋಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಫೋಟದಿಂದ ಕುಸಿದುಬಿದ್ದಿದ್ದ ಘಟಕದ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಸೋಮವಾರ ಸಂಜೆ ಮುಕ್ತಾಯಗೊಂಡಿತು. ಆದರೊಳಗೆ ಯಾರೊಬ್ಬರೂ ಪತ್ತೆಯಾಗಿಲ್ಲ. ಆದರೆ ಘಟಕದ ಆವರಣದೊಳಗಿನ ತ್ಯಾಜ್ಯದ ಹೊಂಡದಲ್ಲಿ ಚಪ್ಪಲಿಗಳು ತೇಲುತ್ತಿರುವುದನ್ನು ಕಂಡು ಅಗ್ನಿಶಾಮಕ ದಳದ ಸಿಬ್ಬಂದಿ ಅದರೊಳಗಿನ ನೀರು ಖಾಲಿ ಮಾಡಿ ತಪಾಸಣೆ ಮಾಡಿದರು. ಬಾಗಲಕೋಟೆಯ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಗಾಯಾಳುಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

ಪರೀಕ್ಷೆ ವೇಳೆ ಅವಘಡ?:

‘ಮೊದಲು ನಿತ್ಯ ಸಾವಿರ ಕಿಲೋ ಲೀಟರ್ (ಕೆಎಲ್‌ಪಿಡಿ) ಇದ್ದ ಬಾಯ್ಲರ್‌ನ ಸಾಮರ್ಥ್ಯವನ್ನು ಎರಡು ಸಾವಿರ ಕಿಲೋ ಲೀಟರ್‌ಗೆ ಹೆಚ್ಚಿಸಲಾಗಿದೆ. ಅದರ ಪ್ರಾಯೋಗಿಕ ಪರೀಕ್ಷೆ ವೇಳೆ ಈ ಅವಘಡ ಸಂಭವಿಸಿತು’ ಎಂದು ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಟ್ರೈನಿ ಆಪರೇಟರ್ ಸತೀಶ ಗನಿ ಹೇಳಿದರು.

‘ನಾನು ಹೊರಗೆ ತ್ಯಾಜ್ಯ ನೀರಿನ ತೊಟ್ಟಿಯ ಬಳಿ ಕೆಲಸ ಮಾಡುತ್ತಿದ್ದೆ. ದೊಡ್ಡ ಸದ್ದಿನೊಂದಿಗೆ ಸ್ಫೋಟ ಸಂಭವಿಸಿತು. ಏನಾಯಿತು ಎಂದು ನೋಡುವುದರಲ್ಲಿ ತಲೆ, ಕತ್ತು, ಬೆನ್ನಿಗೆ ಇಟ್ಟಿಗೆ ಹಾಗೂ ಸಿಮೆಂಟ್‌ನ ಉಂಡೆಗಳು ಬಡಿದವು. ಕೆಳಗೆ ಬಿದ್ದಾಗ ಅಸಾಧ್ಯ ನೋವು ಕಾಣಿಸಿಕೊಂಡಿತು’ ಎಂದು ಸತೀಶ ಘಟನೆ ವಿವರಿಸಿದರು.

ಸಚಿವದ್ವಯರ ಭೇಟಿ:

ಘಟನೆಯ ಸ್ಥಳಕ್ಕೆ ಕಾರ್ಮಿಕ ಸಚಿವ ವೆಂಕಟರಮಣಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಭೇಟಿ ನೀಡಿದ್ದರು. ಮೃತ ಕಾರ್ಮಿಕರ ಕುಟುಂಬಕ್ಕೆ ಈ ವೇಳೆ ಶಿವಾನಂದ ಪಾಟೀಲ ವೈಯಕ್ತಿಕವಾಗಿ ತಲಾ ₹2.5 ಲಕ್ಷ ಪರಿಹಾರ ಘೋಷಣೆ ಮಾಡಿದರು. ನಂತರ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

‘ಮೃತರ ಕುಟುಂಬಕ್ಕೆ ಸರ್ಕಾರ ಕೂಡ ₹5 ಲಕ್ಷ ಪರಿಹಾರ ನೀಡಿದೆ. ಜೀವ ವಿಮೆಯಿಂದ ಅವರಿಗೆ ತಲಾ ₹8 ಲಕ್ಷದವರೆಗೆ ಪರಿಹಾರ ದೊರೆಯಲಿದೆ. ಈಗ ಕೊಟ್ಟಿರುವ ಪರಿಹಾರ ಮೊತ್ತ ₹5 ಲಕ್ಷದ ಜೊತೆಗೆ ಇನ್ನೂ 5 ಲಕ್ಷ ಸೇರಿಸಿ ಕೊಡುವಂತೆ ಕಾರ್ಖಾನೆಯ ಮಾಲೀಕ ಮುರುಗೇಶ ನಿರಾಣಿ ಅವರಿಗೆ ಹೇಳಿರುವೆ’ ಎಂದು ವೆಂಕಟರಮಣಪ್ಪ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT