ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ ಮತ್ತೊಂದು ಚಿರತೆ ಸೆರೆ

Last Updated 19 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮೈಸೂರು:  ತಾಲ್ಲೂಕಿನ ಚಿಕ್ಕನಹಳ್ಳಿ ರಕ್ಷಿತ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಅರಸಿನಕೆರೆ ಬಳಿ ಭಾನುವಾರ ಚಿರತೆಯೊಂದು ಸೆರೆ ಸಿಕ್ಕಿದ್ದ ಬೆನ್ನ ಹಿಂದೆಯೇ ನಗರದ ಬಿಇಎಂಎಲ್ ಕಾರ್ಖಾನೆ ಆವರಣದಲ್ಲಿ ಸೋಮವಾರ ಮತ್ತೊಂದು ಚಿರತೆಯನ್ನು ಸೆರೆ ಹಿಡಿಯಲಾಯಿತು.

ಬಿಇಎಂಎಲ್ ಕಾರ್ಖಾನೆ ಆವರಣದಲ್ಲಿ ಇರಿಸಲಾಗಿದ್ದ ಬೋನಿಗೆ ಮೂರು ವರ್ಷದ ಗಂಡು ಚಿರತೆ ಸಿಕ್ಕಿಬಿದ್ದಿದೆ. ಚಿರತೆ ಆಗಾಗ್ಗೆ ಪ್ರತ್ಯಕ್ಷವಾಗುತ್ತಿರುವ ಬಗ್ಗೆ ಬಿಇಎಂಎಲ್ ಕಾರ್ಖಾನೆ ನೌಕರರು ದೂರಿದ್ದರು.

ಹಾಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಖಾನೆ ಆವರಣದಲ್ಲಿ ಬೋನನ್ನು ಇರಿಸಿ ನಾಯಿಯೊಂದನ್ನು ಬಿಟ್ಟಿದ್ದರು. ಆಹಾರ ಅರಸಿ ಬಂದಿದ್ದ ಚಿರತೆ ಮುಂಜಾನೆ 3 ಗಂಟೆ ಸುಮಾರಿನಲ್ಲಿ ಬೋನಿಗೆ ಬಿದ್ದಿದೆ.
ಎಸಿಎಫ್ ದೊರೆಸ್ವಾಮಿ, ಅರಣ್ಯಾಧಿಕಾರಿ ಸೋಮಶೆಟ್ಟಿ ಸ್ಥಳಕ್ಕೆ ಆಗಮಿಸಿದರು. ಬಳಿಕ ಬೋನನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಸಾಗಿಸಿ ಚಿರತೆಯನ್ನು ಬಿಡಲಾಯಿತು.

ಮರಟಿಕ್ಯಾತನಹಳ್ಳಿ: ಮತ್ತೊಂದು ಘಟನೆಯಲ್ಲಿ ಬೋಗಾದಿ ಗ್ರಾಮದ ಮರಟಿಕ್ಯಾತನಹಳ್ಳಿಯ ತೆರೆದ ಒಣ ಬಾವಿಯೊಂದರಲ್ಲಿ ಚಿರತೆ ಸೋಮವಾರ ಮುಂಜಾನೆ ಬಿದ್ದಿತ್ತು. ಆಹಾರ ಅರಸಿ ಬಂದಿದ್ದ ಚಿರತೆ ಆಕಸ್ಮಿಕವಾಗಿ ತೆರೆದ ಬಾವಿಗೆ ಬಿತ್ತು ಎನ್ನಲಾಗಿದೆ.

ಬೆಳಿಗ್ಗೆ 7.30ರ ಸುಮಾರಿನಲ್ಲಿ ತೆರೆದ ಬಾವಿಯಲ್ಲಿ ಚಿರತೆ ಇದ್ದುದ್ದನ್ನು ಕಂಡ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರು. ವನ್ಯಜೀವಿ ರಕ್ಷಣಾ ತಂಡ ಕೂಡಲೇ ಸ್ಥಳಕ್ಕೆ ಆಗಮಿಸಿತು. ಅಷ್ಟರಲ್ಲಾಗಲೆ ಚಿರತೆ ಬಾವಿಯಿಂದ ತಪ್ಪಿಸಿಕೊಂಡು ಪರಾರಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT