ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಶಾಲೆಗಳ 800 ಹುದ್ದೆಗಳಲ್ಲಿ ಅತಂತ್ರ ಸ್ಥಿತಿ

Last Updated 14 ಜುಲೈ 2013, 19:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹೈಕೋರ್ಟ್ ಆದೇಶ ಉಲ್ಲಂಘಿಸಿ ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ನೇಮಕಾತಿ ಮಾಡಿದ್ದರಿಂದ ಒಂದೇ ಹುದ್ದೆಯಲ್ಲಿ ಇಬ್ಬರು ಶಿಕ್ಷಕರು ಮತ್ತು ಪ್ರಾಂಶುಪಾಲರು ಕರ್ತವ್ಯ ನಿರ್ವಹಿಸುತ್ತಿದ್ದು, ರಾಜ್ಯದಾದ್ಯಂತ ಸುಮಾರು 800 ಹುದ್ದೆಗಳಲ್ಲಿ ಈ ಅತಂತ್ರ ಸ್ಥಿತಿ ನಿರ್ಮಾಣಗೊಂಡಿದೆ!

`ಶಿಕ್ಷಕರ ನೇರ ನೇಮಕಾತಿ ವೇಳೆ ಹೊರಗುತ್ತಿಗೆಯಲ್ಲಿ ನೇಮಕಗೊಂಡವರನ್ನು ಅರ್ಹತೆ ಆಧಾರದಲ್ಲಿ ಪರಿಗಣಿಸುವಂತೆ ಹೈಕೋರ್ಟ್ ನೀಡಿದ ಆದೇಶವನ್ನು `ಕ್ರೈಸ್' ಪಾಲಿಸಿಲ್ಲ. ಹೀಗಾಗಿ ಅತ್ತ ಕಾಯಂ ಹುದ್ದೆಯೂ ಇಲ್ಲ, ಇತ್ತ ಸೂಕ್ತ ವೇತನವೂ ಇಲ್ಲ' ಎನ್ನುವ ಅಳಲು ಈ ಶಾಲೆಗಳಲ್ಲಿ ಹೊರಗುತ್ತಿಗೆಯಲ್ಲಿ ದುಡಿಯುತ್ತಿರುವ ಶಿಕ್ಷಕರದ್ದು.

`ಕ್ರೈಸ್', 2012 ಜೂನ್‌ನಲ್ಲಿ ಈ ಶಾಲೆಗಳಿಗೆ ಪ್ರಾಂಶುಪಾಲರು ಹಾಗೂ ಶಿಕ್ಷಕರು ಸೇರಿ 4,071 ಮಂದಿಯನ್ನು ನೇರ ನೇಮಕಾತಿ ಮಾಡಿತು.

ಇದನ್ನು ಪ್ರಶ್ನಿಸಿ ಅರೆಕಾಲಿಕ ಶಿಕ್ಷಕರು ಹೈಕೋಟ್ ಮೆಟ್ಟಿಲೇರಿದ್ದರು. `ಕ್ರೈಸ್'ನ ಈ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಹೈಕೋರ್ಟ್, ಅರೆಕಾಲಿಕ ಶಿಕ್ಷಕರ ಸೇವಾವಧಿಯ ಪ್ರತಿ ವರ್ಷಕ್ಕೆ ಶೇ 5ರಷ್ಟು ಕೃಪಾಂಕ ನೀಡಿ, ಸೇವೆಯಲ್ಲಿ ಕಳೆದಿರುವಷ್ಟು ವರ್ಷಗಳ ವಯೋಮಿತಿ ಸಡಿಲಿಸಿ ಕಾಯಂಗೊಳಿಸುವಂತೆ ಆದೇಶಿಸಿತ್ತು.

ಆದರೆ ಈ ಆದೇಶವನ್ನು `ಕ್ರೈಸ್' ಉಲ್ಲಂಘಿಸಿದೆ ಎಂದು ದಾಖಲೆಗಳ ಸಹಿತ `ಪ್ರಜಾವಾಣಿ'ಗೆ ಮಾಹಿತಿ ನೀಡಿದ ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಶಿಡೇನೂರ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಶಿಕ್ಷಕರಾದ ಎಂ.ಎಸ್. ಕದರಮಂಡಲಗಿ, ಎಂ.ಆರ್. ಪಾಟೀಲ, ಎಂ.ಎಚ್. ಹುಲ್ಲೂರ ಅಳಲು ತೋಡಿಕೊಂಡಿದ್ದಾರೆ.

ಮೊರಾರ್ಜಿ ಹಾಗೂ ಚೆನ್ನಮ್ಮ ಶಾಲೆಗಳಿಗೆ 4,071 ಶಿಕ್ಷಕರ ನೇರ ನೇಮಕಾತಿಗೆ 2011ರ ಏ. 27ರಂದು`ಕ್ರೈಸ್' ಅಧಿಸೂಚನೆ ಹೊರಡಿಸಿತು. ಇದನ್ನು ಪ್ರಶ್ನಿಸಿ ಹೊರಗುತ್ತಿಗೆ ಶಿಕ್ಷಕರು ಹೈಕೋರ್ಟ್ ರಿಟ್ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಪ್ರಕರಣದ ಅಂತಿಮ ಆದೇಶ ಹೊರಬಿದ್ದ ನಂತರ ನೇಮಕಾತಿ ಪೂರ್ಣಗೊಳಿಸಬೇಕು ಎಂದು 2011ರ ಜೂನ್‌ನಲ್ಲಿ ಮಧ್ಯಂತರ ತೀರ್ಪು ನೀಡಿತು. ಆದರೆ `ಕ್ರೈಸ್' 2011 ರ ಜು. 24 ರಿಂದ 27ರ ವರೆಗೆ ನೇರ ನೇಮಕಾತಿ ಪರೀಕ್ಷೆ ನಡೆಸಿ, 2012ರ ಜೂ. 29ರಂದು ಅರ್ಹತಾ ಪಟ್ಟಿ ಪ್ರಕಟಿಸಿ, 31ರಂದು ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಳಿಸಿ ನೇಮಕಾತಿ ಪತ್ರ ನೀಡಿತು.

2012 ರ ಜು. 13ರಂದು ಹೈಕೋರ್ಟ್ ಏಕಸದಸ್ಯ ಪೀಠ, ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದ ಶಿಕ್ಷಕರಿಗೆ ಸೇವಾವಧಿಯನ್ವಯ ವಾರ್ಷಿಕ ಶೇ 5ರಂತೆ ಗರಿಷ್ಠ 40 ಕೃಪಾಂಕ ನೀಡಬೇಕು.

ಸೇವಾವಧಿಯಷ್ಟು ವಯೋಮಿತಿ ಸಡಿಲಿಕೆ ನೀಡಿ ನೇಮಕಾತಿ ಮಾಡಿಕೊಳ್ಳಬೇಕು. ನೇರ ನೇಮಕಾತಿ ಮೂಲಕ ಆಯ್ಕೆಯಾದವರಿಗೆ ಇದರಿಂದ ತೊಂದರೆಯಾಗುವುದಾದರೆ `ಕೊನೆಗೆ ಬಂದವರು ಮೊದಲು ಹೋಗತಕ್ಕದ್ದು' ಎಂಬ ನಿಯಮದಲ್ಲಿ ನೇಮಕಾತಿ ನಡೆಸಬೇಕು ಎಂದು ಅಂತಿಮ ಆದೇಶ ನೀಡಿತು.

ಇದನ್ನು ಪ್ರಶ್ನಿಸಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಕ್ರೈಸ್ ಮೇಲ್ಮನವಿ ಸಲ್ಲಿಸಿತು. 2013 ರ ಫೆ. 28ರಂದು ವಿಭಾಗೀಯ ಪೀಠ, ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನೆ ಎತ್ತಿ ಹಿಡಿಯಿತು. ಇದೇ ಆದೇಶವನ್ನು ಧಾರವಾಡ ಹೈಕೋರ್ಟ್ ವಿಭಾಗೀಯ ಸಂಚಾರಿ ಪೀಠ ಕೂಡಾ ಎತ್ತಿ ಹಿಡಿಯಿತು.

ಅಲ್ಲದೆ, ಆರು ವಾರಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿತ್ತು. ಆದರೆ ಹೈಕೋರ್ಟ್ ಆದೇಶಕ್ಕೆ `ಕ್ರೈಸ್' ಬೆಲೆ ನೀಡಿಲ್ಲ. ಇದರಿಂದಾಗಿ ನೇರ ನೇಮಕಾತಿ ಶಿಕ್ಷಕರು ಮತ್ತು ಕೋರ್ಟ್ ಆದೇಶದಂತೆ ಹುದ್ದೆಯಲ್ಲಿ ಮುಂದುವರಿದ ಹೊರಗುತ್ತಿಗೆ ಶಿಕ್ಷಕರಿಂದಾಗಿ ಒಂದೇ ಹುದ್ದೆಯನ್ನು ಇಬ್ಬರು ನಿರ್ವಹಿಸುವಂತಾಗಿದೆ!

`ಹೊರಗುತ್ತಿಗೆ ಶಿಕ್ಷಕರಿಗೆ ಕಳೆದ ಡಿಸೆಂಬರ್‌ನಿಂದ ವೇತನ ಪಾವತಿಯಾಗಿಲ್ಲ. ಒಂದು ಹುದ್ದೆಗೆ ಇಬ್ಬರು ಶಿಕ್ಷಕರು ಇರುವುದರಿಂದ ವೇತನ ಪಾವತಿಗೆ ಅವಕಾಶವಿಲ್ಲ ಎಂದು `ಕ್ರೈಸ್' ಹೇಳುತ್ತಿದೆ' ಎಂದು ಈ ಶಿಕ್ಷಕರು ದೂರಿದ್ದಾರೆ.

ಸುಪ್ರೀಂಗೆ ಮೇಲ್ಮನವಿ
`ಶಿಕ್ಷಕರ ನೇಮಕಾತಿ ವಿಷಯಕ್ಕೆ ಸಂಬಂಧಿಸಿ ಹೈಕೋರ್ಟ್ ಪೀಠಗಳು ನೀಡಿದ ಆದೇಶಗಳಲ್ಲಿ ಗೊಂದಲ ಇದೆ. ಈ ಕುರಿತು ಈಗಾಗಲೇ ಕಾನೂನು ತಜ್ಞರ ಸಲಹೆ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈಗಾಗಲೇ ಬಂದಿರುವ ಕೋರ್ಟ್ ಆದೇಶಗಳ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಲು ಚಿಂತನೆ ನಡೆದಿದೆ' ಎನ್ನುತ್ತಾರೆ  `ಕ್ರೈಸ್',ನ ನಿರ್ವಾಹಕ ನಿರ್ದೇಶಕ ಬಿ.ಎಸ್.  ಪುರುಷೋತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT