ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೆಣೈ ಮರುನೇಮಕಕ್ಕೆ ಸುಭಾಷ್ ಬೇಡಿಕೆ ಇಟ್ಟಿದ್ದ...

ಸಿ.ಡಿಯಲ್ಲಿರುವುದು ನಾನಲ್ಲ ಅದೊಂದು ಕೃತಕ ಸೃಷ್ಟಿ: ಎಚ್‌. ವೈ ಮೇಟಿ
Last Updated 17 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಬಾಗಲಕೋಟೆ: ಲೈಂಗಿಕ ಹಗರಣದ ಸುಳಿಗೆ ಸಿಲುಕಿ ಅಬಕಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಇದೇ ಮೊದಲ ಬಾರಿಗೆ ತವರು ಜಿಲ್ಲೆ ಬಾಗಲಕೋಟೆಗೆ ಬಂದಿರುವ ಎಚ್.ವೈ.ಮೇಟಿ ಹುಟ್ಟೂರು ತಾಲ್ಲೂಕಿನ ತಿಮ್ಮಾಪುರದಲ್ಲಿ ಶನಿವಾರ ದಿನವಿಡೀ ಕಾಲ ಕಳೆದರು. ಅವರು ನಿರಾಳವಾಗಿದ್ದರು.
 
ಪೊಲೀಸ್ ಬಿಗಿ ಬಂದೋಬಸ್ತ್ ನಡುವೆಯೇ ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಉದ್ರಿಕ್ತ ಬೆಂಬಲಿಗರು ಮನೆಯ ಮುಂದೆ ಜಮಾವಣೆಗೊಂಡು ತಮ್ಮ ಸಾಹೇಬರಿಗೆ ಸಾಂತ್ವನ ಹೇಳಿದರು. ಈ ವೇಳೆ ಇಡೀ ಪ್ರದೇಶ ಬಿಗುವಿನಿಂದ ಕೂಡಿತ್ತು. 
 
ಪುತ್ರರಾದ ಉಮೇಶ ಹಾಗೂ ಮಲ್ಲಿಕಾರ್ಜುನ ಮೇಟಿ ಹಾಗೂ ಕೆಲವು ಆಪ್ತರ ಕಣ್ಗಾವಲಿನ ನಡುವೆಯೇ ಮೇಟಿ ಕೆಲ ಹೊತ್ತು ‘ಪ್ರಜಾವಾಣಿ’ಗೆ ಮುಖಾಮುಖಿಯಾದರು. ಪ್ರಶ್ನೆಗಳು ಮೊನಚಾಗುತ್ತಿದ್ದಂತೆಯೇ ಮಾಧ್ಯಮದವರ ಮೇಲೆ ಬೆಂಬಲಿಗರು ದಾಳಿ ನಡೆಸಬಹುದು ಎಂದು ಹೇಳುತ್ತಾ ಮೇಟಿ ಅವರನ್ನು ಮಧ್ಯದಲ್ಲಿಯೇ ಎಬ್ಬಿಸಿ ಕರೆದೊಯ್ಯಲಾಯಿತು.
 
* ಆರೋಪದ ಹಿಂದೆ ಷಡ್ಯಂತ್ರ ಅಡಗಿದೆ ಎಂದು ನೀವು ಸಿ.ಎಂ.ಗೆ ಹೇಳಿದ್ದೀರಿ. ಏನಿದು ಷಡ್ಯಂತ್ರ. ಇದರ ಹಿಂದೆ ಯಾರು ಇದ್ದಾರೆ?
 ಷಡ್ಯಂತ್ರ ಇರುವುದು ಸತ್ಯ. ನನ್ನ ಅಮಾಯಕತೆ ದುರುಪಯೋಗಪಡಿಸಿಕೊಂಡು ಈ ಕೆಲಸ ಮಾಡಲಾಗಿದೆ. ಅದನ್ನು ಮುಖ್ಯಮಂತ್ರಿಗೆ ಹೇಳಿದ್ದೆ. ಆದರೆ ನನಗೆ ವೈಯಕ್ತಿಕವಾಗಿ ಯಾರೂ ಶತ್ರುಗಳಿಲ್ಲ. ಷಡ್ಯಂತ್ರ ಯಾರು ಮಾಡಿದರು ಎಂಬುದೇ ಅರ್ಥವಾಗುತ್ತಿಲ್ಲ. ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿದೆ. ಅವರಿಂದ ವರದಿ ಬಂದ ನಂತರ ಅದರ ಹಿಂದೆ ಯಾರ ಕೈವಾಡವಿದೆ ಎಂಬುದು ಗೊತ್ತಾಗಲಿದೆ..
 
* ಹಾಗಾದರೆ ಕಾನ್‌ಸ್ಟೆಬಲ್‌ ಸುಭಾಷ್ ಯಾರು?
 ಕೊಡಲಿಯ ಕಾವು ಕುಲಕ್ಕೆ ಮೂಲ ಎಂಬಂತೆ ಅವನೂ ನಮ್ಮ ಹುಡುಗನೆ. ನಾನೇ ಅವನಿಗೆ ಕಾನ್‌ಸ್ಟೆಬಲ್‌ ಕೆಲಸ ಕೊಡಿಸಿದ್ದೆ. ನಾನು ಸಚಿವನಾದ ವೇಳೆ ಗನ್‌ಮ್ಯಾನ್ ಮಾಡಿಕೊಳ್ಳುವಂತೆ ಕೇಳಿಕೊಂಡು  ಬಂದಿದ್ದ. ನನ್ನ ಬಳಿ ಈಗಾಗಲೇ ಮೂವರು ಗನ್‌ಮ್ಯಾನ್‌ಗಳು ಇದ್ದು, ಯಾವುದೇ ಹುದ್ದೆ ಖಾಲಿ ಇಲ್ಲ ಎಂದು ವಾಪಸ್ ಕಳುಹಿಸಿದ್ದೆ.
 
* ಸಿ.ಡಿ ವಿಚಾರ ನಿಮ್ಮ ಗಮನಕ್ಕೆ ಬಂದಿದ್ದಾದರೂ ಹೇಗೆ, ನಿಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಲಾಯಿತೇ ?
ಹಾಗೊಂದು ಸುದ್ದಿ ನನ್ನ ಆಪ್ತ ವಲಯದಲ್ಲಿ ಸುಳಿದಾಡುತ್ತಿತ್ತು. ಸುಭಾಷನ ಬಳಿ ಸಿ.ಡಿ ಇದೆ ಎಂದು ಹೇಳಲಾಗಿತ್ತು. ಹಾಗಾಗಿ ಆತನನ್ನು ಕರೆದು ಏನಪ್ಪಾ ವಿಚಾರ ಎಂದು ಕೇಳಿದ್ದೆ. ಸಿ.ಡಿ ಇದೆ ಎಂದು ಹೇಳಿದ್ದ ಆತ ಮಾಜಿ ಪೊಲೀಸ್‌ ಅಧಿಕಾರಿ ಅನುಪಮಾ ಶೆಣೈ ಅವರನ್ನು ಮರಳಿ ಕೆಲಸಕ್ಕೆ ತೆಗೆದುಕೊಂಡರೆ ಅದನ್ನು ಬಹಿರಂಗಪಡಿಸುವುದಿಲ್ಲ. ವಾಪಸ್‌ ಕೊಡುವೆ ಎಂದು ಹೇಳಿದ್ದ. 
 
* ಅನುಪಮಾ ಶೆಣೈ ಅವರನ್ನು ಮರು ನೇಮಕ ಮಾಡಿಕೊಂಡಿದ್ದರೆ ನಿಮ್ಮ ಮಂತ್ರಿ ಸ್ಥಾನ ಉಳಿಯುತ್ತಿತ್ತೇ?
ಮಂತ್ರಿ ಸ್ಥಾನ ಉಳಿಯುತ್ತಿತ್ತು ಎಂಬುದನ್ನು ನಾನು ಈಗ ಹೇಳಲು ಆಗುವುದಿಲ್ಲ. ಆಕೆಯನ್ನು ಮರು ನೇಮಕ ಮಾಡಿಕೊಳ್ಳಲು ತಾಂತ್ರಿಕವಾಗಿ ಸಾಧ್ಯವಿಲ್ಲ ಎಂಬುದು ಗೊತ್ತಿತ್ತು. ಹಾಗಾಗಿ ಆ ವಿಚಾರದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. 
 
* ಸುಭಾಷ್ ಹಣದ ಬೇಡಿಕೆ ಇಡಲಿಲ್ಲವೇ. ನಿಮ್ಮ ಮಗ ಮಲ್ಲಿಕಾರ್ಜುನ ಮೇಟಿ ಅವರು ಮಧ್ಯವರ್ತಿ ಮೂಲಕ ಈಗಾಗಲೇ ₹50 ಲಕ್ಷ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ನಾನು ಒಂದು ಪೈಸೆ ದುಡ್ಡು ಯಾರಿಗೂ ಕೊಟ್ಟಿಲ್ಲ. ನನ್ನ ಬಳಿ ಅಷ್ಟೊಂದು ದುಡ್ಡು ಇಲ್ಲ. ಸುಭಾಷ್‌ ಸೇರಿದಂತೆ ಯಾರೂ ದುಡ್ಡಿಗೆ ಬೇಡಿಕೆ ಇಟ್ಟಿಲ್ಲ.
 
* ವಿಜಯಲಕ್ಷ್ಮಿ ಸರೂರು ಅವರೊಂದಿಗೆ ನಿಮ್ಮದು ಒಪ್ಪಿತ ಸಂಬಂಧವೇ, ಆಮಿಷ ಒಡ್ಡಿದ್ದೀರಾ?  
ಆಕೆ ಪಂಚಕರ್ಮ ಚಿಕಿತ್ಸೆ ಪಡೆ ಯಲು ಹೋದಾಗ ಆಯುಷ್ ವೈದ್ಯ ಡಾ.ಗುಗ್ಗರಿ ಅವರಿಂದ ಪರಿಚಯವಾ ಗಿದ್ದರು. ವಿಜಯಲಕ್ಷ್ಮಿ ನನಗೆ ದೂರದ ಸಂಬಂಧಿಯೂ ಹೌದು. ಪರಿಚಯವಿದ್ದ ಕಾರಣ ಆಗಾಗ ನನ್ನ ಬಳಿ ಬಂದು ಹೋಗುತ್ತಿದ್ದರು. ಆಕೆಗೂ ನನಗೂ ಯಾವುದೇ ಸಂಬಂಧವಿಲ್ಲ. ಒಪ್ಪಿತ ಸಂಬಂಧ, ಆಮಿಷ  ಯಾವುದೂ ಇಲ್ಲ. ನಾನು ಅಂತಹ ಉಸಾಬರಿಗೆ ಹೋಗುವುದಿಲ್ಲ.
 
* ಹಾಗಾದರೆ ನಿಮ್ಮೊಂದಿಗೆ ಸಿ.ಡಿಯಲ್ಲಿ ಇರುವ ಮಹಿಳೆ ಯಾರು, ವಿಜಯಲಕ್ಷ್ಮಿ ಸರೂರ ಅವರ ಆರೋಪ ಸುಳ್ಳಾ?
ಆ ಸಿ.ಡಿಯಲ್ಲಿ ಇರುವುದೇ ನಾನು ಅಲ್ಲ. ಅದೊಂದು ಕೃತಕ ಸೃಷ್ಟಿ. ಎರಡು ತಿಂಗಳ ಹಿಂದೆ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ನರರೋಗ ತಜ್ಞ ಡಾ.ಚಂದ್ರಮೌಳಿ ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆ ಮಾಡಿದ್ದರು. ಆಸ್ಪತ್ರೆಯಲ್ಲಿ ಇದ್ದಾಗ ಆಗ ನಾನು ಬನಿಯನ್‌ ಹಾಕಿಕೊಂಡಿದ್ದ ವಿಡಿಯೊವನ್ನು ಆ ಸಿ.ಡಿಯಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ವಿಜಯಲಕ್ಷ್ಮಿ ಮಾಡಿರುವ ಆರೋಪಗಳು ಸುಳ್ಳು. 
 
* ಸಿ.ಡಿ ಕೃತಕ ಸೃಷ್ಟಿಯಾದಲ್ಲಿ ನೀವು ರಾಜೀನಾಮೆ ಕೊಟ್ಟಿದ್ದೇಕೆ?
ಮಾಧ್ಯಮಗಳ ಆರೋಪದಿಂದ ಸರ್ಕಾರಕ್ಕೆ, ಪಕ್ಷಕ್ಕೆ ಮುಜುಗರವಾಗದಿರಲಿ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ. ನಾನು ಮುಖ್ಯಮಂತ್ರಿಗೆ ರಾಜೀನಾಮೆ ಪತ್ರ ಕೊಟ್ಟಾಗ ಇನ್ನೂ ಸಿ.ಡಿ ಬಿಡುಗಡೆಯೇ ಆಗಿರಲಿಲ್ಲ. ಪ್ರಕರಣದ ಹಿಂದೆ ಷಡ್ಯಂತ್ರ ಇದ್ದು ಸಿಐಡಿ ತನಿಖೆಗೆ ವಹಿಸುವಂತೆ ಮುಖ್ಯಮಂತ್ರಿಗೆ ನಾನೇ ಮನವಿ ಮಾಡಿದ್ದೇನೆ. ತನಿಖೆ ನಂತರ ಸತ್ಯಾಂಶ ಹೊರಬರಲಿದೆ.
 
* ಈಗ ಮಾಡುತ್ತಿರುವುದು ಸಿಐಡಿ ವಿಚಾರಣೆ ಮಾತ್ರ. ನೀವು ದೂರು ಕೊಟ್ಟಲ್ಲಿ ಮಾತ್ರ ತನಿಖೆ ನಡೆಯಲಿದೆ. ನೀವೇಕೆ ದೂರು ಕೊಡಲು ಮುಂದಾಗುತ್ತಿಲ್ಲ.
ನನಗೆ  ಯಾರೂ ಶತ್ರುಗಳು ಇಲ್ಲ. ಹಾಗಾಗಿ ಯಾರ ವಿರುದ್ಧವೂ ದೂರು ಕೊಟ್ಟಿಲ್ಲ. ಈಗ ಮಾಡುತ್ತಿರುವ ವಿಚಾರಣೆಯಿಂದ ಸತ್ಯಾಂಶ ಹೊರಗೆ ಬರಲಿದೆ. ದೂರು ಕೊಡುವುದೊ, ಬಿಡುವುದೊ ಎಂಬುದನ್ನು ಅಗತ್ಯ ಬಿದ್ದಲ್ಲಿ ನಿರ್ಧರಿಸುವೆ.
 
* ಬಳ್ಳಾರಿಯ ಮಾಹಿತಿ ಹಕ್ಕು ಕಾರ್ಯಕರ್ತ ರಾಜಶೇಖರ ಮುಲಾಲಿ ನಿಮ್ಮನ್ನು ಸಂಪರ್ಕಿಸಿದ್ದರಾ?.
 ಮುಲಾಲಿ ನನಗೆ ಪರಿಚಯವೇ ಇಲ್ಲ. ಸಂಪರ್ಕಿಸಿಯೂ ಇಲ್ಲ. ಇಲ್ಲಿಯವರೆಗೂ ನಾನು ಅವರನ್ನು ಟಿ.ವಿಯಲ್ಲಿ ಮಾತ್ರ ನೋಡಿದ್ದೇನೆ.
 
* ಮಾಧ್ಯಮಗಳಲ್ಲಿ ಸಿ.ಡಿ ವಿಚಾರ ಪ್ರಸ್ತಾಪವಾದಾಗಲೇ ರಾಜೀನಾಮೆ ನೀಡಿ ಪಕ್ಷಕ್ಕೆ, ಸರ್ಕಾರಕ್ಕೆ ಆದ ಮುಜುಗರ ತಪ್ಪಿಸಬಹುದಿತ್ತಲ್ಲಾ?
ನಾನು ಮೊದಲ ದಿನವೇ ರಾಜೀನಾಮೆ ಕೊಡಲು ಸಿದ್ಧವಾಗಿದ್ದೆ. ಸಿದ್ದರಾಮಯ್ಯ ಒಪ್ಪಲಿಲ್ಲ. ಮೊದಲು ಸತ್ಯಾಸತ್ಯತೆ ಪರಾಮರ್ಶಿಸೋಣ. ನಂತರ ನಿರ್ಧಾರ ಕೈಗೊಳ್ಳುವಿರಂತೆ ಎಂದು ಹೇಳಿ ತಡೆದಿದ್ದರು.
 
* ಈ ಪ್ರಕರಣದಿಂದ ನಿಮ್ಮ ರಾಜಕೀಯ ಬದುಕು ಅಂತ್ಯವಾಯಿತೇ, ಮುಂದೇನು?
ಇಲ್ಲ. ಕ್ಷೇತ್ರದ ಜನರು ನನ್ನ ಕೈ ಬಿಡುವುದಿಲ್ಲ. ರಾಜಕೀಯದಿಂದ ದೂರವಾಗುವ ಪ್ರಶ್ನೆಯೇ ಇಲ್ಲ. ಹಿಂದೆ ಮಂತ್ರಿಯಾಗಿದ್ದಾಗ ಇಡೀ ಜಿಲ್ಲೆಯ ಜವಾಬ್ದಾರಿ ಇರುತ್ತಿತ್ತು. ಈಗ ಕ್ಷೇತ್ರದ ಕಡೆ ಹೆಚ್ಚು ಗಮನ ನೀಡುವೆ. ನನ್ನ ಮತ ಕ್ಷೇತ್ರದ ಜನ ಕೈ ಹಿಡಿಯಲಿದ್ದಾರೆ. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT