ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ, ಈಶ್ವರಪ್ಪಗೆ ಕೋರ್ಟ್ ನೋಟಿಸ್

Last Updated 24 ಜನವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜಕೀಯ ಪಕ್ಷಗಳು ಬಂದ್‌ಗೆ ಕರೆ ನೀಡಬಾರದು ಎಂಬ ಸುಪ್ರೀಂಕೋರ್ಟ್‌ನ ತೀರ್ಪಿನ ನಡುವೆಯೂ ಶನಿವಾರ (ಜ.22) ರಾಜ್ಯದಲ್ಲೆಡೆ ನಡೆದ ಬಂದ್ ವಿರೋಧಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೇರಿದಂತೆ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಹೈಕೋರ್ಟ್ ಸೋಮವಾರ ಆದೇಶಿಸಿದೆ.

ನಿಯಮ ಉಲ್ಲಂಘಿಸಿ ಈ ರೀತಿಯ ಬಂದ್ ಇನ್ನು ಮುಂದೆ ನಡೆಯದಂತೆ ಆದೇಶಿಸುವಂತೆ ಕೋರಿ ವಕೀಲ ಬಿ.ಬೋಪಣ್ಣ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸುತ್ತಿದೆ.

‘ರಾಜ್ಯದ ಜನರ ಹಿತರಕ್ಷಣೆ ಕಾಪಾಡಬೇಕಾಗಿದ್ದ ಈಶ್ವರಪ್ಪನವರು ಬಂದ್‌ಗೆ ಕರೆ ನೀಡಿದ್ದಾರೆ. ಪೊಲೀಸ್ ಇಲಾಖೆ ಮೂಕ ಪ್ರೇಕ್ಷಕನಂತೆ ನೋಡುತ್ತ ಕುಳಿತಿದೆ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಆದೇಶಿಸಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಪರಿಹಾರಕ್ಕೆ ಮನವಿ: ಶನಿವಾರ ನಡೆದ ಬಂದ್‌ನಿಂದ ಉಂಟಾದ ನಷ್ಟವನ್ನು ಭರಿಸಲು ಸರ್ಕಾರಕ್ಕೆ ಆದೇಶಿಸುವಂತೆಯೂ ಅರ್ಜಿಯಲ್ಲಿ ಕೋರಿಕೆ ಇಡಲಾಗಿದೆ. 5ಸಾವಿರ ಕೋಟಿ ರೂಪಾಯಿ ಪರಿಹಾರವನ್ನು ಸರ್ಕಾರದ ಬೊಕ್ಕಸಕ್ಕೆ ಭರಿಸಲು ಈಶ್ವರಪ್ಪನವರಿಗೆ ಆದೇಶಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ. ಈ ಪೈಕಿ ಕೈಗಾರಿಕಾ ವಲಯಕ್ಕೆ 2ಸಾವಿರ ಕೋಟಿ, ಸಾರಿಗೆ ಇಲಾಖೆಗೆ 500 ಕೋಟಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ 1ಸಾವಿರ ಕೋಟಿ ಹಾಗೂ ಇತರ ಕ್ಷೇತ್ರಕ್ಕೆ ಉಂಟಾದ ನಷ್ಟದ ರೂಪದಲ್ಲಿ ಒಂದೂವರೆ ಸಾವಿರ ಕೋಟಿ ರೂಪಾಯಿಗಳನ್ನು ಮೀಸಲು ಇಡಬೇಕು ಎನ್ನುವುದು ಅವರ ಬೇಡಿಕೆ.

ಬಂದ್‌ನಿಂದ ಉಂಟಾದ ತೊಂದರೆ ಹಾಗೂ ಪತ್ರಿಕೆಗಳಲ್ಲಿ ಬಂದಿರುವ ವರದಿಯ ಬಗ್ಗೆ ಅರ್ಜಿದಾರರ ಪರ ವಕೀಲ ಪ್ರೊ. ರವಿವರ್ಮ ಕುಮಾರ್ ಪೀಠದ ಗಮನಕ್ಕೆ ತಂದರು. ಪತ್ರಿಕೆಗಳ ವರದಿಯ ಆಧಾರದ ಮೇಲೆಯೂ ನ್ಯಾಯಾಲಯವು ಸೂಕ್ತ ಕ್ರಮ ತೆಗೆದುಕೊಳ್ಳಬಹುದು ಎಂಬ ಬಗ್ಗೆ ಇತರ ಕೋರ್ಟ್‌ಗಳಲ್ಲಿನ ತೀರ್ಪುಗಳ ಬಗ್ಗೆ ಅವರು ಉಲ್ಲೇಖಿಸಿದರು. ಬಂದ್‌ಗೆ ಸಂಬಂಧಿಸಿದಂತೆ 3-4 ಅರ್ಜಿಗಳು ಹೈಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಹಿನ್ನೆಲೆಯಲ್ಲಿ ಎಲ್ಲ ಅರ್ಜಿಗಳ ವಿಚಾರಣೆಯನ್ನು ಫೆ.21ಕ್ಕೆ ಒಟ್ಟಿಗೇ ನಡೆಸುವುದಾಗಿ ಪೀಠ ತಿಳಿಸಿತು.

‘ಒಪ್ಪಿಕೊಂಡು ಬಿಟ್ಟಿರಾ..?’
ಈ ಪ್ರಕರಣದ ವಿಚಾರಣೆ ಆರಂಭ ಆಗುತ್ತಿದ್ದಂತೆ ಸರ್ಕಾರದ ಪರ ವಕೀಲರು ಎದ್ದು ನಿಂತು, ‘ಈ ಅರ್ಜಿಯನ್ನು ವಜಾ ಮಾಡಬೇಕು’ ಎಂದು ಕೇಳಿಕೊಂಡರು. ಅದಕ್ಕೆ ನ್ಯಾ. ಕೇಹರ್ ಅವರು ಕಾರಣ ಕೇಳಿದಾಗ ವಕೀಲರು, ‘ಈ ಅರ್ಜಿಯನ್ನು ಶನಿವಾರ ಸಲ್ಲಿಸಲಾಗಿತ್ತು. ಅಂದು ನಡೆಯುತ್ತಿರುವ ಬಂದ್‌ಗೆ ತಡೆ ನೀಡಬೇಕು ಎನ್ನುವುದು ಅರ್ಜಿದಾರರ ಮನವಿಯಾಗಿತ್ತು. ‘ಬಂದ್’ ಈಗಾಗಲೇ ಮುಗಿದ ಹಿನ್ನೆಲೆಯಲ್ಲಿ ಅರ್ಜಿಗೆ ಮಾನ್ಯತೆ ಇಲ್ಲ’ ಎಂದರು.

ಕೂಡಲೇ ನ್ಯಾ.ಕೇಹರ್ ಅವರು ಹಾಸ್ಯದ ರೂಪದಲ್ಲಿ, ‘ಇದರ ಅರ್ಥ ನೀವು (ಸರ್ಕಾರ) ‘ಬಂದ್’ ನಡೆಸಿರುವುದು ನಿಜ ಎಂದು ಒಪ್ಪಿಕೊಂಡು ಬಿಟ್ಟೀರಾ’ ಎಂದು ಪ್ರಶ್ನಿಸಿದಾಗ ವಕೀಲರು ಒಂದು ಕ್ಷಣ ದಂಗಾದರು! ಆ ನಂತರದಲ್ಲಿ ವಕೀಲರು ‘ನಡೆದಿದೆ ಎನ್ನಲಾದ ಬಂದ್’ ಎನ್ನುತ್ತ ವಾದ ಮುಂದುವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT