ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾವಲಂಬನೆಯತ್ತ ತಾಂಡಾ ಯುವಕರು

Last Updated 2 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಗದಗ: ಕಳ್ಳಬಟ್ಟಿ ತಯಾರಿಕೆಯನ್ನು ನಿಲ್ಲಿಸಿರುವ ಜಿಲ್ಲೆಯ ಹಲವಾರು ತಾಂಡಾಗಳ ಅನೇಕ ಯುವಕರು ಈಗ ಕಾರು- ಆಟೊ ಚಾಲಕರಾಗಿ ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ.

ವಾಹನ ಚಾಲನಾ ತರಬೇತಿ ಪಡೆದಿರುವ ಜಿಲ್ಲೆಯ ನಾಗಾವಿ, ಪಾಪನಾಶಿ, ಸಿಂಗಟರಾಯನಕೆರೆ ಸೇರಿದಂತೆ ಇನ್ನೂ ಅನೇಕ ತಾಂಡಾಗಳ 190 ಮಂದಿ ಯುವಕರು ಈಗ ಗದಗ ನಗರ, ತಾಲ್ಲೂಕು ಕೇಂದ್ರಗಳಲ್ಲಿ ಆಟೊ, ಸರಕು ಸಾಗಣೆ ವಾಹನ, ಟ್ಯಾಕ್ಸಿಗಳನ್ನು ಓಡಿಸುತ್ತಾ ದಿನಕ್ಕೆ ಸರಾಸರಿ 200 ರೂಪಾಯಿ ದುಡಿಯುತ್ತಿದ್ದಾರೆ. ಕೆಲವರಂತೂ ಗೋವಾಕ್ಕೆ ಹೋಗಿ ಅಲ್ಲಿ ದೋಣಿಗಳನ್ನು ನಡೆಸುತ್ತಿದ್ದಾರೆ. ತಿಂಗಳಿಗೆ 3000-4000 ರೂಪಾಯಿ ಗಳಿಸುತ್ತಿದ್ದಾರೆ.

ತಾಂಡಾಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಕಳ್ಳಬಟ್ಟಿ ತಯಾರಿಕೆಯನ್ನು ಸ್ಥಗಿತಗೊಳಿಸಲು ಶ್ರಮಿಸಿದ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳದ ಪೊಲೀಸ್ ಇನ್‌ಸ್ಪೆಕ್ಟರ್ ಡಿ.ಡಿ. ಮಾಳಗಿ ಅವರು, ಕಳ್ಳಬಟ್ಟಿ ತಯಾರಿಕೆ ಬಿಟ್ಟ ಕುಟುಂಬಗಳಿಗೆ ಪುನರ್ವಸತಿಗಾಗಿ ಸರ್ಕಾರದ ವಿವಿಧ ಯೋಜನೆಗಳಲ್ಲಿ ದೊರೆಯುವ ಸೌಲಭ್ಯವನ್ನು ಕೊಡಿಸಿದ್ದಾರೆ.
 
ಹಾಗೆಯೇ ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ನಬಾರ್ಡ್ ಮತ್ತು ಜಿಲ್ಲಾ ಪಂಚಾಯ್ತಿಯ ಸಹಯೋಗದಲ್ಲಿ ತಾಂಡಾದ ಯುವಕರಿಗೆ ಚಾಲನಾ ತರಬೇತಿಯನ್ನು ನೀಡಿ, ಅವರಿಗೆ ಲೈಸೆನ್ಸ್ ಅನ್ನು ಉಚಿತವಾಗಿ ಕೊಡಲಾಗಿದೆ.

ಗದಗ ನಗರದಲ್ಲಿ ಇರುವ ಡ್ರೈವಿಂಗ್ ಸ್ಕೂಲ್‌ಗಳಲ್ಲಿ ತಾಂಡಾದ ಯುವಕರು ಒಂದು ತಿಂಗಳು ತರಬೇತಿ ಪಡೆದುಕೊಂಡಿದ್ದಾರೆ. ಹಣಕಾಸಿನ ತೊಂದರೆಯ ಕಾರಣದಿಂದ ಮುಂದೆ ಓದಲು ಆಗದೆ ಅರ್ಧಕ್ಕೆ ಶಾಲಾ-ಕಾಲೇಜು ಬಿಟ್ಟವರೇ ಹೆಚ್ಚು ಮಂದಿ ಇದ್ದಾರೆ.

“12 ವರ್ಷದಿಂದಲೂ ಗೋವಾಕ್ಕೆ ಕೂಲಿ ಕೆಲಸ ಮಾಡಲು ಹೋಗುತಿದ್ದೆ. ಆಗ ದಿನಕ್ಕೆ ಕೂಲಿ ಎಂದು ಪುಡಿಗಾಸು ಸಿಗುತ್ತಿತ್ತು. ಈ ವರ್ಷ ಡ್ರೈವಿಂಗ್ ಕಲಿತುಕೊಂಡು, ಲೈಸೆನ್ಸ್ ಪಡೆದುಕೊಂಡ ಮೇಲೆ ಗೋವಾದ ಬೀಚ್‌ನಲ್ಲಿ ದೋಣಿ ನಡೆಸುತ್ತಿದ್ದೇನೆ. ತಿಂಗಳಿಗೆ ಮೂರೂವರೆ ಸಾವಿರ ಸಂಬಳ ಸಿಗುತ್ತದೆ.
 
ಜೊತೆಗೆ ಪ್ರವಾಸಿಗರು ಕೆಲವೊಂದು ಸಲ ಬಕ್ಷೀಸೂ ಕೊಡುತ್ತಾರೆ. ಇದರಿಂದಾಗಿ ನಾಲ್ಕೈದು ಸಾವಿರ ರೂಪಾಯಿ ಸಂಪಾದನೆಯಾಗುತ್ತದೆ” ಎಂದು ರವಿ ಲಕ್ಷ್ಮಣ ಗುಡಿಮನಿ `ಪ್ರಜಾವಾಣಿ~ಯೊಂದಿಗೆ ತಮ್ಮ ಅನುಭವ ಹಂಚಿಕೊಂಡರು.

`ಮೊದಲು ನಮ್ಮನ್ನು ಯಾರೂ ಸೇರಿಸಿಕೊಳ್ಳುತ್ತಿರಲ್ಲಿಲ್ಲ. ಡ್ರೈವಿಂಗ್ ಕಲಿಯುವುದಕ್ಕೆ ಸಾವಿರಾರು ರೂಪಾಯಿಯೂ ನಮ್ಮ ಹತ್ತಿರ ಇರಲಿಲ್ಲ. ಆದರೆ ಡಿ.ಡಿ. ಮಾಳಗಿಯವರು ಸರ್ಕಾರದ ಯೋಜನೆಯನ್ನು ನಮ್ಮ ಬಳಿಗೆ ತಂದು, ನಮಗೆ ಉಚಿತವಾಗಿ ಡ್ರೈವಿಂಗ್ ಕಲಿಸಿ, ಲೈಸೆನ್ಸ್ ಸಹ ದೊರೆಕಿಸಿಕೊಟ್ಟಿದ್ದಾರೆ.

ಈಗ ನೆಮ್ಮದಿಯಿಂದ ಜೀವನ ಸಾಗುತ್ತಿದೆ. ಬೇರೆಯವರ ಆಟೊ ಓಡಿಸುವುದರಿಂದ ಆದಾಯ ಹೆಚ್ಚೇನೂ ಇಲ್ಲದಿದ್ದರೂ ಮನಸ್ಸಿಗೆ ಸಂತೋಷವಾಗಿದೆ~ ಎಂದು ನಾಗಾವಿ ತಾಂಡಾದ ಯುವಕ ಸುರೇಶ್ ಪವಾರ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT