ಹಾವೇರಿ: ಭಾರತೀಯ ಜನತಾ ಪಕ್ಷದ ಆಳ್ವಿಕೆಯ ಐದು ವರ್ಷಗಳ ಅವಧಿಯಲ್ಲಿ ಸದಾ ಸುದ್ದಿಯಲ್ಲಿದ್ದ ಜಿಲ್ಲೆ ಹಾವೇರಿ. ಅಧಿಕಾರಕ್ಕೆ ಬಂದ ಪ್ರಾರಂಭದ ದಿನಗಳ ವಿಜಯೋತ್ಸಾಹಕ್ಕೆ `ದೃಷ್ಟಿಬೊಟ್ಟು' ಇಟ್ಟಂತೆ ನಡೆದ ರೈತರ ಮೇಲಿನ ಗೋಲಿಬಾರ್, ಬಿಜೆಪಿ ತೊರೆದು ಬಂದ ಬಿ.ಎಸ್.ಯಡಿಯೂರಪ್ಪನವರ ಶಕ್ತಿ ಪ್ರದರ್ಶನದ ಸಮಾವೇಶ, ಒಂದು ಜಿಲ್ಲೆಯ ಬಹುಪಾಲು ಬಿಜೆಪಿ ಶಾಸಕರ ಪಕ್ಷಾಂತರ... ಎಲ್ಲವೂ ನಡೆದದ್ದು ಈ ಜಿಲ್ಲೆಯಲ್ಲಿ.

ಕಳೆದ ಚುನಾವಣೆಯಲ್ಲಿ ಇಲ್ಲಿನ ಆರರಲ್ಲಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಅವರಲ್ಲಿ ನಾಲ್ಕು ಮಂದಿಯ ಜತೆಗೆ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಿವರಾಜ್ ಸಜ್ಜನರ್ ಕೂಡಾ ಈಗ ಕೆಜೆಪಿ ಅಭ್ಯರ್ಥಿಗಳು. ಯಡಿಯೂರಪ್ಪ ಸ್ಪರ್ಧಿಸದೆ ಇದ್ದರೂ ಈ ಜಿಲ್ಲೆ ಅವರ ಪಾಲಿನ ಪ್ರತಿಷ್ಠೆಯ ಕಣ. ಇಲ್ಲಿ ಅವರು ಗೆದ್ದರೆ ಕೆಜೆಪಿ ಚುನಾವಣೆಯನ್ನು ಅರ್ಧ ಗೆದ್ದಂತೆ.

ತನ್ನನ್ನು ನಂಬಿಕೊಂಡು ಬೆನ್ನಹಿಂದೆ ಬಂದ ಐದು ಮಂದಿ ಬೆಂಬಲಿಗರನ್ನು ಇಲ್ಲಿ ಗೆಲ್ಲಿಸುವ ಜತೆಯಲ್ಲಿ ಕೊನೆಕ್ಷಣದಲ್ಲಿ ಕೈಕೊಟ್ಟ `ನೀಲಿ ಕಣ್ಣಿನ ಹುಡುಗ' ಬಸವರಾಜ್ ಬೊಮ್ಮಾಯಿ ಅವರನ್ನು ಸೋಲಿಸುವ ಸವಾಲು ಯಡಿಯೂರಪ್ಪನವರ ಮುಂದಿದೆ. ಇದಕ್ಕಾಗಿ ಜಾತಿ,ದುಡ್ಡು, ಕಣ್ಣೀರು ಎಲ್ಲವೂ ಬಳಕೆಯಾಗುತ್ತಿದೆ. ಸಾದರ ಜಾತಿಗೆ ಸೇರಿದ ಬೊಮ್ಮಾಯಿಯವರಿಗೆ ಇದಿರಾಗಿ ಸಂಖ್ಯೆಯಲ್ಲಿ ಹೆಚ್ಚಿರುವ ಮತ್ತು ಸಂಘಟನಾತ್ಮಕವಾಗಿ ಬಲವಾಗಿರುವ ಪಂಚಮಸಾಲಿ ಬಣಕ್ಕೆ ಸೇರಿರುವ ಬಾಪುಗೌಡ ಪಾಟೀಲರನ್ನು ಶಿಗ್ಗಾವಿ ಕ್ಷೇತ್ರದಲ್ಲಿ ಯಡಿಯೂರಪ್ಪ ಅಖಾಡಕ್ಕಿಳಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಕಣ್ಣುಮುಚ್ಚಿ ಬೊಮ್ಮಾಯಿ ಅವರನ್ನು ಬೆಂಬಲಿಸಿದ್ದ ಪಂಚಮಸಾಲಿ ಸಮುದಾಯ ಈಗ ಕಣ್ಣುಬಿಡುತ್ತಿರುವುದಕ್ಕೆ ಅಲ್ಲಲ್ಲಿ ನಡೆಯುತ್ತಿರುವ ಗುಪ್ತ ಸಭೆಗಳು ಸಾಕ್ಷಿ. `ಇಪ್ಪತ್ತರ ನಂತರ ಎಲ್ಲ ನಿರ್ಧಾರ ಆಗ್ತೈತಿ. ಅಲ್ಲಿಯ ವರೆಗೆ ಸುಮ್ಮನಿರಾಕ ಹೇಳ್ಯಾರೆ, ಅಜ್ಜಾವ್ರ (ಪಂಚಮಸಾಲಿ ಮಠದ ಸ್ವಾಮಿಗಳು) ಹೇಳ್ದಂಗ ಮಾಡ್ತೇವ್ರಿ' ಎನ್ನುವ ಶಿವಾನಂದ ಬಾಗೂರು ಹಿಂದಿನ ದಿನವಷ್ಟೇ ಇಂತಹದ್ದೇ ಗುಪ್ತಸಭೆಯಲ್ಲಿ ಭಾಗವಹಿಸಿ ಬಂದವ.

`ಯಡಿಯೂರಪ್ಪನವರ ಬೆನ್ನಿಗೆ ಬೊಮ್ಮಾಯಿ ಚೂರಿ ಹಾಕಿದರು' ಎನ್ನುವ ಸಾಮಾನ್ಯ ಅಭಿಪ್ರಾಯ ಜನತೆಯಲ್ಲಿದೆ. ಕೆಜೆಪಿ ಸಮಾವೇಶಕ್ಕೆ ಮುನ್ನ ಹಾವೇರಿಯ ಶಿವರಾಜ್ ಸಜ್ಜನರ್ ಮನೆಯಲ್ಲಿ ನಡೆದ `ಟೀ ಪಾರ್ಟಿ'ಯಲ್ಲಿಯೂ ಭಾಗವಹಿಸಿ ಬೆಂಬಲ ಸೂಚಿಸಿದ್ದ ಬೊಮ್ಮಾಯಿ ನಂತರ ಯಾಕೆ ಹಿಂದೆ ಸರಿದರು ಎನ್ನುವುದು ಎಲ್ಲರ ಕುತೂಹಲದ ಪ್ರಶ್ನೆ. ಬಿಜೆಪಿಯಲ್ಲಿಯೇ ಉಳಿದರೂ ಅಲ್ಲಿಯೂ ಇವರೇನು ಸರ್ವಜನಪ್ರಿಯರಲ್ಲ. ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಇದಿರಾಗಿ ಪ್ರತಿಸ್ಪರ್ಧಿಯೊಬ್ಬನನ್ನು ನಿಲ್ಲಿಸಬೇಕೆಂಬ ರಾಜಕೀಯ ಉದ್ದೇಶದಿಂದಲೇ ಯಡಿಯೂರಪ್ಪನವರು ಬೊಮ್ಮಾಯಿ ಅವರನ್ನು ಬೆಳೆಸಿದ್ದರು. ಇದಕ್ಕಾಗಿಯೇ ಜಲಸಂಪನ್ಮೂಲದಂತಹ ಪ್ರಮುಖ ಖಾತೆಯನ್ನು ವಹಿಸಿಕೊಡುವ ಜತೆಯಲ್ಲಿ ರಾಜಕೀಯ ಬೆಂಬಲವನ್ನು ಅವರಿಗೆ ಧಾರೆಯೆರೆದಿದ್ದರು. ಈ ಹುನ್ನಾರವನ್ನು ಬಲ್ಲ ಶೆಟ್ಟರ್ ಹೃತ್ಪೂರ್ವಕವಾಗಿ ಬೊಮ್ಮಾಯಿ ಗೆಲುವಿಗೆ ಪ್ರಯತ್ನಿಸುತ್ತಾರೆ ಎಂದು ಹೇಳಲಾಗದು.

ಹಾವೇರಿ ಜಿಲ್ಲೆಯಲ್ಲಿ ಯಡಿಯೂರಪ್ಪನವರ ಸೇನಾಪತಿ ಚನ್ನಬಸಪ್ಪ ಮಹಾಲಿಂಗಪ್ಪ ಉದಾಸಿ. ಬೊಮ್ಮಾಯಿಯವರಂತೆ ಉದಾಸಿಯವರಿಗೂ ಯಡಿಯೂರಪ್ಪನವರು ಪ್ರಮುಖವಾದ ಲೋಕೋಪಯೋಗಿ ಖಾತೆಯನ್ನು ನೀಡಿ ರಾಜಕೀಯವಾಗಿ ಪ್ರೊತ್ಸಾಹ ನೀಡಿದ್ದರು. ಮುಂಬೈ ಕರ್ನಾಟಕದ ಮಟ್ಟಿಗೆ ಉದಾಸಿ-ಬೊಮ್ಮಾಯಿ ಇಬ್ಬರೂ ಯಡಿಯೂರಪ್ಪನವರ ಎಡಗೈ-ಬಲಗೈಗಳಾಗಿದ್ದವರು. ಉದಾಸಿ ವಿಶ್ವಾಸ ಭಂಗಗೊಳಿಸದೆ ಯಡಿಯೂರಪ್ಪನವರ ಜತೆಯಲ್ಲಿಯೇ ಉಳಿದಿದ್ದಾರೆ.

ಪಕ್ಕದ ಬೆಳಗಾವಿ ಜಿಲ್ಲೆಯಲ್ಲಿ ಯಡಿಯೂರಪ್ಪನವರ ಇನ್ನೊಬ್ಬ ಬಂಟ ಉಮೇಶ್ ಕತ್ತಿ ಬಿಜೆಪಿ ಲೋಕಸಭಾ ಸದಸ್ಯನಾದ ತನ್ನ ಸೋದರನ ಕಾರಣಕ್ಕಾಗಿ ಪಕ್ಷದಲ್ಲಿಯೇ ಉಳಿದರೆಂದು ಹೇಳಲಾಗುತ್ತಿದೆ. ಅಂತಹ ಸಂದಿಗ್ಧ ಪರಿಸ್ಥಿತಿಯನ್ನು ಉದಾಸಿಯವರೂ ಎದುರಿಸಿದ್ದಾರೆ. ಆದರೆ ಬಿಜೆಪಿಯಿಂದ ಲೋಕಸಭೆಗೆ ಆಯ್ಕೆಯಾಗಿರುವ ಮಗನ ರಾಜಕೀಯ ಭವಿಷ್ಯವನ್ನು ಲೆಕ್ಕಿಸದೆ ಅವರು ಕೆಜೆಪಿ ಜತೆ ಗುರುತಿಸಿಕೊಂಡಿದ್ದಾರೆ.

ಬಿಜೆಪಿ ಈಗಾಗಲೇ ಲೋಕಸಭಾ ಸದಸ್ಯ ಶಿವಕುಮಾರ್ ಉದಾಸಿ ಅವರನ್ನು ಅಮಾನತ್‌ಗೊಳಿಸಿದೆ.ವೈಯಕ್ತಿಕವಾಗಿ ಉದಾಸಿ ಅವರಿಗೆ ತಾವು ಎದುರಿಸುತ್ತಿರುವ ಈ ಚುನಾವಣೆ ಸೆಮಿಫೈನಲ್, ಇನ್ನೊಂದು ವರ್ಷಕ್ಕೆ ಮಗ ಎದುರಿಸಲಿರುವ ಮುಂದಿನ ಲೋಕಸಭಾ ಚುನಾವಣೆಯೇ ಫೈನಲ್. ಈ ಹಿನ್ನೆಲೆಯಲ್ಲಿ ತಮ್ಮ ಹಾಗೂ ಮಗನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಹಾವೇರಿ ಜಿಲ್ಲೆಯಲ್ಲಿ ಕೆಜೆಪಿಯನ್ನು ಗೆಲ್ಲಿಸುವುದು ಉದಾಸಿ ಅವರಿಗೆ ಅನಿವಾರ್ಯ.

ತಾವೂ ಸೇರಿದಂತೆ ನಾಲ್ವರು ಹಾಲಿ ಶಾಸಕರಾದ ನೆಹರೂ ಓಲೇಕಾರ್ (ಹಾವೇರಿ) ಜಿ.ಶಿವಣ್ಣ (ರಾಣೆಬೆನ್ನೂರು), ಮತ್ತು ಸುರೇಶ್‌ಗೌಡ ಪಾಟೀಲ್ (ಬ್ಯಾಡಗಿ) ಕೆಜೆಪಿಯಲ್ಲಿರುವುದು ಉದಾಸಿ ಅವರು ಹೊಂದಿರುವ ಅನುಕೂಲತೆ. ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಾನಗಲ್, ಬ್ಯಾಡಗಿ ಮತ್ತು ಹಿರೇಕೆರೂರಿನಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿರುವುದು ಕೆಜೆಪಿ.

ಮೂಲತಃ ಜನತಾ ಪರಿವಾರಕ್ಕೆ ಸೇರಿದ್ದ ಉದಾಸಿ ಅವರಿಗೆ ಇದು ಎಂಟನೆ ಚುನಾವಣೆ. ಹಿಂದಿನ ಏಳು ಚುನಾವಣೆಗಳಲ್ಲಿ ಐದರಲ್ಲಿ ಗೆದ್ದಿದ್ದಾರೆ. ಹಿಂದಿನ ಏಳು ಚುನಾವಣೆಗಳಲ್ಲಿಯೂ ಉದಾಸಿ ಅವರಿಗೆ ಪ್ರತಿಸ್ಪರ್ಧಿಯಾಗಿದ್ದವರು ಕಾಂಗ್ರೆಸ್ ಪಕ್ಷದ ಮನೋಹರ್ ತಹಶೀಲ್ದಾರ್. ಈ ಬಾರಿಯೂ ಅವರೇ ಎದುರಾಳಿ. ವಿಚಿತ್ರವೆಂದರೆ ಚುನಾವಣೆಯಲ್ಲಿ ಜಾತಿ ಪ್ರಮುಖ ಪಾತ್ರವನ್ನು ವಹಿಸಲಿದೆ ಎಂದು ಹೇಳಲಾಗುತ್ತಿದ್ದರೂ ಇಬ್ಬರು ಅಭ್ಯರ್ಥಿಗಳಿಗೂ ಹೇಳಿಕೊಳ್ಳುವಂತಹ ಜಾತಿ ಬಲ ಇಲ್ಲ. ಉದಾಸಿ ಅವರ ಲಿಂಗಾಯತ ಬಣವಾದ ಬಣಜಿಗರ ಸಂಖ್ಯೆ ಅವರ ಸ್ವಂತ ಕ್ಷೇತ್ರವಾದ ಹಾನಗಲ್‌ನಲ್ಲಿ ಕಡಿಮೆ.

ಹಿಂದುಳಿದ ಬೆಸ್ತ ಜಾತಿಗೆ ಸೇರಿದ ಮನೋಹರ್ ತಹಶೀಲ್ದಾರ್ ಅವರ ಜಾತಿಯವರನ್ನು ದೂರದರ್ಶಕ ಹಿಡಿದುಕೊಂಡು ಹುಡುಕಬೇಕು. ಈ ದೃಷ್ಟಿಯಿಂದ ಹಾನಗಲ್ ಮಟ್ಟಿಗೆ ಚುನಾವಣೆ ಜಾತ್ಯತೀತವಾದುದು. `ಬಿಜೆಪಿಯಲ್ಲಿದ್ದಾಗ ಈ ವೈಶಿಷ್ಟತೆಯ ಲಾಭವನ್ನು ಪಡೆದುಕೊಳ್ಳಲಾಗಿರಲಿಲ್ಲ. ಪ್ರಾರಂಭದಿಂದಲೂ ನನ್ನನ್ನು ಬೆಂಬಲಿಸುತ್ತಾ ಬಂದಿದ್ದ ಮುಸ್ಲಿಂ ಮತದಾರರು ಬಿಜೆಪಿಯಿಂದ ಸ್ಪರ್ಧಿಸಿದ್ದ ಕಳೆದೆರಡು ಚುನಾವಣೆಗಳಲ್ಲಿ ದೂರವಾಗಿದ್ದರು. ಈಗ ಮತ್ತೆ ಹತ್ತಿರವಾಗಿದ್ದಾರೆ. ನಗರಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಸ್ಲಿಂ ಕೇರಿಗಳಲ್ಲಿಯೇ ನಮ್ಮ ಅಭ್ಯರ್ಥಿಗಳು ಗೆದ್ದಿರುವುದು ಇದಕ್ಕೆ ಸಾಕ್ಷಿ' ಎನ್ನುತ್ತಾರೆ ಸಿ.ಎಂ.ಉದಾಸಿ.

ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಹುಬ್ಬಳ್ಳಿ ಕೇಂದ್ರ ಸ್ಥಾನವಾಗಿರುವಂತೆ ಕೆಜೆಪಿಗೆ ಹಾವೇರಿ. ಪಕ್ಷದ ರಾಜ್ಯ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ಅಭ್ಯರ್ಥಿಗಳ ತವರೂರಾಗಿರುವ ಅವಿಭಜಿತ ಧಾರವಾಡ ಜಿಲ್ಲೆಯ ಚುನಾವಣೆ ಬಿಜೆಪಿ ಪಾಲಿಗೂ ಪ್ರತಿಷ್ಠೆಯ ಪ್ರಶ್ನೆ. ಕೆಜೆಪಿ-ಬಿಜೆಪಿ ನಡುವಿನ ನಿಜವಾದ ರಾಜಕೀಯ ಸಮರಕ್ಕೆ ಹಾವೇರಿ ಜಿಲ್ಲೆ ರಣರಂಗವಾಗಲಿದೆ. ಈ ಎರಡು ಪಕ್ಷಗಳ ಹೊಡೆದಾಟವನ್ನು ದೂರದಿಂದಲೇ ನೋಡುತ್ತಿರುವ ಕಾಂಗ್ರೆಸ್ ಪಕ್ಷ ಯುದ್ಧಕ್ಕಿಳಿಯದೆ ಯುದ್ಧದ ಲಾಭ ಪಡೆಯುವ ಲೆಕ್ಕಾಚಾರದಲ್ಲಿದೆ.

`ಅತ್ತ ಸಾಯಂಗಿಲ್ಲ, ಇತ್ತ ಬದುಕೊಂಗಿಲ್ಲ...'

ಚುನಾವಣಾ ರಾಜಕೀಯದ ಗದ್ದಲದಲ್ಲಿ ಐದು ವರ್ಷಗಳ ಹಿಂದೆ ರೈತರ ಮೇಲೆ ನಡೆದ ಗೋಲಿಬಾರ್ ಘಟನೆ ಈ ಜಿಲ್ಲೆಯ ಸಾಮಾನ್ಯ ಮತದಾರನ ನೆನೆಪಿನಿಂದಲೂ ಮರೆಯಾಗಿ ಹೋಗಿದೆ. ಮೃತಪಟ್ಟ ಇಬ್ಬರು ರೈತರಾದ ಪುಟ್ಟಪ್ಪ ಹೊನ್ನತ್ತಿ ಮತ್ತು ಸಿದ್ದಲಿಂಗಪ್ಪ ಚೂರಿ ಕುಟುಂಬಗಳ ಸದಸ್ಯರು ಕೂಡಾ `ಸಮಸ್ಯೆ ಏನೂ ಇಲ್ಲಾರಿ, ಆರಾಮವಾಗಿದ್ದೀವಿ' ಎಂದು ಹೇಳುವಷ್ಟು ನಿಶ್ಚಿಂತೆಯಾಗಿದ್ದಾರೆ. ಚುನಾವಣೆಯಲ್ಲಿ ಪ್ರಧಾನ ವಿಷಯವಾಗಿ ರಾಜಕೀಯ ಪಕ್ಷಗಳನ್ನು `ಸತ್ತವರು ರೈತರಲ್ಲ ಗೂಂಡಾಗಳು' ಎಂದು ನಾಲಗೆ ಸಡಿಲಬಿಟ್ಟು ಮಾತನಾಡಿದ್ದ ಹಾವೇರಿ ಶಾಸಕ ನೆಹರೂ ಓಲೇಕಾರ್ ಕೆಜೆಪಿಯಿಂದ ಮರು ಆಯ್ಕೆ ಬಯಸಿ ಕಣದಲ್ಲಿದ್ದಾರೆ. ಗೋಲಿಬಾರ್ ಘಟನೆಯ ಬಗ್ಗೆ ತನಿಖೆ ನಡೆಸಿದ್ದ ನ್ಯಾಯಮೂರ್ತಿ ಜಗನ್ನಾಥ್ ಶೆಟ್ಟಿ ಆಯೋಗದ ವರದಿ ವಿಧಾನಸೌಧದಲ್ಲಿ ಎಲ್ಲೋ ದೂಳು ತಿನ್ನುತ್ತಾ ಬಿದ್ದಿದೆ.

ಗಾಯಗೊಂಡಿದ್ದ ಹದಿಮೂರು ಮಂದಿ ಮಾತ್ರ ನರಕಯಾತನೆ ಅನುಭವಿಸುತ್ತಿದ್ದಾರೆ. `ಗುಂಡು ಬಿದ್ದು ಸತ್ತ್ ಹೋಗಿದ್ರೆ ಮನಿಮಂದಿಗೆ ಒಂದಿಷ್ಟ್ ರೊಕ್ಕ ಬರ‌್ತಿತ್ತು. ಈಗ ಅತ್ತ ಸಾಯಂಗಿಲ್ಲ, ಇತ್ತ ಬದುಕೊಂಗಿಲ್ಲ ತ್ರಿಸಂಕು ಸ್ಥಿತಿ ಆಗೈತೆ. ಇದರಿಂದ ಪಾರು ಮಾಡಿ' ಎಂದು ಕೈಮುಗಿಯುತ್ತಾನೆ ಆಲದಕಟ್ಟಿಯ ಅಬ್ದುಲ್ ರಜಾಕ್. ಇದೇ ಸ್ಥಿತಿ ಉಳಿದವರದ್ದು. ಗುಂಡು ತಗಲಿದ್ದ ಈತನ ಬಲಗೈ ಸಂಪೂರ್ಣ ನಿಷ್ಕ್ರೀಯವಾಗಿದೆ. ಹಮಾಲಿ ಕೆಲಸ ಮಾಡುತ್ತಿದ್ದ ಅಬ್ದುಲ್ ರಜಾಕ್ ಕುಟುಂಬಕ್ಕೆ ಈಗ ನಾಲ್ವರು ಹೆಣ್ಣುಮಕ್ಕಳು ಮಾಡುವ ಕೂಲಿ ಕೆಲಸವೇ ಜೀವನಾಧಾರ. ಇನ್ನೊಬ್ಬ ಗಾಯಾಳು ಹೆಡಿಗ್ಗೊಂಡದ ಮಲ್ಲಪ್ಪ ಬಣಕಾರ್ ಅವರದ್ದೂ ಇದೇ ಸ್ಥಿತಿ. ತೋಳಿಗೆ ಗುಂಡು ತಗಲಿದ ನಂತರ ಬೇಸಾಯ ಮಾಡಲಿಕ್ಕಾಗದೆ ಇದ್ದ ಎರಡು ಎಕರೆ ಹೊಲವನ್ನು ಲಾವಣಿಗೆ ಕೊಟ್ಟಿದ್ದಾರೆ.

`ಮೂರೂ ಹೊತ್ತು ತೋಳು ಹರಿತೈತಿ, ನೋವ್ ಮರ‌್ಯಾಕ್ ಇಂಜಕ್ಷನ್ ಚುಚ್ಚಿಸಿಕೊಂಡು ಜೀವ್ನಾ ಸಾಕಾಗಿಹೋಗೈತಿ' ಎನ್ನುತ್ತಾರೆ ಬಣಕಾರ್.ಪೊಲೀಸರ ಲಾಠಿ ಏಟಿನಿಂದಾಗಿ ಬಲ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿರುವ ನೆಲೋಗಲ್‌ನ ವೀರಭದ್ರ ಬಸವನಗೌಡರಿಗೆ ಆಗಾಗ ತಲೆ ಸುತ್ತುವುದರಿಂದ ಒಬ್ಬಂಟಿಯಾಗಿ ಮನೆಯಿಂದ ಹೊರಗೆ ಕಾಲಿಡುವ ಹಾಗಿಲ್ಲ. ಇವರೂ ಇದ್ದ ಮೂರು ಎಕರೆ ಜಮೀನನ್ನು ಲಾವಣಿಗೆ ಕೊಟ್ಟು ಅದರಿಂದ ಬರುವ ಆದಾಯದಿಂದ ಜೀವನ ಸಾಗಿಸುತ್ತಿದ್ದಾರೆ. ಈ ಗಾಯಾಳುಗಳಿಗೆಲ್ಲ ಪ್ರಾರಂಭದಲ್ಲಿ 25 ರಿಂದ 50 ಸಾವಿರ ರೂಪಾಯಿ ಕೊಟ್ಟು ಕೈತೊಳೆದುಕೊಂಡ ಸರ್ಕಾರ ಆ ಮೇಲೆ ಇವರ ಕಡೆ ಕಣ್ಣೆತ್ತಿ ನೋಡಿಲ್ಲ. ನ್ಯಾ.ಜಗನ್ನಾಥ್ ಶೆಟ್ಟಿ ಆಯೋಗ ಶಿಫಾರಸು ಮಾಡಿದಂತೆ ಗಾಯಾಳುಗಳಾಗಿರುವ ತಮಗೆ ತಲಾ ಮೂರು ಲಕ್ಷ ರೂಪಾಯಿ ನೀಡಬೇಕೆಂದು ಕೋರಿ ಕನಿಷ್ಠ ಹತ್ತು ಬಾರಿ ಬೆಂಗಳೂರಿಗೆ ಹೋಗಿ ಅರ್ಜಿ ನೀಡಿ ಬಂದಿದ್ದಾರೆ.

`ಗೋಲಿಬಾರ್ ನಡೆದದ್ದು ಬೀಜ ಮತ್ತು ಗೊಬ್ಬರಕ್ಕಾಗಿ ರೈತರು ನಡೆಸಿದ ಪ್ರತಿಭಟನೆಯನ್ನು ಹತ್ತಿಕ್ಕಲು. ಆ ಸಮಸ್ಯೆ ಈಗಲೂ ಇದೆ. ಈ ಜಿಲ್ಲೆಯಲ್ಲಿ ತುಂಗಾಭದ್ರಾ, ವರದಾ, ಕುಮದ್ವತಿ ಮತ್ತು ಧರ್ಮಾ ನದಿಗಳು ಹರಿಯುತ್ತಿದ್ದರೂ ನೀರಾವರಿ ಯೋಜನೆಗಳೇ ಇಲ್ಲ. ಏನಿದ್ದರೂ ಪಂಪ್‌ಸೆಟ್ ನೀರಾವರಿ. ಇವೆಲ್ಲವೂ ಚುನಾವಣೆಯ ಕಾಲದಲ್ಲಿ ಚರ್ಚೆಗೆ ಬರಬೇಕಿತ್ತು. ಯಾರೂ ಮಾತನಾಡುವವರೇ ಇಲ್ಲ. ರೈತರೂ ಪರಿಸ್ಥಿತಿಗೆ ಒಗ್ಗಿಹೋಗಿದ್ದಾರೆ. ಹನ್ನೆರಡು ವರ್ಷಗಳ ಹಿಂದೆ ಬಿಟಿ ಹತ್ತಿ ವಿರೋಧಿಸಿ ಚಳವಳಿ ನಡೆದ ಜಿಲ್ಲೆಯಲ್ಲಿ ಈಗ ರೈತರು ಅತಿಹೆಚ್ಚಿನ ಪ್ರದೇಶದಲ್ಲಿ ಬಿಟಿ ಹತ್ತಿ ಬೆಳೆಯುತ್ತಿದ್ದಾರೆ' ಎಂದು ದೀರ್ಘ ನಿಟ್ಟುಸಿರು ಬಿಟ್ಟರು ಕರ್ನಾಟಕ ರಾಜ್ಯ ರೈತ (ಚುನಾವಣೇತರ) ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಗುರುಮಠ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.