ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿದಾಯಿಯಲ್ಲಿ ತಪ್ಪಿದ್ದರೆ ಕೋರ್ಟ್‌ಗೆ ಹೋಗಿ’

Last Updated 4 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸುವರ್ಣಸೌಧ (ಬೆಳಗಾವಿ): ಅಲ್ಪಸಂಖ್ಯಾತ ಸಮುದಾಯದ ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ನೆರವು ನೀಡಲು ಜಾರಿಗೊಳಿಸಿರುವ ‘ಬಿದಾಯಿ’ ಯೋಜನೆ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂಬ ಭಾವನೆ ಇದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಸದಸ್ಯರಿಗೆ ಬುಧವಾರ ವಿಧಾನ ಪರಿಷತ್‌ನಲ್ಲಿ ಸವಾಲು ಹಾಕಿದರು.

ಪೂರಕ ಅಂದಾಜುಗಳ ಮೇಲಿನ ಚರ್ಚೆಯ ಕೊನೆಯಲ್ಲಿ ಮಾತನಾಡಿದ ಬಿಜೆಪಿಯ ಭಾರತಿ ಶೆಟ್ಟಿ ಅವರು ‘ಬಿದಾಯಿ’ ಯೋಜನೆಯನ್ನು ಎಲ್ಲರಿಗೂ ವಿಸ್ತರಿಸುವಂತೆ ಆಗ್ರಹಿಸಿದರು. ಇದಕ್ಕಾಗಿ ಕನಿಷ್ಠ ₨ 50 ಕೋಟಿ ಅನುದಾನವನ್ನು ಒದಗಿಸುವಂತೆ ಒತ್ತಾಯಿಸಿದರು. ಮುಖ್ಯಮಂತ್ರಿಯವರು ಉತ್ತರ ನೀಡುತ್ತಿದ್ದಾಗ ಮತ್ತೆ ಎದ್ದುನಿಂತ ಭಾರತಿ ಶೆಟ್ಟಿ, ‘ಮುಖ್ಯಮಂತ್ರಿ ಯವರೇ ನೀವು ಬಿದಾಯಿ ವಿಸ್ತರಣೆ ಘೋಷಣೆ ಮಾಡದಿದ್ದರೆ ನಾನು ಸಭಾತ್ಯಾಗ ಮಾಡುತ್ತೇನೆ’ ಎಂದರು. ಆಗ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ನಮ್ಮ ಸರ್ಕಾರ ಎಲ್ಲ ಹೆಣ್ಣುಮಕ್ಕಳ ಪರವಾಗಿದೆ. ಯೋಜನೆ ವಿಸ್ತರಣೆ ಕುರಿತು ಪರಿಶೀಲನೆ ನಡೆಸಲಾಗುವುದು’ ಎಂದರು.

‘ಅಷ್ಟು ದಿನ ಹೋರಾಟ ಮಾಡಿದ ಯಡಿಯೂರಪ್ಪ ಅವರೇ ಸುಮ್ಮನಾಗಿದ್ದಾರೆ. ಈಗ ನೀವ್ಯಾಕೆ ಗದ್ದಲ ಮಾಡುತ್ತಿದ್ದೀರಿ. ನೀವು ಹೇಳಿದ ಹಾಗೆಯೇ ಎಲ್ಲವನ್ನೂ ಮಾಡಲು ಸಾಧ್ಯವೇ’ ಎಂದು ಸಿದ್ದರಾಮಯ್ಯ ಅವರು ಭಾರತಿ ಶೆಟ್ಟಿ ಅವರನ್ನು ಪ್ರಶ್ನಿಸಿದರು. ಆಗ ಎದ್ದುನಿಂತ ಬಿಜೆಪಿಯ ಗೋ.ಮಧುಸೂದನ್‌ ಅವರು, ‘ಅಲ್ಪಸಂಖ್ಯಾತರನ್ನು ಓಲೈಸಲು ನೀವು ಈ ಯೋಜನೆ ಜಾರಿಗೆ ತಂದಿದ್ದೀರಿ. ಅದಕ್ಕಾಗಿ ನಾಡಿನ ಜನತೆಯ ಕ್ಷಮೆ ಕೇಳಿ’ ಎಂದು ಒತ್ತಾಯಿಸಿದರು. ‘ನಾನೇಕೆ ಕ್ಷಮೆ ಕೇಳಬೇಕು. ನೀವು ಹೋಗಿ ಕ್ಷಮೆ ಕೇಳಿ’ ಎಂದು ಮುಖ್ಯಮಂತ್ರಿ ತಿರುಗೇಟು ನೀಡಿದರು.

ಸಂವಿಧಾನ ಹಿಡಿದು ನಿಂತರು: ನಂತರ ಸಂವಿಧಾನದ ಪ್ರತಿಯನ್ನು ಹಿಡಿದು ಎದ್ದುನಿಂತ ವಿರೋಧ ಪಕ್ಷದ ನಾಯಕ ಡಿ.ವಿ.ಸದಾನಂದ ಗೌಡ ಅವರು, ‘ಬಿದಾಯಿ ಯೋಜನೆಯ ಈಗಿನ ಸ್ವರೂಪ ಸಂವಿಧಾನದ 14 ಮತ್ತು 16ನೇ ವಿಧಿಗಳಿಗೆ ವಿರುದ್ಧವಾಗಿದೆ. ಕಾನೂನಿನ ಎದುರು ಎಲ್ಲರೂ ಸಮಾನರು ಮತ್ತು ಜಾತಿ, ಧರ್ಮ ಅಥವಾ ಹುಟ್ಟಿನ ಆಧಾರದಲ್ಲಿ ತಾರತಮ್ಯ ಮಾಡ ಬಾರದು ಎಂಬ ತತ್ವಕ್ಕೆ ಈ ಯೋಜನೆ ವಿರುದ್ಧವಾಗಿದೆ.

ಆದ್ದರಿಂದ ಎಲ್ಲರಿಗೂ ವಿಸ್ತರಿಸುವ ಮೂಲಕ ಅದನ್ನು ಸರಿಪಡಿಸಿ’ ಎಂದು ಒತ್ತಾಯ ಮಾಡಿದರು. ಆಗ ಸಿದ್ದರಾಮಯ್ಯ ಕೂಡ ಸಂವಿಧಾನದ ಪ್ರತಿ ಕೈಗೆತ್ತಿಕೊಂಡರು. ‘ಸಂವಿಧಾನದ ಪ್ರಕಾರ ಇಂತಹ ಯೋಜನೆಗಳಿಗೆ ಅವಕಾಶವಿದೆ. ಬಿಜೆಪಿಯವರು ತಮ ಗೆ ಅನುಕೂಲ ಆಗುವಂತೆ ಸಂವಿಧಾನ ಓದು ತ್ತಿದ್ದಾರೆ. ಸಂವಿಧಾನದ 14 ಮತ್ತು 16ನೇ ವಿಧಿಗಳಲ್ಲೇ ಇಂತಹ ಯೋಜನೆಗಳ ಜಾರಿಗೆ ಅವಕಾಶವಿದೆ’ ಎಂದರು.

ಮುಖ್ಯಮಂತ್ರಿ ಸವಾಲು: ಮುಖ್ಯಮಂತ್ರಿಯವರು ಉತ್ತರ ನೀಡುತ್ತಿರುವಾಗಲೇ ಬಿಜೆಪಿ ಸದಸ್ಯರು ಗದ್ದಲ ನಡೆಸಿದರು. ಸರ್ಕಾರ ಮುಸ್ಲಿಮರನ್ನು ಓಲೈಸಲು ಯೋಜನೆ ಜಾರಿಗೆ ತಂದಿದೆ. ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯಲು ಯತ್ನಿಸುತ್ತಿದೆ ಎಂಬ ಆರೋಪ ಮಾಡಿದರು.

ಆಗ ಸಿಟ್ಟಿಗೆದ್ದ ಸಿದ್ದರಾಮಯ್ಯ, ‘ಸಂವಿಧಾನದ ಪ್ರಕಾರವೇ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಅದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದಾದರೆ ಕೋರ್ಟ್‌ಗೆ ಹೋಗಿ. ಅಲ್ಲಿ ಪ್ರಶ್ನೆ ಮಾಡಿ’ ಎಂದು ಸವಾಲು ಹಾಕಿದರು. ನಂತರವೂ ಕೆಲಕಾಲ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ವಾಕ್ಸಮರ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT