ಪಡಾಂಗ್: ಇಂಡೋನೇಷ್ಯಾದ ಸುಮಾತ್ರ ದ್ವೀಪದಲ್ಲಿ ಧಾರಾಕಾರ ಮಳೆಯಿಂದ ಭೂಕುಸಿತ ಉಂಟಾಗಿ ಅನಧಿಕೃತ ಚಿನ್ನದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ 15 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಪಶ್ಚಿಮ ಸುಮಾತ್ರ ಪ್ರಾಂತ್ಯದ ದೂರದ ಸೊಲೊಕ್ ಜಿಲ್ಲೆಯಲ್ಲಿ ಗ್ರಾಮಸ್ಥರು ಚಿನ್ನದ ಕಣಗಳಿಗಾಗಿ ಅಗೆಯುವಾಗ ಹತ್ತಿರದ ಬೆಟ್ಟಗಳಿಂದ ಕೆಸರುಮಣ್ಣು ಕುಸಿದಿದೆ ಎಂದು ಸ್ಥಳೀಯ ವಿಪತ್ತು ತಡೆ ಸಂಸ್ಥೆಯ ಮುಖ್ಯಸ್ಥ ಇರ್ವಾನ್ ಎಫೆಂಡಿ ತಿಳಿಸಿದ್ದಾರೆ.
ಕನಿಷ್ಠ 25 ಮಂದಿ ಮಣ್ಣಿನಡಿ ಸಿಲುಕಿದ್ದು, ಮೂವರನ್ನು ಜೀವಂತವಾಗಿ ಹೊರತೆಗೆಯಲಾಗಿದೆ. ಇನ್ನೂ ಹತ್ತಾರು ಮಂದಿ ನಾಪತ್ತೆಯಾಗಿದ್ದಾರೆ. ಘಟನೆ ನಡೆದ ನಗರಿ ಸುಂಗಾಯ್ ಅಬು ಗ್ರಾಮದಲ್ಲಿ ಶೋಧ ಕಾರ್ಯಕ್ಕೆ ಮಣ್ಣು ಕುಸಿತ, ಕತ್ತಲು ಮತ್ತು ದೂರವಾಣಿ ಸಂಪರ್ಕ ಕಡಿತದಿಂದಾಗಿ ಅಡ್ಡಿಯಾಗಿದೆ.
ಭೂಕುಸಿತ, ಪ್ರವಾಹ ಮತ್ತು ಸುರಂಗಗಳ ಕುಸಿತಗಳಿಂದಾಗಿ ಇಲ್ಲಿನ ಗಣಿ ಕಾರ್ಮಿಕರು ಅಪಾಯಕ್ಕೆ ಸಿಲುಕುತ್ತಿರುವುದು ಸಾಮಾನ್ಯವಾಗಿದೆ. ಏಪ್ರಿಲ್ 2022ರಲ್ಲಿ ಉತ್ತರ ಸುಮಾತ್ರದ ಮಾಂಡಲಿಂಗ್ ನತಾಲ್ ಜಿಲ್ಲೆಯಲ್ಲೂ ಭೂಕುಸಿತದಿಂದಾಗಿ ಚಿನ್ನದ ಗಣಿಯಲ್ಲಿ 12 ಮಹಿಳೆಯರು ಮೃತಪಟ್ಟಿದ್ದರು. ಉತ್ತರ ಸುಲಾವೆಸಿ ಪ್ರಾಂತ್ಯದಲ್ಲಿ ಅನಧಿಕೃತ ಚಿನ್ನದ ಗಣಿಯಲ್ಲಿ 2019ರಲ್ಲಿ ಮರದ ಮೇಲ್ಸೇತುವೆ ಭಾಗಶಃ ಕುಸಿದು 40 ಮಂದಿ ಸಮಾಧಿಯಾಗಿದ್ದರು.