ಹೂಸ್ಟನ್: ಅಮೆರಿಕದ ಟೆಕ್ಸಾಸ್‌ನಲ್ಲಿ 90 ಅಡಿ ಎತ್ತರದ ಭಗವಂತ ಹನುಮಂತನ ಕಂಚಿನ ಮೂರ್ತಿಯನ್ನು ಅನಾವರಣಗೊಳಿಸಲಾಗಿದೆ.
ಮೈಲಿಗಳ ದೂರದಿಂದಲೂ ಕಾಣುವ ಈ ಮೂರ್ತಿಯು ಅಮೆರಿಕದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಭೂದೃಶ್ಯದಲ್ಲಿ ಹೊಸ ಮೈಲಿಗಲ್ಲಾಗಿದೆ ಎಂದು ವರದಿ ತಿಳಿಸಿದೆ. ಅಮೆರಿಕದ 3ನೇ ಅತಿ ದೊಡ್ಡ ಮೂರ್ತಿ ಸಹ ಇದಾಗಿದೆ.
ಭಾರತದ ಹೊರಗಿನ ಅತಿ ಎತ್ತರದ ಹನುಮಂತನ ಮೂರ್ತಿ ಇದಾಗಿದ್ದು, ಟೆಕ್ಸಾಸ್‌ನಲ್ಲೇ ಅತಿ ಎತ್ತರದ ಮೂರ್ತಿಯೂ ಹೌದು. ಅಮೆರಿಕದಲ್ಲಿ 3ನೇ ಅತಿ ಎತ್ತರದ ಪ್ರತಿಮೆ ಎಂದು ಸ್ಟ್ಯಾಚ್ಯು ಆಫ್ ಯುನಿಯನ್ ಸಂಘಟನೆ ಹೇಳಿದೆ.
ನ್ಯೂಯಾರ್ಕ್‌ನಲ್ಲಿರುವ 151 ಅಡಿ ಎತ್ತರದ ಸ್ಟ್ಯಾಚ್ಯು ಆಫ್ ಲಿಬರ್ಟಿ ಮತ್ತು ಫ್ಲಾರಿಡಾದ ಸಮುದ್ರ ತೀರದಲ್ಲಿರುವ 110 ಅಡಿ ಎತ್ತರದದ ಪೆಗಾಸಸ್ ಅಂಡ್ ಡ್ರ್ಯಾಗನ್ ಪ್ರತಿಮೆಗಳು ಅಮೆರಿಕದ ಅತ್ಯಂತ ಎತ್ತರದ ಪ್ರತಿಮೆಗಳಾಗಿವೆ.
‘ದಿ ಸ್ಟ್ಯಾಚ್ಯು ಆಫ್ ಯೂನಿಯನ್ ಹನುಮಂತನ ಮೂರ್ತಿ’ಯನ್ನು ಶುಗರ್ ಲ್ಯಾಂಡ್‌ನ ಶ್ರೀ ಅಷ್ಟಲಕ್ಷ್ಮೀ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಆಗಸ್ಟ್ 15ರಿಂದ 18ರವರೆಗೆ ನಡೆದ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯು ನಿಸ್ವಾರ್ಥ, ಏಕತೆ ಮತ್ತು ಭಕ್ತಿಯ ದ್ಯೋತಕವಾಗಿದೆ. ಸೀತೆ ಮತ್ತು ರಾಮನನ್ನು ಆಂಜನೇಯ ಒಗ್ಗೂಡಿಸಿದ್ದ. ಹಾಗಾಗಿ, ಪ್ರತಿಮೆಗೆ ‘ದಿ ಸ್ಟ್ಯಾಚ್ಯು ಆಫ್ ಯೂನಿಯನ್ ಹನುಮಂತನ ಮೂರ್ತಿ’ಎಂದು ಹೆಸರಿಡಲಾಗಿದೆ ಎಂದು ಸಂಘಟನೆ ತಿಳಿಸಿದೆ.
'ಈ ವಿಸ್ಮಯಕಾರಿ ರಚನೆಯು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಚಿನ್ನಜೀಯರ್ ಸ್ವಾಮೀಜಿ ಮತ್ತು ಹೆಸರಾಂತ ವೈದಿಕ ವಿದ್ವಾಂಸರ ದೂರದೃಷ್ಟಿಯ ಪ್ರಯತ್ನದ ಫಲವಾಗಿದೆ, ಅವರು ಯೋಜನೆಯನ್ನು ಉತ್ತರ ಅಮೆರಿಕದ ಆಧ್ಯಾತ್ಮಿಕ ಕೇಂದ್ರಬಿಂದುವಾಗಿ ರೂಪಿಸಿದ್ದಾರೆ" ಎಂದು ಸಂಘಟಕರು ಹೇಳಿದ್ದಾರೆ.