ರಫಾ (ಗಾಜಾ ಪಟ್ಟಿ): ಇಸ್ರೇಲ್ ಹಾಗೂ ಹಮಾಸ್ ನಡುವಿನ ಯುದ್ಧವು ಗುರುವಾರ 27ನೇ ದಿನಕ್ಕೆ ಕಾಲಿಟ್ಟಿದ್ದು, ಇಲ್ಲಿಯವರೆಗೆ 18 ವರ್ಷದೊಳಗಿನ 3,760 ಪ್ಯಾಲೆಸ್ಟೀನ್ ಮಕ್ಕಳು ಮೃತಪಟ್ಟಿದ್ದಾರೆ ಎಂದು ಗಾಜಾ ಪಟ್ಟಿಯ ಆರೋಗ್ಯ ಸಚಿವಾಲಯ ಹೇಳಿದೆ.
‘9,061 ಪ್ಯಾಲೆಸ್ಟೀನ್ ನಾಗರಿಕರು ಮೃತಪಟ್ಟಿದ್ದಾರೆ’ ಎಂದು ಸಚಿವಾಲಯದ ವಕ್ತಾರ ಡಾ.ಅಶ್ರಫ್ ಅಲ್ ಕುದ್ರಾ ಮಾಹಿತಿ ನೀಡಿದ್ದಾರೆ.
ಹಮಾಸ್ ಆಡಳಿತಕ್ಕೆ ಒಳಪಟ್ಟ ಈ ಸಚಿವಾಲಯದಲ್ಲಿ ಅಧಿಕೃತ ವೈದ್ಯರು ಹಾಗೂ ಅನುಭವಿ ನಾಗರಿಕ ಸೇವಾ ಅಧಿಕಾರಿಗಳು ಇಲ್ಲ. ಆದರೆ, ಸಚಿವಾಲಯವು ಹಿಂದಿನ ಯುದ್ಧಗಳ ವೇಳೆ ಸಾವುನೋವಿನ ಬಗ್ಗೆ ನೀಡಿದ್ದ ಅಂಕಿ–ಅಂಶಗಳು ವಿಶ್ವಸಂಸ್ಥೆ ನಡೆಸಿದ ಸ್ವಯಂ ತನಿಖೆ ಹಾಗೂ ಇಸ್ರೇಲ್ ನೀಡಿದ್ದ ಮಾಹಿತಿಯ ಜತೆಗೆ ತಾಳೆ ಹಾಕಲು ನೆರವಾಗಿದ್ದವು.
ಮೃತಪಟ್ಟ ಮಕ್ಕಳ ಪೈಕಿ ಹಸುಗೂಸುಗಳು, ಅಂಬೆಗಾಲಿಡುತ್ತಿರುವ ಚಿಣ್ಣರೂ ಇದ್ದಾರೆ. ವಾಯು ಹಾಗೂ ಕ್ಷಿಪಣಿ ದಾಳಿಯಿಂದಾಗಿ ಉರುಳಿಬಿದ್ದ ಹಲವು ಕಟ್ಟಡಗಳ ಅಡಿಯಲ್ಲಿ ಮಕ್ಕಳು ಸಿಲುಕಿದ್ದರಿಂದ ಈ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಸಚಿವಾಲಯವು ಅಕ್ಟೋಬರ್ 26ರಂದು ನೀಡಿದ್ದ ಅಂಕಿಅಂಶ ಆಧರಿಸಿ ಎಪಿ ಸುದ್ದಿಸಂಸ್ಥೆ ಕೂಡ ಸಾವಿನ ಸಂಖ್ಯೆ ಬಗ್ಗೆ ವಿಶ್ಲೇಷಣೆ ನಡೆಸಿದೆ. ಮೃತಪಟ್ಟವರಲ್ಲಿ 12 ವರ್ಷದೊಳಗಿನ 2,001 ಹಾಗೂ ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ 615 ಚಿಣ್ಣರು ಇದ್ದಾರೆ.
ಗಾಜಾ ಪಟ್ಟಿಯಲ್ಲಿರುವ ವೈದ್ಯರ ಮಾಹಿತಿ ಪ್ರಕಾರ, ಏಳು ಸಾವಿರಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ.
‘ಮನೆಗಳು ಕುಸಿದು ಬಿದ್ದಿದ್ದರಿಂದ ಮಕ್ಕಳ ಸಾವಿನ ಸಂಖ್ಯೆ ದ್ವಿಗುಣಗೊಂಡಿದೆ’ ಎಂದು ಲೇಖಕ ಆಡಮ್ ಅಲ್ ಮಧೌನ್ ಹೇಳುತ್ತಾರೆ. ಅಂದ ಹಾಗೆ ಅವರ ನಾಲ್ಕು ವರ್ಷದ ಪುತ್ರಿ ತೀವ್ರಗಾಯಗೊಂಡಿದ್ದು, ದೇರ್-ಅಲ್-ಬಾಲಾಹ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
‘ಗಾಜಾ ಪಟ್ಟಿಯು ಸಾವಿರಾರು ಮಕ್ಕಳ ಸ್ಮಶಾನ ಭೂಮಿಯಾಗಿ ಮಾರ್ಪಟ್ಟಿದೆ’ ಎಂದು ಯುನಿಸೆಫ್‌ನ ವಕ್ತಾರ ಜೇಮ್ಸ್ ಎಲ್ಡರ್ ಆತಂಕ ವ್ಯಕ್ತಪಡಿಸಿದ್ದಾರೆ.
‘ಗಾಜಾ ಪಟ್ಟಿಯು ಪೋಷಕರ ಪಾಲಿಗೆ ಶಾಪವಾಗಿ ಪರಿಣಮಿಸಿದೆ’ ಎಂದು ಹೇಳುತ್ತಾರೆ ಯುದ್ಧದಿಂದಾಗಿ ತನ್ನ ಎಂಟು ವರ್ಷದ ಪುತ್ರಿಯನ್ನು ಕಳೆದುಕೊಂಡಿರುವ ಅಹ್ಮದ್ ಮೊದಾವಿಖ್.
ಇಸ್ರೇಲ್ ವಾದವೇನು?:
ಹಮಾಸ್ ಬಂಡುಕೋರರ ನೆಲೆಗಳಷ್ಟೇ ನಮ್ಮ ವಾಯು ದಾಳಿಯ ಗುರಿಯಾಗಿವೆ. ಆದರೆ, ಹಮಾಸ್, ಪ್ಯಾಲೆಸ್ಟೀನ್ ನಾಗರಿಕರನ್ನು ತನ್ನ ಗುರಾಣಿಯಾಗಿ ಬಳಸಿಕೊಳ್ಳುತ್ತಿದೆ. ಅವರು ಹಾರಿಸಿದ 500ಕ್ಕೂ ಹೆಚ್ಚು ಕ್ಷಿಪಣಿಗಳು ಗುರಿ ತಪ್ಪಿ ಗಾಜಾ ಪಟ್ಟಿಯ ಮೇಲೆ ಬಿದ್ದಿವೆ. ಇದರಿಂದ ಪ್ಯಾಲೆಸ್ಟೀನ್ ನಾಗರಿಕರ ಸಾವಿನ ಸಂಖ್ಯೆ ಹೆಚ್ಚಿದೆ ಎಂದು ಇಸ್ರೇಲ್ ವಾದಿಸಿದೆ.
ಹಮಾಸ್ ನಡೆಸಿದ ದಾಳಿಗೆ 1,400ಕ್ಕೂ ಹೆಚ್ಚು ಇಸ್ರೇಲ್ ಪ್ರಜೆಗಳು ಮೃತಪಟ್ಟಿದ್ದಾರೆ. ಇವರಲ್ಲಿ ಶಿಶುಗಳು, ಮಕ್ಕಳು ಜೀವ ಕಳೆದುಕೊಂಡಿದ್ದಾರೆ. 30ಕ್ಕೂ ಹೆಚ್ಚು ಚಿಣ್ಣರು ಸೇರಿದಂತೆ 240 ಜನರನ್ನು ಹಮಾಸ್ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದೆ ಎಂದು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.