ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ದರ ಇಳಿಕೆ ಬೆನ್ನಲ್ಲೇ ಭಾರತವನ್ನು ಹೊಗಳಿದ ಇಮ್ರಾನ್ ಖಾನ್: ಕಾರಣ ಇಲ್ಲಿದೆ...

ಅಕ್ಷರ ಗಾತ್ರ

ಇಸ್ಲಾಮಾಬಾದ್: ಭಾರತದ ಸ್ವತಂತ್ರ ವಿದೇಶಾಂಗ ನೀತಿಗಳ ಬಗ್ಗೆ ಇತ್ತೀಚೆಗೆ ಮುಕ್ತ ಕಂಠದಿಂದ ಶ್ಲಾಘಿಸಿದ್ದ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇದೀಗ ಮತ್ತೆ ನೆರೆ ದೇಶವನ್ನು ಶ್ಲಾಘಿಸಿದ್ದಾರೆ.

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಕುರಿತ ವರದಿಯೊಂದರ ತುಣುಕನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪಾಕಿಸ್ತಾನ ಸರ್ಕಾರವನ್ನು ಟೀಕಿಸಿದ್ದಾರೆ.

‘ಕ್ವಾಡ್ ಸದಸ್ಯ ರಾಷ್ಟ್ರವಾದರೂ ಅಮೆರಿಕದ ಒತ್ತಡಕ್ಕೆ ಮಣಿಯದ ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸುವ ಮೂಲಕ ಜನರಿಗೆ ನೆರವಾಗಿದೆ. ಸ್ವತಂತ್ರ ವಿದೇಶಾಂಗ ನೀತಿಯ ಮೂಲಕ ಇಂಥದ್ದೇ ಸಾಧನೆ ಮಾಡಬೇಕೆಂದು ನಮ್ಮ ಸರ್ಕಾರ ಉದ್ದೇಶಿಸಿತ್ತು’ ಎಂದು ಅವರು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ನಮ್ಮ ಸರ್ಕಾರಕ್ಕೆ ಪಾಕಿಸ್ತಾನದ ಹಿತಾಸಕ್ತಿಯೇ ಮುಖ್ಯವಾಗಿತ್ತು. ಆದರೆ ದುರದೃಷ್ಟವಶಾತ್, ಸ್ಥಳೀಯ ಮೀರ್ ಜಾಫರ್ ಮತ್ತು ಮೀರ್ ಸಾದಿಕ್ ಬಾಹ್ಯ ಒತ್ತಡದಿಂದ ಸರ್ಕಾರವನ್ನು ಬದಲಾಯಿಸುವ ಷಡ್ಯಂತ್ರ ಮಾಡಿದರು. ಈಗ ಅವರು ದೇಶದ ಆರ್ಥಿಕತೆಯನ್ನು ವಿನಾಶದ ಪ್ರಪಾತಕ್ಕೆ ದೂಡುತ್ತಿದ್ದಾರೆ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಪಾಕಿಸ್ತಾನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಮ್ರಾನ್ ಖಾನ್ ವಿರುದ್ಧ ಪಾಕಿಸ್ತಾನ ಸಂಸತ್‌ನಲ್ಲಿ ಇತ್ತೀಚೆಗೆ ಅವಿಶ್ವಾಸ ನಿಲುವಳಿ ಮಂಡನೆಯಾಗಿದ್ದು, ಅವರಿಗೆ ಸೋಲಾಗಿತ್ತು. ಇದರೊಂದಿಗೆ ಅವರು, ಅವಿಶ್ವಾಸ ನಿರ್ಣಯದ ಮೂಲಕ ಪದಚ್ಯುತಗೊಂಡ ಪಾಕಿಸ್ತಾನದ ಮೊದಲ ಪ್ರಧಾನಿ ಎನಿಸಿಕೊಂಡಿದ್ದರು. ತಮ್ಮ ಪದಚ್ಯುತಿ ಹಿಂದೆ ವಿದೇಶಿ ಶಕ್ತಿಗಳ ಷಡ್ಯಂತ್ರವಿದೆ ಎಂದೂ ಅವರು ಆರೋಪಿಸಿದ್ದರು.

ಅಧಿಕಾರದಲ್ಲಿದ್ದಾಗಲೇ ಭಾರತವನ್ನು ಹೊಗಳಿದ್ದ ಇಮ್ರಾನ್

ಪಾಕಿಸ್ತಾನ ಪ್ರಧಾನಿಯಾಗಿದ್ದಾಗಲೇ ಇಮ್ರಾನ್ ಖಾನ್ ಭಾರತದ ವಿದೇಶಾಂಗ ನೀತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ರಷ್ಯಾ ಮೇಲೆ ಅಮೆರಿಕದ ಕಠಿಣ ನಿರ್ಬಂಧಗಳ ಹೊರತಾಗಿಯೂ, ರಷ್ಯಾದಿಂದ ಭಾರತ ಕಚ್ಚಾತೈಲವನ್ನು ಆಮದು ಮಾಡಿಕೊಂಡಿರುವುದನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದರು. ಭಾರತವು ಅಮೆರಿಕ ಸೇರಿ ಇತರ ದೇಶಗಳಿರುವ ಕ್ವಾಡ್ ಒಕ್ಕೂಟದ ಭಾಗವಾಗಿದೆ. ಆದರೆ ರಷ್ಯಾ ಮೇಲಿನ ಅಮೆರಿಕದ ನಿರ್ಬಂಧ ಇದ್ದಾಗ್ಯೂ, ಕಚ್ಚಾತೈಲ ತರಿಸಿಕೊಂಡಿದೆ. ಅದೇ ರೀತಿ ತಮ್ಮ ವಿದೇಶಾಂಗ ನೀತಿಯು ಪಾಕಿಸ್ತಾನದ ಜನತೆ ಪರವಾಗಿದೆ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT