ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ವರ್ಷದಲ್ಲಿ 207 ಪರಿಸರ ಹೋರಾಟಗಾರರ ಹತ್ಯೆ

Last Updated 24 ಜುಲೈ 2018, 9:09 IST
ಅಕ್ಷರ ಗಾತ್ರ

ಬೊಗೊಟಾ: ಪರಿಸರಕ್ಕೆ ಹಾನಿ ಮಾಡಿ ನಡೆಸುವಗಣಿಗಾರಿಕೆ ಮತ್ತು ಕೃಷಿಗೆ ವಿರೋಧ ವ್ಯಕ್ತಪಡಿಸಿದ ಭೂ ಮತ್ತು ಪರಿಸರ ಹೋರಾಟಗಾರರ ಪೈಕಿ ಕಳೆದ ವರ್ಷ ಪ್ರತಿ ವಾರನಾಲ್ಕು ಮಂದಿ ಹತ್ಯೆಯಾಗಿರುವುದಾಗಿ ಸಂಸ್ಥೆಯೊಂದು ಮಂಗಳವಾರ ಮಾಹಿತಿ ನೀಡಿದೆ.

ಇಂಗ್ಲೆಂಡ್‌ ಮೂಲದ ಗ್ಲೋಬಲ್‌ ವಿಟ್ನೆಸ್‌ 22 ರಾಷ್ಟ್ರಗಳಲ್ಲಿ ಸಮೀಕ್ಷೆ ನಡೆಸಿದ್ದು, 2017ರಲ್ಲಿ ಕನಿಷ್ಠ 207 ಪರಿಸರ ಕಾರ್ಯಕರ್ತರ ಹತ್ಯೆಯಾಗಿರುವ ಮಾಹಿತಿ ಹೊರ ಬಂದಿದೆ. ಮಾನವ ಹಕ್ಕುಗಳ ಸಂಸ್ಥೆ 2002ರಿಂದ ಸಂಗ್ರಹಿಸಿರುವ ಮಾಹಿತಿ ಪೈಕಿ 2017 ಅತಿ ಕ್ರೂರ ವರ್ಷ ಎಂದು ದಾಖಲಾಗಿದೆ.

ಸರಾಸರಿ ಐದು ಹತ್ಯೆಗಳಲ್ಲಿ ಕನಿಷ್ಠ ಮೂರು ಹತ್ಯೆ ಲ್ಯಾಟಿನ್‌ ಅಮೆರಿಕ ಭಾಗದಲ್ಲಿ ನಡೆದಿದೆ. ಬ್ರೆಜಿಲ್‌ನಲ್ಲಿ ಅತಿ ಹೆಚ್ಚು 57 ಕಾರ್ಯಕರ್ತರು ಕೊಲೆಯಾಗಿದ್ದಾರೆ. ಕೊಲಂಬಿಯಾದಲ್ಲಿ 24 ಹಾಗೂ ಮೆಕ್ಸಿಕೊದಲ್ಲಿ 15 ಮಂದಿ ಹತ್ಯೆಯಾಗಿರುವುದಾಗಿ ವಾರ್ಷಿಕ ವರದಿಯಲ್ಲಿ ಹೇಳಿದೆ.

ಈ ಬಹುತೇಕ ಹತ್ಯೆಗಳಲ್ಲಿ ಅಲ್ಲಿನ ಸರ್ಕಾರದ ಪಾತ್ರವಿದೆ. ಪೊಲೀಸರು, ಯೋಧರನ್ನೂ ಸಹ ಕೆಲವು ಭಾಗಗಳಲ್ಲಿ ಕಾರ್ಯಕರ್ತರ ಹತ್ಯೆಗೆ ಬಳಸಿಕೊಂಡಿರುವುದು ವರದಿಯಾಗಿದೆ. ಬ್ರೆಜಿಲ್‌ನ ಗ್ರಾಮೀಣ ಸಮುದಾಯ ಹಾಗೂ ಅಮೆಜಾನ್‌ ಮಳೆಕಾಡುಗಳ ಮೂಲ ನಿವಾಸಿಗಳು ಕ್ರೌರ್ಯದ ಪರಿಣಾಮ ಅನುಭವಿಸಿದ್ದಾರೆ.

ಪರಿಸರ ರಕ್ಷಣೆಗಾಗಿ ಹಾಗೂ ನೆಲ ಉಳಿಸಿಕೊಳ್ಳಲು ಜಗತ್ತಿನಾದ್ಯಂತ ಸರ್ಕಾರ, ಸಂಸ್ಥೆಗಳು ಹಾಗೂ ಕ್ರಿಮಿನಲ್‌ ಗ್ಯಾಂಗ್‌ಗಳ ವಿರುದ್ಧದ ಹೋರಾಟ ನಿರಂತರವಾಗಿದೆ ಎಂದು ಗ್ಲೋಬಲ್‌ ವಿಟ್ನೆಸ್‌ ಹೇಳಿದೆ. ಗಣಿಗಾರಿಕೆಗೂ ಹೆಚ್ಚು ಜಾನುವಾರು ಸಾಕಣೆಗಾಗಿ ಹುಲ್ಲುಗಾವಲು ವಿಸ್ತರಣೆ, ಕಬ್ಬು ಬೆಳೆ ಹಾಗೂ ಎಣ್ಣೆ ತೆಗೆಯಲು ಬಳಸುವ ಮರ–ಗಿಡಗಳ ಬೆಳೆಸುವ ಸಲುವಾಗಿ ಅರಣ್ಯ ನಾಶವಾಗುತ್ತಿದೆ. ಇದನ್ನು ತಪ್ಪಿಸಲು ಹೊರಟವರ ಹತ್ಯೆ ನಡೆಸಲಾಗಿದೆ.

ಆಹಾರ ಪದಾರ್ಥಗಳು ಹಾಗೂ ನಿತ್ಯದ ಇತರ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಕೃಷಿ ಉದ್ಯಮ ವಿಸ್ತರಣೆಗಾಗಿ ಪರಿಸರ ನಾಶ ನಡೆಯುತ್ತಿದೆ. ಅತಿ ವೇಗವಾಗಿ ಲಾಭ ಗಳಿಕೆಯ ಉದ್ದೇಶವೂ ಇದರ ಹಿಂದಿದೆ. ಫಿಲಿಪ್ಪೀನ್ಸ್‌ನಲ್ಲಿ ಕಳೆದ ವರ್ಷ 48 ಜನರ ಕೊಲೆಯಾಗಿದ್ದು, ಏಷ್ಯಾ ರಾಷ್ಟ್ರದಲ್ಲಿ ಹತ್ಯೆ ಪ್ರಮಾಣ ಶೇ 71 ಏರಿಕೆಯಾಗಿದೆ.

ಅನಧಿಕೃತ ಗಣಿಗಾರಿಕೆ ಮತ್ತು ಬೇಟೆ ತಡೆಯಲು ಮುಂದಾದ 19 ಮಂದಿ ಆಫ್ರಿಕಾದಲ್ಲಿ ಕೊಲೆಯಾಗಿದ್ದಾರೆ. ಇದರಲ್ಲಿ 12 ಜನ ಕಾಂಗೋ ಪ್ರಾಂತ್ಯದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT