ವಾಷಿಂಗ್ಟನ್: ಬಾಂಗ್ಲಾದೇಶದಲ್ಲಿ ಉಂಟಾಗಿರುವ ಅರಾಜಕತೆ ಹಾಗೂ ಸಾವುನೋವುಗಳ ಬಗ್ಗೆ ಹತ್ತಿರದಿಂದ ಗಮನಿಸುತ್ತಿದ್ದೇವೆ ಎಂದು ಅಮೆರಿಕ ತಿಳಿಸಿದೆ.
ಹೊಸದಾಗಿ ರಚನೆಯಾಗುತ್ತಿರುವ ಮಧ್ಯಂತರ ಸರ್ಕಾರ ಪ್ರಜಾಸತ್ತಾತ್ಮಕ ಆಶಯಗಳಿಗೆ ಅನುಗುಣವಾಗಿರಬೇಕು ಎಂದು ಸ್ಟೇಟ್ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಅವರು ಸುದ್ದಿಗೋಷ್ಟಿಯಲ್ಲಿ ಸೋಮವಾರ ತಿಳಿಸಿದ್ದಾರೆ.
ಬಾಂಗ್ಲಾದೇಶದ ಸಾಮಾನ್ಯ ಜನರು ತಮ್ಮದೇಯಾದ ಸರ್ಕಾರವನ್ನು ಹೊಂದುವುದನ್ನು ನಾವು ನೋಡಲು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ 300ಕ್ಕೂ ಹೆಚ್ಚು ಜನ ಮೃತರಾಗಿದ್ದಾರೆ. ಇದು ತೀರಾ ಕಳವಳಕಾರಿಯಾದ ಸಂಗತಿ. ಹಿಂಸೆಯನ್ನು ಕೊನೆಗಾಣಿಸುವಂತೆ ನಾವೂ ಮನವಿ ಮಾಡಿದ್ದೇವೆ. ಹಿಂಸೆಗೆ ಕಾರಣರಾದವರ ಮೇಲೆ ಸಂಬಂಧಿಸಿದವರು ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಇನ್ನು ಬಾಂಗ್ಲಾದೇಶದಲ್ಲಿ ಭಾರಿ ಹಿಂಸಾಚಾರ ನಡೆದ ಬೆನ್ನಲ್ಲೇ ಪ್ರಧಾನಿ ಶೇಖ್ ಹಸೀನಾ ಅವರು ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ದೇಶ ತೊರೆದಿದ್ದಾರೆ. ಈ ಮೂಲಕ ಅವರ ಸತತ 15 ವರ್ಷಗಳ ಸುದೀರ್ಘ ಆಡಳಿತ ಅಂತ್ಯವಾಗಿದೆ. ಅದಾದ ಬಳಿಕ, ದೇಶದ ಸೇನೆ ‘ಮಧ್ಯಂತರ ಸರ್ಕಾರ’ ರಚಿಸುವುದಾಗಿ ಘೋಷಿಸಿದೆ.