ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಅಧ್ಯಕ್ಷರ ಬಾಂಬ್‌ ನಿರೋಧಕ ಕಾರಿನ ವೈಶಿಷ್ಟ್ಯ ನಿಮಗೆಷ್ಟು ಗೊತ್ತು?

Last Updated 24 ಫೆಬ್ರುವರಿ 2020, 7:56 IST
ಅಕ್ಷರ ಗಾತ್ರ
ADVERTISEMENT
""

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಗಮನಕ್ಕೆ ಮೂರುದಿನಗಳಿಗೂ ಮೊದಲೇ ‘ದಿ ಬೀಸ್ಟ್‌’ ಹೆಸರಿನ ಐಷಾರಾಮ, ಅತ್ಯಂತ ಸುರಕ್ಷಿತ ಕಾರು ಭಾರತಕ್ಕೆ ಆಗಮಿಸಿತ್ತು.ಅಹಮದಾಬಾದ್‌ ಮತ್ತು ದೆಹಲಿಯಲ್ಲಿ ಟ್ರಂಪ್‌ ತಮ್ಮದೇ ಕಾರನ್ನು ಬಳಸುತ್ತಿದ್ದಾರೆ. ಅಹಮದಾಬಾದ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದ ಟ್ರಂಪ್‌ ಅವರು ಮೊಟೆರಾ ಕ್ರೀಡಾಂಗಣದತ್ತ ತೆರಳಲು ಈ ಕಾರು ಏರಿದರು. ಈ ಕಾರಿನ ವಿಶೇಷತೆಗಳ ಕುರಿತು ಇಲ್ಲಿ ವಿವರಿಸಲಾಗಿದೆ.

ಅಮೆರಿಕದ ಅಧ್ಯಕ್ಷರ ಅಧಿಕೃತ ಕಾರನ್ನು ‘ದಿ ಬೀಸ್ಟ್‌’ ಎಂದು ಕರೆಯಲಾಗುತ್ತದೆ. ಜನರಲ್‌ ಮೋಟರ್ಸ್‌ನ ಸಹಕಂಪನಿಯಾದ ‘ಕ್ಯಾಡಿಲಾಕ್’ ಈ ಕಾರನ್ನು ತಯಾರಿಸುತ್ತದೆ. ಇದು ಜಗತ್ತಿನಲ್ಲೇ ಅತ್ಯಂತ ಹೆಚ್ಚು ಸುರಕ್ಷಿತವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ‘ದಿ ಬೀಸ್ಟ್‌’ನಲ್ಲಿರುವ ಸವಲತ್ತುಗಳು ಅಚ್ಚರಿ ಮೂಡಿಸುತ್ತವೆ

ಬೂಟ್‌

ಬೂಟ್‌ನಲ್ಲಿ ಅಗ್ನಿನಂದಕ ಉಪಕರಣ, ಅಧ್ಯಕ್ಷರ ರಕ್ತದ ಗುಂಪಿನದ್ದೇ, ಗುಂಪಿನ ರಕ್ತದ ಪೋಚ್‌ಗಳು ಇರಲಿವೆ. ತುರ್ತು ಸಂದರ್ಭದಲ್ಲಿ ಕಾರಿನ ಸುತ್ತ ಹೊಗೆ ಆವರಿಸುವಂತೆ ಮಾಡಿ, ಪರದೆ ರೂಪಿಸುವ ‘ಸ್ಮೋಕ್‌ ಡಿಸ್ಪೆನ್ಸರ್‌’ ಸಹ ಇದರಲ್ಲಿ ಇರಲಿದೆ. ಚಾಲಕ ತನ್ನ ಸೀಟಿನಲ್ಲಿ ಕುಳಿತುಕೊಂಡೇ ಇವುಗಳನ್ನು ನಿಯಂತ್ರಿಸಬಹುದಾಗಿದೆ

ಇಂಧನ ಟ್ಯಾಂಕ್‌

ದಿ ಬೀಸ್ಟ್‌ನ ಇಂಧನ ಟ್ಯಾಂಕ್‌ ಎಲ್ಲಾ ಕಾರುಗಳಲ್ಲಿ ಇರುವಂತೆ, ಹಿಂಬದಿಯಲ್ಲೇ ಇದೆ. ಆದರೆ, ಇದು ಸ್ಫೋಟ ನಿರೋಧಕ ಟ್ಯಾಂಕ್. ಹೊರಗೆ ಸ್ಫೋಟವಾದರೆ, ಅಪಘಾತದಲ್ಲಿ ಟ್ಯಾಂಕ್‌ಗೆ ಹಾನಿಯಾದರೂ ಅದು ಸ್ಫೋಟಿಸುವುದಿಲ್ಲ. ಜತೆಗೆ ಇದಕ್ಕೆ ದಪ್ಪನೆಯ ಉಕ್ಕಿನ ಕವಚ ಇದೆ

ದೇಹ ಮತ್ತು ಬಾಗಿಲುಗಳು

ದಿ ಬೀಸ್ಟ್‌ನ ದೇಹವನ್ನು ಮೂರು ಸ್ವರೂಪದ ಲೋಹಗಳು, ಸೆರಾಮಿಕ್ ಪದರಗಳನ್ನು ಸೇರಿಸಿ ರೂಪಿಸಲಾಗಿದೆ. ಬಾಗಿಲುಗಳು 8 ಇಂಚಿನಷ್ಟು ದಪ್ಪದ ಲೋಹವನ್ನು ಹೊಂದಿವೆ, ದೇಹದ ಇತರ ಭಾಗಗಳಲ್ಲಿ ಬಳಸಿರುವ ಲೋಹದ ಪದರದ ದಪ್ಪ 5 ಇಂಚಿನಷ್ಟು ಇದೆ. ಇದು ಸೇನಾ ವಾಹನಗಳಿಗಿಂತಲೂ ದಪ್ಪ ಮತ್ತು ಸುರಕ್ಷಿತವಾದ ದೇಹ. ಬಾಂಬ್‌, ಗುಂಡು ಮತ್ತು ರಾಕೆಟ್‌ ದಾಳಿಯನ್ನು ತಡೆದುಕೊಳ್ಳುವಷ್ಟು ಗಟ್ಟಿಯಾಗಿದೆ. ಬಾಗಿಲುಗಳನ್ನು ಬಂದ್ ಮಾಡಿದರೆ, ಹೊರಗಿನ ಗಾಳಿ ಒಂದಿನಿತೂ ಒಳಗೆ ಹೋಗದಂತಹ ವ್ಯವಸ್ಥೆ ಇದೆ. ಜೈವಿಕ ಮತ್ತು ರಸಾಯನಿಕ ದಾಳಿಗಳಿಂದ ಅಧ್ಯಕ್ಷರನ್ನು ಕಾಪಾಡುವುದು ಈ ಸವಲತ್ತಿನ ಉದ್ದೇಶ

ಅಡಿಯಚ್ಚು

ದಿ ಬೀಸ್ಟ್‌ ಅನ್ನು ಷೆವರ್ಲೆ ಸಬ್‌ಅರ್ಬನ್ ಎಸ್‌ಯುವಿಯ ಛಾಸಿಸ್‌ನ (ಅಡಿಯಚ್ಚು) ಮೇಲೆ ರೂಪಿಸಲಾಗಿದೆ. ಷೆವರ್ಲೆ, ಜನರಲ್‌ ಮೋಟರ್ಸ್‌ ಒಡೆತನದ ಮತ್ತೊಂದು ವಾಹನ ತಯಾರಿಕಾ ಕಂಪನಿ. ನೆಲಬಾಂಬ್‌ ಮತ್ತು ಇತರ ಸ್ಫೋಟಕಗಳನ್ನು ತಡೆದುಕೊಳ್ಳುವಂತೆ ಇದನ್ನು ಮಾರ್ಪಾಡು ಮಾಡಲಾಗಿದೆ

ಕಿಟಕಿ ಗಾಜುಗಳು

ದಿ ಬೀಸ್ಟ್‌ನ ಕಿಟಕಿಯ ಗಾಜಿನ ದಪ್ಪ 5 ಇಂಚು. ಐದು ಪದರದಲ್ಲಿ ಗಾಜು ಮತ್ತು ಪಾಲಿಕಾರ್ಬೊನೇಟ್‌ ಅನ್ನು ಸಂಯೋಜಿಸಿ ಮಾಡಲಾಗಿರುವ ಈ ಗಾಜುಗಳು ಗುಂಡು ಮತ್ತು ಬಾಂಬ್‌ ನಿರೋಧಕ ಶಕ್ತಿ ಹೊಂದಿವೆ. ಚಾಲಕನ ಸೀಟಿನ ಪಕ್ಕದ ಗಾಜನ್ನು ಮಾತ್ರ ಕೆಳಗೆ ಇಳಿಸಬಹುದಾಗಿದೆ. ಅದೂ ಕೇವಲ ಮೂರು ಇಂಚಿನಷ್ಟು ಮಾತ್ರ

ಶಸ್ತ್ರಾಸ್ತ್ರ

ಕಾರಿನ ಮುಂಬದಿಯ ಪ್ರಯಾಣಿಕನ ಸೀಟಿನಲ್ಲಿ ಅತ್ಯಾಧುನಿಕ ರೈಫಲ್ ಇರುತ್ತದೆ. ಈ ಸೀಟಿನಲ್ಲಿ, ವಿಶೇಷ ಪರಿಣಿತಿ ಪಡೆದ ಒಬ್ಬ ಭದ್ರತಾ ಸಿಬ್ಬಂದಿ ಇರುತ್ತಾನೆ.ಕಾರಿನ ಮುಂಭಾಗದ ಗ್ರಿಲ್‌ನ ಬಳಿ ಎರಡು ಬಂದೂಕುಗಳನ್ನು ಅಳವಡಿಸಲಾಗಿದೆ. ತುರ್ತು ಸಂದರ್ಭದಲ್ಲಿ ಇವನ್ನು ಭದ್ರತಾ ಸಿಬ್ಬಂದಿ ಬಳಸುತ್ತಾನೆ. ಈ ಬಂದೂಕುಗಳ ಮಗ್ಗುಲಲ್ಲೇ ಆಶ್ರುವಾಯು ಷೆಲ್‌ ಲಾಂಚರ್‌ ಸಹ ಇದೆ.

ರನ್‌ಫ್ಲಾಟ್‌ ಟೈರ್‌

ಟೈರ್‌ಗಳು ಸಿಡಿದರೂ, ಹಲವು ಕಿ.ಮೀ.ನಷ್ಟು ದೂರದವರೆಗೂ ಚಲಾಯಿಸಬಹುದಾದ ‘ರನ್‌ಫ್ಲಾಟ್‌ ಟೈರ್‌’, ದಿ ಬೀಸ್ಟ್‌ನಲ್ಲಿದೆ. ಹೊರಗೆ ಕಾಣುವ ರಿಮ್ ಅಲ್ಲದೆ, ಟೈರ್‌ನ ಒಳಗೆ ಮತ್ತೊಂದು ರಿಮ್ ಇರಲಿದೆ. ಈ ರಿಮ್‌ಗೆ ಗಡಸು ರಬ್ಬರ್‌ನ ಹೊದಿಕೆ ಇದೆ. ಹೀಗಾಗಿ ಟೈರ್‌ ಸಿಡಿದರೂ, ದಿ ಬೀಸ್ಟ್‌ ಅನ್ನು ಚಲಾಯಿಸಿಕೊಂಡು ಹೋಗಬಹುದು. ತುರ್ತು ಸಂದರ್ಭಗಳಲ್ಲಿ ಈ ಸವಲತ್ತು ಉಪಯೋಗಕ್ಕೆ ಬರುತ್ತದೆ.

ಚಾಲಕ

ಅಮೆರಿಕದ ಸೀಕ್ರೆಟ್ ಸರ್ವಿಸ್ ಏಜೆನ್ಸಿ ಈ ಕಾರನ್ನು ನಿರ್ವಹಿಸುತ್ತದೆ. ಈ ಏಜೆನ್ಸಿಯ ಸಿಬ್ಬಂದಿಯೇ ಈ ಕಾರನ್ನು ಚಲಾಯಿಸುತ್ತಾರೆ. ಇವರಿಗೆ ವಿಶೇಷ ತರಬೇತಿ ನೀಡಲಾಗಿರುತ್ತದೆ. ಭಾರಿ ದೈತ್ಯವಾದ ದಿ ಬೀಸ್ಟ್‌ ಅನ್ನು ‘180 ಡಿಗ್ರಿ ಜೆ ಟರ್ನ್‌’ ಮಾಡುವಷ್ಟು ಪರಿಣಿತಿ ಈ ಚಾಲಕ ಹೊಂದಿರುತ್ತಾನೆ.

ಕಾರನ್ನು ಹಿಮ್ಮುಖವಾಗಿ (ರಿವರ್ಸ್‌) ವೇಗವಾಗಿ ಚಲಾಯಿಸಿ, ಇಂಗ್ಲಿಷ್‌ನ ‘ಜೆ’ ಅಕ್ಷರದ ಆಕೃತಿಯಲ್ಲಿ ಟರ್ನ್‌ ಪಡೆಯಬೇಕು. ನಂತರ ಒಂದಿನಿತೂ ವಿಳಂಬವಾಗದಂತೆ ಕಾರನ್ನು ಮುಂದಕ್ಕೆ (ಫಾರ್ವಾರ್ಡ್‌) ಚಲಾಯಿಸಬೇಕು.

- 9,200 ಕೆ.ಜಿ. ಕಾರಿನ ತೂಕ

- 6,200 ಸಿ.ಸಿ. ಎಂಜಿನ್‌ ಸಾಮರ್ಥ್ಯ

- 97 ಕಿ.ಮೀ. ಪ್ರತಿ ಗಂಟೆಗೆ ದಿ ಬೀಸ್ಟ್‌ನ ಗರಿಷ್ಠ ವೇಗ

- 22 ಅಡಿ ಕಾರಿನ ಉದ್ದ

ಆಧಾರ: ದಿ ಸ್ಟಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT