ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯರಿಗೆ ಗ್ರೀನ್‌ ಕಾರ್ಡ್‌: ಕಾಯುವಿಕೆ ಅವಧಿ ಕಡಿತಕ್ಕೆ ಅಮೆರಿಕನ್ ಸಂಸದರ ಮನವಿ

Published 29 ಜುಲೈ 2023, 13:50 IST
Last Updated 29 ಜುಲೈ 2023, 13:50 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದಲ್ಲಿ ಕಾಯಂ ಆಗಿ ನೆಲೆಸಲು ಅಗತ್ಯವಿರುವ ಗ್ರೀನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿರುವ ಭಾರತೀಯರು ಬಹಳ ವರ್ಷಗಳ ವರೆಗೆ ಕಾಯಬೇಕಾಗಿದೆ. ಈ ಕಾಯುವಿಕೆ ಅವಧಿ ಕಡಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಸಂಸದರ ಗುಂಪೊಂದು ಸರ್ಕಾರಕ್ಕೆ ಮನವಿ ಮಾಡಿದೆ.

ಸಂಸದರಾದ ರಾಜಾ ಕೃಷ್ಣಮೂರ್ತಿ ಹಾಗೂ ಲ್ಯಾರಿ ಬುಷಾನ್‌ ನೇತೃತ್ವದಲ್ಲಿ ಎರಡೂ ಪಕ್ಷಗಳಿಗೆ ಸೇರಿರುವ 56 ಸಂಸದರು ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್‌, ಆಂತರಿಕ ಭದ್ರತೆ ಕಾರ್ಯದರ್ಶಿ ಅಲೆಜಾಂಡ್ರೊ ಮೇಯರ್‌ಕಾಸ್ ಅವರಿಗೆ ಪತ್ರ ಬರೆದಿದ್ದಾರೆ.

ವಿಶೇಷ ಕೌಶಲ ಹೊಂದಿದ ವಿದೇಶಿಯರನ್ನು ನೇಮಕ ಮಾಡಿಕೊಳ್ಳಲು ಅಮೆರಿಕದ ಕಂಪನಿಗಳಿಗೆ ಅವಕಾಶವಿದೆ. ಈ ಕಂಪನಿಗಳಲ್ಲಿ ಉದ್ಯೋಗಕ್ಕೆ ಸೇರುವವರಿಗೆ ಎಚ್‌–1ಬಿ ವೀಸಾ ನೀಡಲಾಗುತ್ತದೆ. ಈ ವೀಸಾ ಹೊಂದಿರುವವರು ನಂತರ ಗ್ರೀನ್‌ ಕಾರ್ಡ್‌ಗಾಗಿಯೂ ಅರ್ಜಿ ಸಲ್ಲಿಸಬಹುದು.

ಈಗಿರುವ ನಿಯಮಗಳಂತೆ, ಒಂದು ದೇಶಕ್ಕೆ ಶೇ 7ರಷ್ಟು ಗ್ರೀನ್ ಕಾರ್ಡ್‌ಗಳನ್ನು ವಿತರಿಸಬೇಕು ಎಂಬ ಮಿತಿ ಇದೆ.

ಸದ್ಯ, ಗ್ರೀನ್‌ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವ ಭಾರತೀಯರ ಸಂಖ್ಯೆ ದೊಡ್ಡದು. ಶೇ 7ರ ಮಿತಿ ಹಾಗೂ ಬಾಕಿ ಇರುವ ಅರ್ಜಿಗಳನ್ನು ಪರಿಗಣಿಸಿದಲ್ಲಿ, ಈ ಕಾಯುವಿಕೆ ಅವಧಿ 195 ವರ್ಷಗಳಾಷ್ಟಗಲಿದೆ ಎಂದು ಅಧ್ಯಕ್ಷ ಜೋ ಬೈಡನ್‌ ಅವರಿಗೆ ಫೌಂಡೇಷನ್‌ ಫಾರ್ ಇಂಡಿಯಾ ಅಂಡ್‌ ಇಂಡಿಯನ್ ಡಯಾಸ್ಪೊರಾ ಸ್ಟಡೀಸ್‌ (ಎಫ್‌ಐಐಡಿಎಸ್‌) ಎಂಬ ಸಂಘಟನೆ ಸಲ್ಲಿಸಿರುವ ಮನವಿಯಲ್ಲಿ ವಿವರಿಸಿದೆ.

ಇಷ್ಟೊಂದು ಪ್ರಮಾಣದಲ್ಲಿ ಅರ್ಜಿಗಳು ಬಾಕಿ ಉಳಿಯುವುದರಿಂದ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (ಎಸ್‌ಟಿಇಎಂ) ಕ್ಷೇತ್ರಗಳಲ್ಲಿರುವ ಭಾರತೀಯ ವೃತ್ತಿಪರರಿಗೆ ಸಮಸ್ಯೆಯಾಗಲಿದೆ ಎಂದು ಸಂಘಟನೆ ಕಳವಳ ವ್ಯಕ್ತಪಡಿಸಿದೆ.

‘ಸಂಸದರು, ವಿವಿಧ ಸಂಘಟನೆಗಳು, ಕಾನ್ಸುಲರ್‌ ಸೇವೆಗಳ ಇಲಾಖೆ ಸೇರಿದಂತೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸುವ ಮೂಲಕ ಗ್ರೀನ್‌ ಕಾರ್ಡ್‌ಗಳ ವಿತರಣೆಗೆ ಸಂಬಂಧಿಸಿದ ಕಾಯುವಿಕೆ ಅವಧಿ ಕಡಿತಗೊಳಿಸಬೇಕೆಂಬ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳನ್ನು ಮುಂದುವರಿಸಿದ್ದೇವೆ’ ಎಂದು ಎಫ್‌ಐಐಡಿಎಸ್‌ನ ಪ್ರತಿನಿಧಿ ಕೆ.ಖಂಡೇರಾವ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT