ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೋಯಿಂಗ್‌ ಸ್ಟಾರ್‌ಲೈನರ್‌’ ಉಡಾವಣೆಗೆ ತಡೆ

ಗಗನನೌಕೆಯಲ್ಲಿ ತಾಂತ್ರಿಕ ದೋಷ * ಸುನಿತಾ 3ನೇ ಬಾಹ್ಯಾಕಾಶ ಯಾನ ಮುಂದಕ್ಕೆ
Published 7 ಮೇ 2024, 14:30 IST
Last Updated 7 ಮೇ 2024, 14:30 IST
ಅಕ್ಷರ ಗಾತ್ರ

ಕೇಪ್‌ ಕ್ಯಾನವೆರಲ್‌ (ಅಮೆರಿಕ) (ಪಿಟಿಐ): ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ಅವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಹೊತ್ತೊಯ್ಯಲು ‘ಬೋಯಿಂಗ್‌ ಸ್ಟಾರ್‌ಲೈನರ್‌’ ಬಾಹ್ಯಾಕಾಶ ನೌಕೆ ಸಜ್ಜಾಗಿದೆ ಎನ್ನಲಾಗಿತ್ತು. ಆದರೆ, ಉಡಾವಣೆಗೆ ಕೆಲವೇ ನಿಮಿಷಗಳು ಇರುವಾಗ ತಾಂತ್ರಿಕ ದೋಷ ಕಂಡುಬಂತು. ಹೀಗಾಗಿ ಉಡಾವಣೆಯನ್ನು ಮುಂದೂಡಲಾಯಿತು.

ಉಡಾವಣೆಯ ಮುಂದಿನ ದಿನಾಂಕವನ್ನು ಇನ್ನಷ್ಟೇ ಘೋಷಿಸಬೇಕಿದೆ.

ಫ್ಲಾರಿಡಾದ ಕೆನಡಿ ಸ್ಪೇಸ್‌ ಸೆಂಟರ್‌ನಿಂದ ಭಾರತೀಯ ಕಾಲಮಾನದ ಪ್ರಕಾರ ಮಂಗಳವಾರ ಬೆಳಿಗ್ಗೆ 8.04ಕ್ಕೆ ಈ ಗಗನನೌಕೆಯು ಉಡಾವಣೆಯಾಗಬೇಕಿತ್ತು. ಸುನಿತಾ ವಿಲಿಯಮ್ಸ್‌ ಮತ್ತೊಬ್ಬ ಗಗನಯಾತ್ರಿ ಬೆರ್ರಿ ವಿಲ್ಮೋರ್‌ ಅವರು ಗಗನನೌಕೆಯಲ್ಲಿ ಆಗಲೇ ಕುಳಿತಿದ್ದರು.

ಗಗನನೌಕೆ ಉಡಾವಣೆಯಾಗಲು 45 ನಿಮಿಷಗಳಷ್ಟೇ ಬಾಕಿ ಇತ್ತು. ಆಗ, ‘ಆಮ್ಲಜನಕ ಬಿಡುಗಡೆ ಕವಾಟವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ’ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಘೋಷಿಸಿತು. ಆ ಬಳಿಕ ಸುನಿತಾ ಮತ್ತು ಬೆರ್ರಿ ಅವರನ್ನು ಸುರಕ್ಷಿತವಾಗಿ ನೌಕೆಯಿಂದ ಹೊರಗೆ ಕರೆತರಲಾಯಿತು. 

ದಾಖಲೆ ಹೊಸ್ತಿಲಲ್ಲಿದ್ದ ಸುನಿತಾ: ಸುನಿತಾ ಅವರಿಗೆ ಇದು ಮೂರನೇ ಗಗನಯಾತ್ರೆ ಆಗಿತ್ತು. ಸತತ 322 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆಯುವ ಮೂಲಕ ಅವರು ದಾಖಲೆ ನಿರ್ಮಿಸಿದ್ದಾರೆ. ಈ ಯೋಜನೆ ಯಶಸ್ವಿಯಾಗಿದ್ದರೆ, ಖಾಸಗಿ ಸಂಸ್ಥೆಯೊಂದರ ಮಾನವಸಹಿತ ಬಾಹ್ಯಾಕಾಶ ಯೋಜನೆಯಲ್ಲಿ ಭಾಗಿಯಾದ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗುತ್ತಿದ್ದರು. 

ಸೋಮವಾರ ‘ಎನ್‌ಡಿಟಿವಿ’ಗೆ ಸಂದರ್ಶನ ನೀಡಿದ್ದ ಸುನಿತಾ, ಈ ಗಗನಯಾತ್ರೆ ವೇಳೆ ತಾವು ಗಣೇಶನ ಮೂರ್ತಿಯನ್ನು ಕೊಂಡೊಯ್ಯುವುದಾಗಿ ಹೇಳಿದ್ದರು. ತಮ್ಮ ಹಿಂದಿನ ಗಗನಯಾತ್ರೆಯಲ್ಲಿ ಅವರು ಭಗವದ್ಗೀತೆಯ ಪ್ರತಿಯನ್ನು ಕೊಂಡೊಯ್ದಿದ್ದರು. 

ಬೋಯಿಂಗ್‌ಗೆ ಮಹತ್ವದ ಯೋಜನೆ: ಬೋಯಿಂಗ್‌ ಸಂಸ್ಥೆಯ ಪ್ರಥಮ ಮಾನವಸಹಿತ ಅಂತರಿಕ್ಷಯಾನ ಯೋಜನೆ ಇದಾಗಿತ್ತು. 2019ರಲ್ಲಿ ಮಾನವರಹಿತ ಗಗನನೌಕೆಯನ್ನು ಈ ಸಂಸ್ಥೆ ಉಡಾಯಿಸಿತ್ತು. ಆದರೆ ಈ ಯೋಜನೆ ವಿಫಲವಾಗಿತ್ತು. ಬಳಿಕ ಮಾನವಸಹಿತ ಯೋಜನೆಗೆ ಕೈಹಾಕಿದ್ದ ಬೋಯಿಂಗ್‌ ಸಂಸ್ಥೆಗೆ ಆರಂಭದಿಂದಲೂ ತೊಡಕುಗಳು ಎದುರಾದವು. ಹಾಗಾಗಿ ಈ ಯೋಜನೆಯೂ ವಿಳಂಬವಾಯಿತು.

ಈ ಯೋಜನೆ ಯಶಸ್ವಿಯಾದರೆ, ‘ಬೋಯಿಂಗ್‌ ಸ್ಟಾರ್‌ಲೈನರ್‌’ ಗಗನನೌಕೆಯು ನಾಸಾದಿಂದ ಪ್ರಮಾಣೀಕೃತವಾಗುತ್ತದೆ ಮತ್ತು ದೀರ್ಘಾವಧಿಯ ಬಾಹ್ಯಾಕಾಶ ಯೋಜನೆಗಳನ್ನು ಕೈಗೊಳ್ಳುವ ಅವಕಾಶ ಪಡೆಯುತ್ತದೆ. 

ಬಾಹ್ಯಾಕಾಶ ಕೇಂದ್ರಗಳಿಗೆ ಗಗನಯಾತ್ರಿಗಳನ್ನು ಕರೆದೊಯ್ಯಲು ಮತ್ತು ಕರೆತರಲು ‘ಬೋಯಿಂಗ್‌’ ಮತ್ತು ಇಲಾನ್‌ ಮಸ್ಕ್ ಅವರ ‘ಸ್ಪೇಸ್‌ಎಕ್ಸ್‌’ ಸಂಸ್ಥೆಗಳನ್ನು ನಾಸಾವು ದಶಕದ ಹಿಂದೆಯೇ ನೇಮಕ ಮಾಡಿಕೊಂಡಿತ್ತು. 2020ರಿಂದಲೂ ಸ್ಪೇಸ್ಎಕ್ಸ್‌ ನಾಸಾಕ್ಕೆ ಉಪಗ್ರಹ ಸೇವೆ ಒದಗಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT