ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Sunita Williams: ಬಾಹ್ಯಾಕಾಶ ನಿಲ್ದಾಣ ತಲುಪಿದ ಸುನಿತಾ

Published 7 ಜೂನ್ 2024, 12:41 IST
Last Updated 7 ಜೂನ್ 2024, 12:41 IST
ಅಕ್ಷರ ಗಾತ್ರ

ಹ್ಯೂಸ್ಟನ್‌: ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ಮತ್ತು ಅವರ ಸಹಯಾತ್ರಿ ಬಚ್ ವಿಲ್ಮೋರ್‌ ಅವರು ಗುರುವಾರ ಯಶಸ್ವಿಯಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ್ದಾರೆ. 

ಇವರಿಬ್ಬರು ಪ್ರಯಾಣಿಸಿದ ‘ಸ್ಟಾರ್‌ಲೈನರ್‌’ ಗಗನನೌಕೆಯನ್ನು ಗುರುವಾರ ಮಧ್ಯಾಹ್ನ 1.34ಕ್ಕೆ ಬಾಹ್ಯಾಕಾಶ ನಿಲ್ದಾಣಕ್ಕೆ ಡಾಕ್‌ (ಕೂಡಿಕೊಳ್ಳುವ ಪ್ರಕ್ರಿಯೆ) ಮಾಡಲಾಯಿತು. ಡಾಕಿಂಗ್‌ ವೇಳೆ ತಾಂತ್ರಿಕ ದೋಷ ಕಂಡುಬಂದರೂ, ಅದನ್ನು ಸರಿಪಡಿಸಲಾಯಿತು.

58 ವರ್ಷದ ಸುನಿತಾ ಮತ್ತು 61 ವರ್ಷದ ವಿಲ್ಮೋರ್‌ ಅವರಿದ್ದ ‘ಸ್ಟಾರ್‌ಲೈನರ್‌’ ನೌಕೆಯನ್ನು ಫ್ಲಾರಿಡಾದ ‘ಕೇಪ್‌ ಕ್ಯಾನವೆರಲ್‌ ಸ್ಪೇಸ್‌ ಫೋರ್ಸ್‌’ ಕೇಂದ್ರದಿಂದ ಬುಧವಾರ ಉಡಾವಣೆ ಮಾಡಲಾಗಿತ್ತು. 26 ಗಂಟೆಗಳ ಪ್ರಯಾಣದ ಬಳಿಕ ನೌಕೆಯು ಬಾಹ್ಯಾಕಾಶ ಕೇಂದ್ರ ತಲುಪಿದೆ ಎಂದು ನಾಸಾ ಪ್ರಕಟಣೆ ತಿಳಿಸಿದೆ.

ಡಾಕಿಂಗ್ ಪ್ರಕ್ರಿಯೆ ನಿಖರವಾಗಿ ನಡೆದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಕ್ರಮಬದ್ಧ ತಪಾಸಣೆ ನಡೆಸಲಾಯಿತು. ಇದಕ್ಕಾಗಿ ಒಂದೆರಡು ಗಂಟೆಗಳು ಬೇಕಾದವು. ಬಾಹ್ಯಾಕಾಶ ನಿಲ್ದಾಣ ಮತ್ತು ಗಗನನೌಕೆಯಲ್ಲಿರುವ ಗಾಳಿ ಸೋರಿಹೋಗುವುದಿಲ್ಲ ಎಂಬುದು ಖಚಿತವಾದ ಬಳಿಕ ಇಬ್ಬರೂ ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸಿ, ಅಲ್ಲಿದ್ದ ಇತರ ಏಳು ಗಗನಯಾತ್ರಿಗಳ ಜತೆಯಾದರು.

ನಿಲ್ದಾಣ ಪ್ರವೇಶಿಸುತ್ತಿದ್ದಂತೆಯೇ ನೃತ್ಯ ಮಾಡಿದ ಸುನಿತಾ ಅವರು ಇತರ ಗಗನಯಾತ್ರಿಗಳನ್ನು ತಬ್ಬಿಕೊಂಡು ಸಂಭ್ರಮಿಸಿದರು.

ಸುನಿತಾ ಅವರಿಗೆ ಇದು ಮೂರನೇ ಬಾಹ್ಯಾಕಾಶ ಯಾನ ಆಗಿತ್ತು. ಸುನಿತಾ ಮತ್ತು ವಿಲ್ಮೋರ್‌ ಕನಿಷ್ಠ ಒಂದು ವಾರ ಬಾಹ್ಯಾಕಾಶ ನಿಲ್ದಾಣದಲ್ಲಿ ತಂಗಲಿದ್ದು, ಅಲ್ಲಿರುವ ಗಗನಯಾತ್ರಿಗಳ ಜತೆ ವಿವಿಧ ಪರೀಕ್ಷೆಗಳು ಮತ್ತು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT