ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Chandrayaan-3 | ಚಂದ್ರಚುಂಬನ: ವಿದೇಶಿ ಮಾಧ್ಯಮಗಳ ಶ್ಲಾಘನೆ

Published 24 ಆಗಸ್ಟ್ 2023, 13:56 IST
Last Updated 24 ಆಗಸ್ಟ್ 2023, 13:56 IST
ಅಕ್ಷರ ಗಾತ್ರ

ವಾಷಿಂಗ್ಟನ್‌/ಲಂಡನ್‌: ಚಂದ್ರನ ದಕ್ಷಿಣ ಧ್ರುವದಲ್ಲಿ ‘ವಿಕ್ರಮ್’ ಲ್ಯಾಂಡರ್‌ ಅನ್ನು ಸುರಕ್ಷಿತ ಮತ್ತು ಸುಗಮವಾಗಿ ಇಳಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ (ಇಸ್ರೊ) ಸಾಧನೆಗೆ ವಿಶ್ವದಾದ್ಯಂತ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ.

ಚಂದ್ರದ ಮೇಲೆ ಪಾದಸ್ಪರ್ಶ ಮಾಡಿದ ರಾಷ್ಟ್ರಗಳ ಗುಂಪಿಗೆ ಭಾರತದ ಸೇರ್ಪಡೆಯನ್ನು ವಿದೇಶಗಳ ಪ್ರಮುಖ ಮಾಧ್ಯಮಗಳು ಅದ್ವಿತೀಯ ಸಾಧನೆ, ಅಮೋಘ ಕ್ಷಣ, ಐತಿಹಾಸಿಕ ಎಂದೂ ಬಣ್ಣಿಸಿವೆ.

ನ್ಯೂಯಾರ್ಕ್‌ ಟೈಮ್ಸ್‌, ಬಿಬಿಸಿ, ದ ಗಾರ್ಡಿಯನ್, ದ ವಾಷಿಂಗ್ಟನ್‌ ಪೋಸ್ಟ್ ಸೇರಿದಂತೆ ಹಲವು ಪತ್ರಿಕೆಗಳು ಮುಖಪುಟದಲ್ಲಿಯೇ ಭಾರತದ ಸಾಧನೆಯ ಸುದ್ದಿಗೆ ಆದ್ಯತೆ ನೀಡಿವೆ. 

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆಯನ್ನು ಸಂಶಯದಿಂದಲೇ ನೋಡುವ, ಕೆಲವೊಮ್ಮೆ ವ್ಯಂಗ್ಯಚಿತ್ರಗಳ ಮೂಲಕ ಹಾಸ್ಯ ಮಾಡುವ ಅಮೆರಿಕದ ಮುಂಚೂಣಿ ಪತ್ರಿಕೆಗಳು, ‘ಇದು, ಭಾರತದ ಅತ್ಯದ್ಭುತವಾದ ಸಾಧನೆ’ ಎಂದು ಬಣ್ಣಿಸಿವೆ. 

‘ಚಂದ್ರನ ದಕ್ಷಿಣ ಧ್ರುವ ತಲುಪಿದ ಮೊದಲ ರಾಷ್ಟ್ರ ಎಂಬ ಹಿರಿಮೆಗೆ ಭಾರತ ಪಾತ್ರವಾಗಿದೆ. ಅಲ್ಲದೆ, ಬಾಹ್ಯಾಕಾಶ ಕ್ಷೇತ್ರದಲ್ಲಿನ ತನ್ನ ಕಾರ್ಯಕ್ರಮಗಳಿಗೆ ಹೊಸ ಸಾಧನೆ ಸೇರ್ಪಡೆಗೊಳಿಸಿದೆ’ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಚಂದ್ರಯಾನದ ವಿವಿಧ ಆಯಾಮಗಳನ್ನು ಕುರಿತ ವರದಿ ಹಾಗೂ ವಿಶ್ಲೇಷಣಾ ವರದಿಯೊಂದಿಗೆ ಭಾರತದ ಈ ಐತಿಹಾಸಿಕ ಸಾಧನೆಯನ್ನು ವಾಷಿಂಗ್ಟನ್‌ ಪೋಸ್ಟ್ ದಾಖಲಿಸಿದೆ.

‘ರಷ್ಯಾದ ಯತ್ನ ವಿಫಲವಾದ ಹಿಂದೆಯೇ ಭಾರತ ಚಂದ್ರನ ದಕ್ಷಿಣ ಧ್ರುವದಲ್ಲಿ ಹೆಜ್ಜೆ ಇಟ್ಟಿದೆ. ಇದು, ರಷ್ಯಾದ ಹಿನ್ನಡೆಯ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಂತಾಗಿದೆ’ ಎಂದು ಡೆಪ್ಯುಟಿ ಒಪಿನಿಯನ್‌ ಎಡಿಟರ್‌ ಡೇವಿಡ್‌ ವೊನ್‌ ರೆಹ್ಲೆ ಅಭಿಪ್ರಾಯಪಟ್ಟಿದ್ದಾರೆ.

‘ಭಾರತವು ಈಗ ಚಂದ್ರನ ಅಂಗಳದಲ್ಲಿದೆ. ದಕ್ಷಿಣ ಧ್ರುವವನ್ನು ಪ್ರವೇಶಿಸಿದ ಚಂದ್ರಯಾನ–3 ಬಾಹ್ಯಾಕಾಶ ನೌಕೆ’ ಎಂದು ವಾಲ್‌ ಸ್ಟ್ರೀಟ್ ಜನರಲ್‌ ಈ ಸಾಧನೆಯನ್ನು ದಾಖಲಿಸಿದೆ.

‘ಭಾರತದ ಪಾಲಿಗೆ ಇದೊಂದು ಅಮೋಘವಾದ ಕ್ಷಣ. ಬಾಹ್ಯಾಕಾಶ ಕ್ಷೇತ್ರದ ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಸ್ಥಾನವನ್ನು ಎತ್ತರಕ್ಕೇರಿಸಿದೆ’ ಎಂದು ಬಿಬಿಸಿ ಸಂಪಾದಕಿ (ವಿಜ್ಞಾನ) ರೆಬೆಕಾ ಮೊರೆಲ್ಲಾ ಅವರು ವಿಶ್ಲೇಷಿಸಿದ್ದಾರೆ.

‘ಚಂದ್ರನ ಅಂಗಳದಲ್ಲಿ ಪಾದಸ್ಪರ್ಶ ಮಾಡುವುದು ಸುಲಭ ಸಾಧ್ಯವಲ್ಲ. ರಷ್ಯಾ ಇತ್ತೀಚೆಗಷ್ಟೇ ವಿಫಲವಾಗಿತ್ತು. ಈ ಹಿಂದೆ ಭಾರತದ ಮೊದಲ ಯತ್ನ ಸೇರಿದಂತೆ ಹಲವು ಪ್ರಯತ್ನಗಳು ವಿಫಲವಾಗಿದ್ದವು’ ಎಂದು ಲೇಖನದಲ್ಲಿ ಉಲ್ಲೇಖಿಸಿದ್ದಾರೆ. 

ಚಂದ್ರಯಾನ–3 ಯಶಸ್ಸು ಜಾಗತಿಕವಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯವನ್ನು ಇನ್ನಷ್ಟು ದೃಢಪಡಿಸಿದೆ ಎಂದು ಸಿಎನ್‌ಎನ್‌ ತನ್ನ ವರದಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದೆ.

ಜರ್ಮನ್‌ನ ದೈನಿಕ ‘ಡಾಯ್ಚ ವೆಲ್ಲೆ’, ಜಪಾನ್‌ನ ದೈನಿಕ ‘ನಿಕ್ಕಿ’ ಕೂಡ ಭಾರತದ ಸಾಧನೆಯನ್ನು ಐತಿಹಾಸಿಕ ಎಂದು ದಾಖಲಿಸಿವೆ. ‘ಭಾರತವನ್ನು ತಂತ್ರಜ್ಞಾನ ಕ್ಷೇತ್ರದ ಸೂಪರ್‌ಪವರ್‌ ಆಗಿಸಲು ಒತ್ತು ನೀಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೂ ಈ ಸಾಧನೆ ಗೆಲುವಾಗಿದೆ’ ಎಂದು ಆಸ್ಟ್ರೇಲಿಯಾ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌ ವ್ಯಾಖ್ಯಾನಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT