ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವೂದ್‌ ಇಬ್ರಾಹಿಂ ಆರೋಗ್ಯವಾಗಿದ್ದಾನೆ: ಆಪ್ತ ಶಕೀಲ್‌

ವಿಷ ಹಾಕಿದ್ದರಿಂದ ಆಸ್ಪತ್ರೆ ದಾಖಲು: ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು
Published 18 ಡಿಸೆಂಬರ್ 2023, 16:25 IST
Last Updated 18 ಡಿಸೆಂಬರ್ 2023, 16:25 IST
ಅಕ್ಷರ ಗಾತ್ರ

ಮುಂಬೈ: ಪಾಕಿಸ್ತಾನದಲ್ಲಿ ನೆಲೆಸಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ‘ಅಪರಿಚಿತ’ರು ವಿಷ ಹಾಕಿದ್ದಾರೆ ಎಂಬ ವದಂತಿಗಳು ವ್ಯಾಪಕವಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಷಯ ಹೆಚ್ಚು ಚರ್ಚೆಗೆ ಒಳಗಾಗಿದೆ.

ಈ ವಿಚಾರ ಕುರಿತು ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿರುವ ದಾವೂದ್‌ನ ಆಪ್ತ, ಛೋಟಾ ಶಕೀಲ್‌, ‘ದಾವೂದ್‌ಗೆ ವಿಷ ಹಾಕಿದ್ದಾರೆ ಎಂಬ ವರದಿಗಳು ಸುಳ್ಳು’ ಎಂದು ಹೇಳಿದ್ದಾನೆ.

‘ಈ ಸುದ್ದಿ ಸುಳ್ಳು. ಆತ ಆರೋಗ್ಯವಾಗಿದ್ದಾನೆ. ಪ್ರತಿ ವರ್ಷ ಕೆಲವರು ಇಂತಹ ಸುದ್ದಿಗಳನ್ನು ಹಬ್ಬಿಸುತ್ತಾರೆ’ ಎಂದೂ ಶಕೀಲ್‌ ಪ್ರತಿಕ್ರಿಯಿಸಿದ್ದಾನೆ.

‘ಅಪರಿಚಿತ’ರು ವಿಷ ಹಾಕಿದ್ದರಿಂದ ತೀವ್ರ ಅಸ್ವಸ್ಥಗೊಂಡಿರುವ ದಾವೂದ್‌ನನ್ನು ಕರಾಚಿಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬಿಗಿ ಭದ್ರತೆ ನಡುವೆ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ವರದಿಗಳಿವೆ. ವಿಷ ಹಾಕಿರುವ ಪರಿಣಾಮ ದಾವೂದ್‌ ಮೃತ್ತಪಟ್ಟಿದ್ದಾನೆ ಎಂಬ ವರದಿಗಳೂ ಹರಿದಾಡುತ್ತಿವೆ.

ಪಾಕಿಸ್ತಾನದಲ್ಲಿ ಇಂಟರ್‌ನೆಟ್‌ ಸೇವೆಗೆ ತೊಂದರೆಯಾಗಿದೆ. ಯೂಟ್ಯೂಬ್‌, ಫೇಸ್‌ಬುಕ್‌, ಇನ್‌ಸ್ಟಾ ಗ್ರಾಮ್, ಎಕ್ಸ್‌ ಸೇರಿದಂತೆ ಸಾಮಾಜಿಕ ಮಾಧ್ಯಮಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ವರದಿಗಳಿವೆ.

ದಾವೂದ್‌ಗೆ ಸಂಬಂಧಿಸಿದ ವಿಚಾರವಾಗಿ ಪಾಕಿಸ್ತಾನ ಅಥವಾ ಭಾರತೀಯ ಅಧಿಕಾರಿಗಳಿಂದ ಈ ವರೆಗೆ ಯಾವುದೇ ಹೇಳಿಕೆ ಬಿಡುಗಡೆಯಾಗಿಲ್ಲ.

ಈ ವಿಷಯ ಕುರಿತು ‘ಪ್ರಜಾವಾಣಿ’, ಮಹಾರಾಷ್ಟ್ರದ ಪೊಲೀಸ್‌ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದಾಗ, ಯಾವುದೇ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು. ‘ನೀವು ಕೇಳಿರುವ ವಿಷಯವನ್ನೇ ನಾವೂ ಕೇಳಿದ್ದೇವೆ’ ಎಂದಷ್ಟೆ ಪ್ರತಿಕ್ರಿಯಿಸಿದ್ದಾರೆ.

ಮುಂಬೈನಲ್ಲಿರುವ ದಾವೂದ್‌ ಸಂಬಂಧಿಕರ ಮೇಲೆ ಪೊಲೀಸರು ನಿಗಾ ಇರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ವಿಧ್ವಂಸಕ ಕೃತ್ಯಗಳಿಗಾಗಿ ದಾವೂದ್‌ ಹಲವು ರಾಷ್ಟ್ರಗಳಿಗೆ ಬೇಕಾಗಿದ್ದು, ಆತನನ್ನು ಜಾಗತಿಕ ಉಗ್ರ ಎಂದೂ ಘೋಷಿಸಲಾಗಿದೆ.

1993ರ ಮಾರ್ಚ್ 12ರಂದು ಮುಂಬೈನಲ್ಲಿ ಸಂಭವಿಸಿದ ಸರಣಿ ಬಾಂಬ್‌ ಸ್ಫೋಟಗಳಲ್ಲಿ 257 ಜನ ಮೃತಪಟ್ಟು, ಇತರ 713 ಜನರು ಗಾಯಗೊಂಡಿದ್ದರು. ₹ 26 ಕೋಟಿ ಮೌಲ್ಯದ ಆಸ್ತಿ ಹಾನಿಯಾಗಿತ್ತು. ಈ ಪ್ರಕರಣದಲ್ಲಿ ಆತ ಭಾರತಕ್ಕೆ ಬೇಕಾಗಿದ್ದಾನೆ.

ಪಾಕಿಸ್ತಾನದ ಐಷಾರಾಮಿ ಪ್ರದೇಶ ಕ್ಲಿಫ್ಟನ್‌ನ ಬಂಗ್ಲೆಯಲ್ಲಿ ವಾಸ ಮಾಡುತ್ತಿರುವ ದಾವೂದ್‌ಗೆ ಭಾರಿ ಭದ್ರತೆ ಒದಗಿಸಲಾಗಿದೆ. ಆಗಾಗ್ಗೆ, ಕೊಲ್ಲಿ ರಾಷ್ಟ್ರಗಳಿಗೂ ಆತ ಭೇಟಿ ನೀಡುತ್ತಾನೆ ಎಂದು ಮೂಲಗಳು ಹೇಳುತ್ತವೆ.

ಆತನ ಆಣತಿಯಲ್ಲಿ ಅಪರಾಧ ಕೃತ್ಯಗಳನ್ನು ನಡೆಸುವ ಗುಂಪನ್ನು ಡಿ–ಕಂಪನಿ ಎನ್ನಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT