ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ವ್ಯವಸ್ಥೆಗೆ ಹೊಸ ರೂಪ, ಭಾರತ –ದ. ಕೊರಿಯಾ ಮಹತ್ವದ ಪಾತ್ರ: ಜೈಶಂಕರ್

Published 5 ಮಾರ್ಚ್ 2024, 14:30 IST
Last Updated 5 ಮಾರ್ಚ್ 2024, 14:30 IST
ಅಕ್ಷರ ಗಾತ್ರ

ಸೋಲ್‌: ಜಾಗತಿಕ ವ್ಯವಸ್ಥೆಗೆ ಹೊಸ ರೂಪ ನೀಡುವ ಪ್ರಕ್ರಿಯೆಯಲ್ಲಿ ಭಾರತ ಮತ್ತು ದಕ್ಷಿಣ ಕೊರಿಯಾ ಹೆಚ್ಚಿನ ಹೊಣೆ ಹೊತ್ತಿದ್ದು, ಸಕ್ರಿಯವಾಗಿ ಕೊಡುಗೆ ನೀಡುತ್ತಿವೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಹೇಳಿದ್ದಾರೆ.

ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಮಂಗಳವಾರ ಮಾತನಾಡುತ್ತಾ, ‘ಕೊರಿಯಾ ಗಣರಾಜ್ಯದ ಜೊತೆಗಿನ ಭಾರತದ ಪಾಲುದಾರಿಕೆಯು ಅನಿಶ್ಚಿತ ಜಾಗತಿಕ ವ್ಯವಸ್ಥೆಯಲ್ಲಿ ಹೆಚ್ಚು ಪ್ರಾಮುಖ್ಯ ಪಡೆದಿದೆ’ ಎಂದರು.

ಭಯೋತ್ಪಾದನೆ ನಿಗ್ರಹ ಹಾಗೂ ಜನಸಮೂಹ ನಾಶ ಮಾಡುವಂತಹ ಶಸ್ತ್ರಾಸ್ತ್ರಗಳ ತಡೆಗೆ ಕೈಗೊಳ್ಳುವ ಕ್ರಮಗಳು ಜಲಮಾರ್ಗದಲ್ಲಿ ಸುರಕ್ಷತೆಯ ಖಾತರಿ ನೀಡಲಿವೆ. ಇದು, ಉಭಯ ದೇಶಗಳಿಗೆ ಮೂಲಭೂತ ಭದ್ರತಾ ವಿಷಯವಾಗಿದೆ ಎಂದು ಹೇಳಿದರು. 

‘ಇತ್ತೀಚಿನ ವರ್ಷಗಳಲ್ಲಿ ಭಯೋತ್ಪಾದನೆ ಮತ್ತು ಜನಸಮೂಹ ನಾಶ ಮಾಡುವ ಶಸ್ತ್ರಾಸ್ತ್ರಗಳ ಉತ್ಪಾದನೆಯು ಸವಾಲೊಡ್ಡಿದೆ. ಜಾಗತಿಕ ಹಂತದಲ್ಲಿ ಇವುಗಳನ್ನು ಎದುರಿಸುವ ಸೂಕ್ಷ್ಮವನ್ನು ನಾವು ಅರಿತಿದ್ದೇವೆ. ನಮ್ಮ ಪರಿಹಾರ ಕ್ರಮಗಳು ನಿರ್ದಿಷ್ಟ ರಾಷ್ಟ್ರೀಯ ಸಂದರ್ಭಗಳಿಗೆ ಹೊಂದಿಕೆ ಆಗದಿರಬಹುದು. ಆದರೆ, ಒಟ್ಟಾಗಿ ಜೊತೆಗೂಡಿ ಈ ನಿಟ್ಟಿನಲ್ಲಿ ಕಾರ್ಯನಿರ್ವಹಸುವುದು ಎಂದಿಗೂ ಸಮಾನವಾದ ಅವಕಾಶವನ್ನು ಕಲ್ಪಿಸಲಿದೆ’ ಎಂದು ಜೈಶಂಕರ್ ಪ್ರತಿಪಾದಿಸಿದರು.

ಪ್ರಧಾನಿ, ಭದ್ರತಾ ಸಲಹೆಗಾರರ ಜೊತೆಗೆ ಜೈಶಂಕರ್ ಭೇಟಿ, ಚರ್ಚೆ

ಸೋಲ್‌ (ಪಿಟಿಐ): ದಕ್ಷಿಣ ಕೊರಿಯಾ ಪ್ರಧಾನಿ ಹ್ಯಾನ್ ಡಕ್‌ ಸೂ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್ ಮಂಗಳವಾರ ಇಲ್ಲಿ ಭೇಟಿಯಾಗಿದ್ದು, ಉಭಯ ದೇಶಗಳ ಬಾಂಧವ್ಯ ವೃದ್ಧಿ ಕುರಿತು ಚರ್ಚಿಸಿದರು.

ನಾಲ್ಕು ದಿನಗಳ ಭೇಟಿಗೆ ಇಲ್ಲಿಗೆ ಆಗಮಿಸಿರುವ ಜೈಶಂಕರ್ ಅವರು, 10ನೇ ಭಾರತ–ದಕ್ಷಿಣ ಕೊರಿಯಾದ ಜಂಟಿ ಆಯೋಗದ ಸಭೆಯ (ಜೆಸಿಎಂ) ಸಹ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

‘ಜೆಸಿಎಂ ವಿಸ್ತೃತವಾಗಿ ನಡೆಯುವ ನಿರೀಕ್ಷೆಯಿದೆ. ಪರಸ್ಪರ ಸಹಕಾರ  ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಬಾಂಧವ್ಯವನ್ನು ಬಲಪಡಿಸುವ ಕುರಿತು ಚರ್ಚಿಸಲಿದ್ದೇವೆ. ಪರಸ್ಪರ ಆಸಕ್ತಿಯುಳ್ಳ ಪ್ರಾದೇಶಿಕ, ಜಾಗತಿಕ ವಿಷಯಗಳು ಚರ್ಚೆಯಾಗಲಿವೆ’ ಎಂದು ಪ್ರವಾಸ ತೆರಳುವ ಮುನ್ನ ನವದೆಹಲಿಯಲ್ಲಿ ಜೈಶಂಕರ್ ಹೇಳಿದ್ದರು.

ದಕ್ಷಿಣ ಕೊರಿಯಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಚಾಂಗ್ ಹೊ ಜಿನ್ ಅವರನ್ನು ಭೇಟಿಯಾಗಿದ್ದು, ಹಿಂದೂ ಮಹಾಸಾಗರ–ಪೆಸಿಫಿಕ್‌ ಪ್ರದೇಶದ ವಸ್ತುಸ್ಥಿತಿ ಹಾಗೂ ಸಮಕಾಲೀನ ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳನ್ನು ಕುರಿತು ಚರ್ಚಿಸಿದರು. ವಾಣಿಜ್ಯ,ಕೈಗಾರಿಕೆ ಮತ್ತು ಇಂಧನ ಸಚಿವ ಅಹ್ನ್ ಡುಕ್ಜೆಯುನ್ ಅವರನ್ನೂ ಭೇಟಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT