ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ

ಭದ್ರತಾ ವಿಚಾರಗಳ ಚರ್ಚೆ
Last Updated 11 ಮಾರ್ಚ್ 2019, 4:46 IST
ಅಕ್ಷರ ಗಾತ್ರ

ನವದೆಹಲಿ: ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ಸೋಮವಾರ ಮೂರು ದಿನಗಳ ಅಮೆರಿಕ ಭೇಟಿ ಕೈಗೊಂಡಿದ್ದು, ಡೊನಾಲ್ಡ್‌ ಟ್ರಂಪ್‌ ಆಡಳಿತದ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ವಿದೇಶಾಂಗ ನೀತಿ ಹಾಗೂ ಭದ್ರತೆ ಕುರಿತಾದ ವಿಷಯಗಳನ್ನು ಚರ್ಚಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಭಯ ರಾಷ್ಟ್ರಗಳ ವಿದೇಶಾಂಗ ವ್ಯವಹಾರಗಳ ಅಧಿಕಾರಗಳ ಸಮಾಲೋಚನೆ, ಅಮೆರಿಕದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಅವರೊಂದಿಗೆ ಮಾತುಕತೆ, ಭದ್ರತೆಗೆ ಸಂಬಂಧಿತ ವಿಷಯಗಳ ಚರ್ಚೆಗಾಗಿ ಗೋಖಲೆ ಅವರು ವಾಷಿಂಗ್ಟನ್‌ ಭೇಟಿ ನೀಡಿರುವುದಾಗಿ ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್‌ ಕುಮಾರ್‌ ಹೇಳಿದ್ದಾರೆ.

ಪಾಕಿಸ್ತಾನ ಮತ್ತು ಭಾರತದ ನಡುವೆ ಆತಂಕದ ವಾತಾವರಣ ಸೃಷ್ಟಿಯಾಗಿರುವ ಸಂದರ್ಭದಲ್ಲಿ ವಿದೇಶಾಂಗ ಕಾರ್ಯದರ್ಶಿ ಅಮೆರಿಕ ಭೇಟಿ ಮಹತ್ವ ಪಡೆದುಕೊಂಡಿದೆ.

ಮಾ.11 ರಿಂದ 13ರ ವರೆಗೂ ಗೋಖಲೆ ವಾಷಿಂಗ್ಟನ್‌ನಲ್ಲಿ ಅಮೆರಿಕ ಸರ್ಕಾರದ ಹಲವು ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ. ರಾಜತಾಂತ್ರಿಕ ವ್ಯವಹಾರಗಳ ಅಧೀನ ಕಾರ್ಯದರ್ಶಿ ದೇವಿಡ್‌ ಹೇಲ್‌, ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ಅಂತರರಾಷ್ಟ್ರೀಯ ಭದ್ರತೆ ಇಲಾಖೆಯ ಅಧೀನ ಕಾರ್ಯದರ್ಶಿ ಆಂಡ್ರಿಯಾ ಥಾಂಪ್ಸನ್‌ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ರವೀಶ್‌ ಕುಮಾರ್ ವಿವರ ನೀಡಿದ್ದಾರೆ.

ಪುಲ್ವಾಮಾದಲ್ಲಿ 40 ಯೋಧರ ಸಾವಿಗೆ ಕಾರಣವಾದ ಉಗ್ರನ ಆತ್ಮಾಹುತಿ ದಾಳಿಯಾಗಿ 12 ದಿನಗಳ ನಂತರ ಉಗ್ರರ ಶಿಬಿರಗಳ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿ; ಬೆನ್ನಲೇ ಪಾಕಿಸ್ತಾನ ವಾಯುಪಡೆ ಯುದ್ಧ ವಿಮಾನಗಳು ಭಾರತದ ಗಡಿ ಪ್ರವೇಶಿಸಿ ದಾಳಿ ನಡೆಸುವ ಪ್ರಯತ್ನ ಮಾಡಿದ್ದು, ಪಾಕಿಸ್ತಾನದ ಎಫ್‌–16 ವಿಮಾನವನ್ನು ಹೊಡೆದುರುಳಿಸಿದ ಮಿಗ್‌–21 ವಿಮಾನದ ಪೈಲಟ್‌, ವಿಂಗ್‌ ಕಮಾಂಡರ್‌ ಅಭಿನಂದನ್‌ ಪಾಕಿಸ್ತಾನ ಸೇನೆಯ ವಶದಲ್ಲಿದ್ದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಸೃಷ್ಟಿಯಾಗುತ್ತಿದ್ದಂತೆ ಪಾಕಿಸ್ತಾನ ಅಭಿನಂದನ್ ಅವರನ್ನು ಬಿಡುಗಡೆ ಮಾಡಿತ್ತು. ಈ ಎಲ್ಲ ಘಟನೆಗಳೊಂದಿಗೆ ಭಾರತ–ಪಾಕಿಸ್ತಾನ ನಡುವಿನ ಸಂಬಂಧ ಬೂದಿ ಮುಚ್ಚಿದ ಕೆಂಡದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT