ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ಗೆ ಶಸ್ತ್ರಾಸ್ತ್ರ ಬಲ: ಜರ್ಮನಿ ಅಭಯ, ನ್ಯಾಟೊ ಸಭೆಯಲ್ಲಿ ಘೋಷಣೆ

ಶೇ 2ರಷ್ಟು ರಕ್ಷಣೆಗೆ –ಸದಸ್ಯ ರಾಷ್ಟ್ರಗಳಿಗೆ ರಿಷಿ ಸುನಕ್‌ ಸಲಹೆ
Published 11 ಜುಲೈ 2023, 15:51 IST
Last Updated 11 ಜುಲೈ 2023, 15:51 IST
ಅಕ್ಷರ ಗಾತ್ರ

ವಿಲ್ನಿಯಸ್‌: ಯುದ್ಧ ಬಾಧಿತ ಉಕ್ರೇನ್‌ಗೆ 40 ಹೆಚ್ಚುವರಿ ‘ಮರ್ದೆರ್’ ಯುದ್ಧ ವಾಹನಗಳು ಹಾಗೂ 25 ಹಳೆಯ ‘ಲೆಪರ್ಡ್‌ 1’ ಟ್ಯಾಂಕ್‌ಗಳು, 2 ‘ಪೇಟ್ರಿಯಾಟ್‌’ ಕ್ಷಿಪಣಿಗಳು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳ ನೆರವು ಒದಗಿಸಲಾಗುವುದು ಎಂದು ಜರ್ಮನಿ ಪ್ರಕಟಿಸಿದೆ. 

ಜರ್ಮನಿಯ ರಕ್ಷಣಾ ಸಚಿವರು ಮಂಗಳವಾರ ಈ ವಿಷಯವನ್ನು ಪ್ರಕಟಿಸಿದ್ದು, ಫಿರಂಗಿಯ 20 ಸಾವಿರ ಮದ್ದುಗುಂಡುಗಳು, 5 ಸಾವಿರ ಹೊಗೆಕಾರುವ ಮದ್ದುಗುಂಡುಗಳು, ರಕ್ಷಣೆಗೆ ಬಳಸುವ ಡ್ರೋನ್‌, ಲುನಾ ಡ್ರೋನ್‌ ಸಿಸ್ಟಮ್‌ ಅನ್ನು ಒದಗಿಸಲಾಗುವುದು ಎಂದರು.

ಉಕ್ರೇನ್‌ಗೆ ಶಸ್ತ್ರಾಸ್ತ್ರಗಳ ನೆರವು ನೀಡುತ್ತಿರುವ ಪ್ರಮುಖ ರಾಷ್ಟ್ರಗಳಲ್ಲಿ ಜರ್ಮನಿಯು ಒಂದಾಗಿದೆ. ಈಗ ಒದಗಿಸಲು ಉದ್ದೇಶಿಸಿರುವ ಶಸ್ತ್ರಾಸ್ತ್ರಗಳ ಒಟ್ಟು ಮೌಲ್ಯ ಸುಮಾರು ₹ 6,337 ಕೋಟಿ ಎಂದು ಅಂದಾಜು ಮಾಡಲಾಗಿದೆ.

ದೀರ್ಘ ಅಂತರದ ನೆಲೆಗಳನ್ನು ಗುರಿಯಾಗಿಸಿ ಪ್ರಯೋಗಿಸಬಹುದಾದ ಕ್ಷಿಪಣಿಯನ್ನು ಒದಗಿಸಬೇಕು ಎಂಬ ಉಕ್ರೇನ್‌ ಬೇಡಿಕೆಗೆ ಸ್ಪಂದಿಸಿಲ್ಲ ಎಂದು ನ್ಯಾಟೊ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಜರ್ಮನಿ ಅಧಿಕಾರಿಗಳು ತಿಳಿಸಿದರು. 

ಭದ್ರತೆಗೆ 12,000 ಸಿಬ್ಬಂದಿ: ನ್ಯಾಟೊ ಶೃಂಗಸಭೆ ಹಿನ್ನೆಲೆಯಲ್ಲಿ ಲಿಥುವೇನಿಯಾ ಆಡಳಿತವು ವಿಲ್ನಿಯಸ್‌ನಲ್ಲಿ ಬಿಗಿ ಭದ್ರತೆ ಏರ್ಪಡಿಸಿದೆ. ಸೇನೆಯ 12 ಸಾವಿರ ಸಿಬ್ಬಂದಿ ನಿಯೋಜಿಸಿದೆ. ಈ ಶೃಂಗಸಭೆಯಲ್ಲಿ 50 ಸಾವಿರ ವಿದೇಶಿ ಆಹ್ವಾನಿತರು, 2400 ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಇವರಲ್ಲಿ ವಿವಿಧ 40 ರಾಷ್ಟ್ರಗಳ ಅಧ್ಯಕ್ಷರು ಅಥವಾ ಪ್ರಧಾನಮಂತ್ರಿಗಳು ಹಾಗೂ 150 ಮಂದಿ ಉನ್ನತ ಶ್ರೇಣಿಯ ರಾಜಕಾರಣಿಗಳೂ ಸೇರಿದ್ದಾರೆ.

ಭದ್ರತಾ ಕಾರ್ಯಗಳಿಗಾಗಿ ಜರ್ಮನಿಯು ಪೇಟ್ರಿಯಾಟ್‌ ಕ್ಷಿಪಣಿ ವ್ಯವಸ್ಥೆಯನ್ನು ಒದಗಿಸಿದ್ದರೆ, ಸ್ಪೇನ್‌ ದೇಶವು ಅಲ್ಪ ಅಂತರದಿಂದ ಮಧ್ಯಮ ಅಂತರದ ನೆಲೆಯನ್ನು ಗುರಿಯಾಗಿಸಿ ದಾಳಿ ನಡೆಸಬಹುದಾದ ನ್ಯಾಸಂ ಸಿಸ್ಟಮ್ ಅನ್ನು ಒದಗಿಸಿದೆ.

ರಷ್ಯಾದ ಮೈತ್ರಿ ರಾಷ್ಟ್ರ ಬೆಲಾರಸ್‌ನಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ, ಲಿಥುವೇನಿಯಾದ ರಾಜಧಾನಿಯಲ್ಲಿ ಈ ಶೃಂಗಸಭೆ ನಡೆಯುತ್ತಿದೆ. ರಷ್ಯಾ ವಿರುದ್ಧ ಬಂಡಾಯವೆದ್ದಿದ್ದ ವ್ಯಾಗ್ನರ್‌ ಮುಖ್ಯಸ್ಥ ಯೆವ್ನೆನಿ ಪ್ರಿಗೋಷಿನ್‌ ಬೆಲಾರಸ್‌ನಲ್ಲಿಯೇ ಕೆಲ ಕಾಲ ಆಶ್ರಯ ಪಡೆದಿದ್ದರು.

ಶೃಂಗಸಭೆ ಹಿನ್ನೆಲೆಯಲ್ಲಿ ಲಿಥುವೇನಿಯಾದ ನೆರೆ ರಾಷ್ಟ್ರಗಳು ಹಾಗೂ ಐರೋ‌ಪ್ಯ ರಾಷ್ಟ್ರಗಳ ಭಾಗವಾಗಿರುವ ಪೋಲೆಂಡ್‌ ಮತ್ತು ಲಾಟ್ವಿಯಾ ಕೂಡಾ ದೇಶದ ಪ್ರಮುಖ ವಿಮಾನನಿಲ್ದಾಣ, ಬಂದರು ಪ್ರದೇಶದಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸಿದೆ.  

ರಕ್ಷಣೆಗೆ ಆದ್ಯತೆ –ಸುನಕ್ ಸಲಹೆ: ರಕ್ಷಣಾ ಉದ್ದೇಶಗಳಿಗಾಗಿ ಆದಾಯದ ಶೇ 2ರಷ್ಟನ್ನು ವಿನಿಯೋಗಿಸಬೇಕು ಎಂದು ನ್ಯಾಟೊ ಸದಸ್ಯ ರಾಷ್ಟ್ರಗಳಿಗೆ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಒತ್ತಾಯಿಸಿದ್ದಾರೆ.

ಭದ್ರತಾ ಸವಾಲು ಎದುರಿಸಲು ಸಜ್ಜಾಗಿರುವ ಕ್ರಮವಾಗಿ ಬ್ರಿಟನ್‌ ‘ದಾಖಲೆ ಮೊತ್ತ’ವನ್ನು ರಕ್ಷಣೆಗೆ ವಿನಿಯೋಗಿಸುತ್ತಿದೆ ಎಂದು ಸುನಕ್‌ ಹೇಳಿದರು. ನ್ಯಾಟೊ ಕಳೆದ ವಾರ ಬಿಡುಗಡೆ ಮಾಡಿದ್ದ ವರದಿಯಂತೆ, 31 ಸದಸ್ಯ ರಾಷ್ಟ್ರಗಳಲ್ಲಿ 11 ರಾಷ್ಟ್ರಗಳು ಈ ಗುರಿ ಸಾಧಿಸಿವೆ. 

ಸ್ವೀಡನ್‌ಗೆ ಸದಸ್ಯತ್ವ, ಹಂಗೇರಿ ಬೆಂಬಲ: ನ್ಯಾಟೊಗೆ ಸ್ವೀಡನ್ ಸೇರ್ಪಡೆಗೆ ಹಂಗೇರಿ ವಿರೋಧವು ‘ತಾಂತ್ರಿಕ ಕಾರಣವಾಗಿದೆ’ ಎಂದು ಹಂಗೇರಿ ವಿದೇಶಾಂಗ ಸಚಿವ ಪೀಟರ್‌ ಜಿಜಾರ್ಟ್‌ ಹೇಳಿದರು. ಟರ್ಕಿಯು ಸ್ವೀಡನ್‌ ಸೇರ್ಪಡೆಗೆ ವಿರೋಧಿಸಲಿದೆ ಎಂದು ಟರ್ಕಿ ಅಧ್ಯಕ್ಷರ ಹೇಳಿಕೆ ಹಿಂದೆಯೇ ಅವರು ಈ ಸ್ಪಷ್ಟನೆ ನೀಡಿದರು.

ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಅವರು, ಸ್ವೀಡನ್‌ ಕುರಿತಂತೆ ಹಂಗೇರಿ ಸರ್ಕಾರದ ನಿಲುವು ಸ್ಪಷ್ಟವಾಗಿದೆ. ಸರ್ಕಾರವು ನ್ಯಾಟೊ ಸದಸ್ಯತ್ವವನ್ನು ಬೆಂಬಲಿಸಲಿದೆ. ಅದಕ್ಕಾಗಿಯೇ ನಾವು ಸಂಸತ್ತಿನಲ್ಲಿಯೂ ಪ್ರಸ್ತಾವ ಮಂಡಿಸಿದ್ದೇವೆ. ಅದನ್ನು ಅನುಮೋದಿಸುವುದಷ್ಟೇ ಬಾಕಿ ಇದೆ‘ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT