ಪ್ಯಾರಿಸ್: 17 ವರ್ಷದ ಮುಸ್ಲಿಂ ಯುವಕನನ್ನು ಪೊಲೀಸ್ ಅಧಿಕಾರಿಗಳು ವಿನಾಕಾರಣ ಗುಂಡಿಟ್ಟು ಕೊಂದ ನಂತರ ಫ್ರಾನ್ಸ್‌ನಾದ್ಯಂತ ಭುಗಿಲೆದ್ದಿದ್ದ ಹಿಂಸಾಚಾರ ಐದನೇ ದಿನವೂ ಮುಂದುವರಿದಿದೆ.
ಉದ್ರಿಕ್ತ ಪ್ರತಿಭಟನಕಾರರು ಪ್ಯಾರಿಸ್‌ನ ದಕ್ಷಿಣ ಉಪನಗರದ ಮೇಯರ್ ವಿನ್‌ಸೆಂಟ್ ಜೀನ್‌ಬ್ರುನ್ ಅವರ ನಿವಾಸಕ್ಕೆ ಕಾರು ನುಗ್ಗಿಸಿ ಬೆಂಕಿ ಇಟ್ಟಿದ್ದಾರೆ. ಈ ವೇಳೆ ಮೇಯರ್ ಪತ್ನಿ ಮತ್ತು ಇಬ್ಬರು ಮಕ್ಕಳು ಮನೆಯೊಳಗೆ ಮಲಗಿದ್ದರು. ಬೆಂಕಿ ಕಾಣಿಸುತ್ತಿದ್ದಂತೆಯೇ ಅವರು ಮನೆ ಹಿಂಬಾಗಿಲ ಮೂಲಕ ಹೊರಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅಲ್ಪಸ್ವಲ್ಪ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ವೇಳೆ ಮೇಯರ್ ಜೀನ್‌ಬ್ರುನ್ ಅವರು ಟೌನ್‌ಹಾಲ್‌ನಲ್ಲಿ ಇದ್ದರು. ಯುವಕನ ಹತ್ಯೆಯಾದಾಗಿನಿಂದ ಟೌನ್ ಹಾಲ್ ಗುರಿಯಾಗಿಸಿಕೊಂಡು ದಾಳಿ ನಡೆಸಲು ಉದ್ರಿಕ್ತ ಗುಂಪು ಯತ್ನಿಸುತ್ತಿದ್ದು, ಬ್ಯಾರಿಕೇಡ್ ಮತ್ತು ಮುಳ್ಳುತಂತಿಗಳನ್ನು ಹಾಕಿ ಅವರನ್ನು ತಡೆಯಲಾಗಿದೆ.
ಕೊಲೆ ಯತ್ನ ಆರೋಪದ ಮೇಲೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂದುವರಿದ ಹಿಂಸಾಚಾರ:
ದೇಶದಾದ್ಯಂತ ಗಲಭೆಕೋರರು ಮತ್ತು ಪೊಲೀಸರ ನಡುವಿನ ಸಂಘರ್ಷ ಮುಂದುವರಿದಿದೆ. ಆದರೆ ಹಿಂದಿನ ದಿನಕ್ಕೆ ಹೋಲಿಸಿದರೆ ಭಾನುವಾರ ಹಿಂಸಾಚಾರ ಅಲ್ಪ ಪ್ರಮಾಣದಲ್ಲಿ ತಗ್ಗಿತ್ತು.
ಶಾಂತಿ ಪುನಃಸ್ಥಾಪನೆಗೆ ಭಾರಿ ಸಂಖ್ಯೆಯಲ್ಲಿ ಪೊಲೀಸ್ ನಿಯೋಜಿಸಲಾಗಿದ್ದು, ಒಂದೇ ದಿನ 719 ಮಂದಿಯನ್ನು ಬಂಧಿಸಲಾಗಿದೆ. ಹಾಗಿದ್ದೂ ಪ್ರತಿಭಟನಕಾರರು ಹಲವು ಶಾಲೆ, ಪೊಲೀಸ್ ಠಾಣೆ, ಟೌನ್‌ಹಾಲ್ ಮತ್ತು ಅಂಗಡಿಮುಂಗಟ್ಟಿಗೆ ಬೆಂಕಿ ಇಟ್ಟು ಧ್ವಂಸ ಮಾಡಿದರು.
ಶನಿವಾರ ರಾತ್ರಿಯಾಗುತ್ತಿದ್ದಂತೆಯೇ ಸಣ್ಣ ಗುಂಪೊಂದು ರಾಜಧಾನಿಯಲ್ಲಿ ಪ್ರತಿಭಟನೆ ಆರಂಭಿಸಿತ್ತು. ನೂರಾರು ಪೊಲೀಸರು ಲಾಠಿಚಾರ್ಜ್ ಮಾಡಿ ಗುಂಪನ್ನು ಚದುರಿಸಿದರು. ಉತ್ತರ ಪ್ಯಾರಿಸ್‌ನಲ್ಲೂ ಪಟಾಕಿ ಹಚ್ಚಿ ಮತ್ತು ಬ್ಯಾರಿಕೇಡ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಪೊಲೀಸರೂ ಅಶ್ರುವಾಯು ಬಳಸಿ ಪ್ರತಿಭಟನಕಾರರನ್ನು ಹಿಮ್ಮೆಟ್ಟಿಸಿದರು.
ಹಿಂಸಾಚಾರ ಆರಂಭವಾದಾಗಿನಿಂದ ಈವರೆಗೆ ದೇಶದಾದ್ಯಂತ ನೂರಾರು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ. 3000ಕ್ಕೂ ಹೆಚ್ಚು ಪ್ರತಿಭಟನಕಾರರನ್ನು ಬಂಧಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.