ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಐ.ಎಸ್‌ ಗುಂಪಿನ ಮಹಿಳೆಯರಿಗಾಗಿ ದೇಣಿಗೆ ಸಂಗ್ರಹ: ಭಾರತ ಮೂಲದ ವ್ಯಕ್ತಿ ಬಂಧನ

Published 8 ಮೇ 2023, 16:31 IST
Last Updated 8 ಮೇ 2023, 16:31 IST
ಅಕ್ಷರ ಗಾತ್ರ

undefined

ವಾಷಿಂಗ್ಟನ್‌: ಸಿರಿಯಾದ ನಿರಾಶ್ರಿತರ ಶಿಬಿರದಿಂದ ಇಸ್ಲಾಮಿಕ್‌ ಸ್ಟೇಟ್‌ಗೆ (ಐಎಸ್‌) ಸೇರಿದ ಮಹಿಳೆಯರನ್ನು ಮಾನವ ಸಾಗಣೆ ಮೂಲಕ ಹೊರತರುವ ಉದ್ದೇಶದಿಂದ ಸಾವಿರಾರು ರೂಪಾಯಿ ಹಣ ವರ್ಗಾಯಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಭಾರತ ಮೂಲದ ಅಮೆರಿಕದ ವ್ಯಕ್ತಿಯೊಬ್ಬರ ವಿರುದ್ಧ ಆರೋಪ ಹೊರಿಸಲಾಗಿದೆ.

ಸಿರಿಯಾದಲ್ಲಿಯ ಅಲ್‌– ಹೋಲ್‌ ನಿರಾಶ್ರಿತರ ಶಿಬಿರದಲ್ಲಿನ ಇಸ್ಲಾಮಿಕ್‌ ಸ್ಟೇಟ್‌ ಮಹಿಳೆಯರಿಗಾಗಿ ಮೊಹಮ್ಮದ್‌ ಅಜರುದ್ದೀನ್‌ ಛಿಪ್ಪಾ (33) ಸಾಮಾಜಿಕ ಜಾಲತಾಣಗಳ ಮೂಲಕ ದೇಣಿಗೆ ಸಂಗ್ರಹಿಸುತ್ತಿದ್ದ. ಜೊತೆಗೆ, ಉಗ್ರ ಜಿಹಾದಿ ಸಂಘಟನೆಗೆ ಆನ್‌ಲೈನ್‌ ಮೂಲಕ ಬೆಂಬಲ ಸೂಚಿಸಿದ್ದ ಎಂದು ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆ ಶುಕ್ರವಾರ ವರದಿ ಮಾಡಿದೆ. 

ಅಲ್‌–ಹೋಲ್‌ ಶಿಬಿರದಲ್ಲಿರುವವರನ್ನು ‘ಸಹೋದರಿಯರು’ ಎಂದು ಕರೆದಿದ್ದ ಛಿಪ್ಪಾ, ಅವರಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ 2019ರಲ್ಲಿ ದೇಣಿಗೆ ಸಂಗ್ರಹಿಸಲು ಆರಂಭಿಸಿದ್ದ. ಅವರಿಗೆ ವಸತಿ ಕಲ್ಪಿಸುವ ಸಲುವಾಗಿ ಹಣ ಸಂಗ್ರಹಿಸುತ್ತಿರುವುದಾಗಿ ಹೇಳಿಕೊಂಡಿದ್ದ ಎಂದು ಅಮೆರಿಕದ ಫೆಡರಲ್‌ ಬ್ಯೂರೊ ಆಫ್‌ ಇನ್ವೆಸ್ಟಿಗೇಷನ್‌ (ಎಫ್‌ಬಿಐ) ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಹೇಳಲಾಗಿದೆ ಎಂದು ಪತ್ರಿಕೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಛಿಪ್ಪಿ ಮನೆಯಲ್ಲಿ ಶೋಧ ನಡೆಸಿದ ವೇಳೆ ಇಸ್ಲಾಮಿಕ್‌ ಸ್ಟೇಟ್‌ ಸಂಘಟನೆ ಮತ್ತು ಉಗ್ರ ಜಿಹಾದಿ ಸಿದ್ಧಾಂತಕ್ಕೆ ಸಂಬಂಧಿಸಿದ ಹಲವು ಚಿತ್ರಗಳು, ವಿಡಿಯೊಗಳು, ಪುಸ್ತಕಗಳು ಮತ್ತು ಎಲೆಕ್ಟ್ರಾನಿಕ್‌ ಸಾಧನಗಳಲ್ಲಿ ಸರ್ಚ್‌ ಹಿಸ್ಟರಿ ಪತ್ತೆಯಾಗಿದೆ ಎಂದು ಎಫ್‌ಐಬಿ ಹೇಳಿದೆ.

ಶುಕ್ರವಾರ ಆತನನ್ನು ವರ್ಜೀನಿಯಾದ ನ್ಯಾಯಾಲಯವೊಂದಕ್ಕೆ ಹಾಜರುಪಡಿಸಲಾಯಿತು. ಬಳಿಕ, ಆತನನ್ನು ಜೈಲಿನಲ್ಲಿ ಇರಿಸಲಾಗಿದೆ. ಆತನ ವಿರುದ್ಧ ಇರುವ ಆರೋಪಗಳು ಸಾಬೀತಾದರೆ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಬುಧವಾರಕ್ಕೆ ನಿಗದಿಪಡಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT