ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕಾಟ್ಲೆಂಡ್‌: ಭಾರತೀಯ ರಾಜತಾಂತ್ರಿಕ ಅಧಿಕಾರಿಗೆ ಗುರುದ್ವಾರ ಪ್ರವೇಶ ನಿರಾಕರಣೆ

Published 30 ಸೆಪ್ಟೆಂಬರ್ 2023, 7:45 IST
Last Updated 30 ಸೆಪ್ಟೆಂಬರ್ 2023, 7:45 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ನಲ್ಲಿನ ಭಾರತದ ರಾಯಭಾರಿ ವಿಕ್ರಮ್‌ ದೊರೈಸ್ವಾಮಿ ಅವರಿಗೆ ಸ್ಕಾಟ್ಲೆಂಡ್‌ನ ಗ್ಲಾಸ್ಗೊ ನಗರದ ಗುರುದ್ವಾರವೊಂದನ್ನು ಪ್ರವೇಶಿಸಲು ಖಾಲಿಸ್ತಾನ ಪರ ತೀವ್ರಗಾಮಿಗಳು ಅಡ್ಡಿ ಉಂಟು
ಮಾಡಿದ್ದಾರೆ.

ದೊರೈಸ್ವಾಮಿ ಅವರು ಎರಡು ದಿನಗಳ ಅಧಿಕೃತ ಪ್ರವಾಸಕ್ಕಾಗಿ ಸ್ಕಾಟ್ಲೆಂಡ್‌ನ ಗ್ಲಾಸ್ಗೊಗೆ ಬಂದಿದ್ದಾರೆ. ಇಲ್ಲಿನ ಆಲ್ಬರ್ಟ್‌ ಡ್ರೈವ್‌ನಲ್ಲಿಯ ಗುರು ಗ್ರಂಥ ಸಾಹಿಬ್‌ ಗುರುದ್ವಾರಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ‘ಸಿಖ್‌ ಯೂತ್ಸ್‌ ಯುಕೆ’ ಸಂಘಟನೆಯ ಸದಸ್ಯರು ಘಟನೆಯ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ದೊರೈಸ್ವಾಮಿ ಅವರಿಗೆ ಪ್ರವೇಶ ನೀಡದಂತೆ ಗುರುದ್ವಾರದ ಪ್ರಮುಖರ ಜೊತೆ ಸಂಘಟನೆಯ ಸದಸ್ಯರು ವಾಗ್ವಾದ ನಡೆಸಿದ್ದಾರೆ. ಸಂಘಟನೆಯ ಕೆಲವರು ರಾಯಭಾರಿಯ ಕಾರಿಗೆ ಮುತ್ತಿಗೆ ಹಾಕಿ, ಅಲ್ಲಿಂದ ಹೊರಡುವಂತೆ ಅವರಿಗೆ ಎಚ್ಚರಿಕೆ ನೀಡಿದ್ದು ಕೂಡ ವಿಡಿಯೊದಲ್ಲಿ ಇದೆ. ಈ ಪ್ರಕರಣ ಕುರಿತು ತನಿಖೆ ನಡೆದಿದೆ, ಯಾರಿಗೂ ಗಾಯಗಳಾದ ವರದಿ ಇಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

‘ಭಾರತದ ಯಾವುದೇ ರಾಯಭಾರಿ, ಭಾರತ ಸರ್ಕಾರದ ಯಾವುದೇ ಅಧಿಕಾರಿ ಯಾವುದೇ ಕಾರಣಕ್ಕೆ ಬಂದರೂ ನಾವು ಅವರನ್ನು ಹೀಗೆಯೇ ಎದುರುಗೊಳ್ಳಬೇಕಿದೆ’ ಎಂದು ವ್ಯಕ್ತಿಯೊಬ್ಬ ಹೇಳುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಸ್ಕಾಟ್ಲೆಂಡ್‌ನ ರಾಜಕೀಯ ನಾಯಕರು, ಉದ್ಯಮಿಗಳು, ಭಾರತೀಯ ಸಮುದಾಯದ ಪ್ರಮುಖರು
ಮತ್ತು ವಿಶ್ವವಿದ್ಯಾಲಯಗಳ ಪ್ರತಿನಿಧಿಗಳ ಜೊತೆ ದೊರೈಸ್ವಾಮಿ ಅವರು ಸಭೆಗಳನ್ನು ನಡೆಸಿದ್ದರು. ಸಿಖ್‌ ಸಂಘಟನೆಗಳ ಸದಸ್ಯರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸುವಂತೆ ಗುರುದ್ವಾರ ಸಮಿತಿಯು ಮನವಿ ಮಾಡಿದ್ದ ಕಾರಣ ಗುರುದ್ವಾರದಲ್ಲಿಯೂ ಶುಕ್ರವಾರ ಸಭೆ ಏರ್ಪಡಿಸಲಾಗಿತ್ತು.

ಈ ಕಾರಣಕ್ಕಾಗಿ ದೊರೈಸ್ವಾಮಿ ಅವರು ಗುರುದ್ವಾರಕ್ಕೆ ಹೋಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಖ್ಖರಲ್ಲಿ ಬಹುಪಾಲು ಮಂದಿ ಶಾಂತಿಪ್ರಿಯರು. ಆದರೆ ಕೆಲವು ಹೊರಗಿನವರು ಹಾಗೂ ತೀವ್ರಗಾಮಿಗಳ ಕಾರಣದಿಂದಾಗಿ ಒಂದು ಸಂವಾದಕ್ಕೆ ಅಡ್ಡಿ ಉಂಟಾಯಿತು ಎಂದು ಮೂಲಗಳು ಹೇಳಿವೆ.

ಖಾಲಿಸ್ತಾನ ಪರ ಹೋರಾಟಗಾರ, ಘೋಷಿತ ಉಗ್ರಗಾಮಿ ಹರದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೊ ಅವರು ಹೇಳಿಕೆ ನೀಡಿದ ನಂತರದಲ್ಲಿ, ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಸಂಬಂಧ ಹಳಸಿದೆ. ಇದರ ಬೆನ್ನಲ್ಲೇ, ಸ್ಕಾಟ್ಲೆಂಡ್‌ನಲ್ಲಿ ಈ ಘಟನೆ ನಡೆದಿದೆ. 

ಜಗ್ತಾರ್ ಬಗ್ಗೆ ಚರ್ಚೆ: ಸ್ಕಾಟ್ಲೆಂಡ್‌ ಸರ್ಕಾರದ ಮುಖ್ಯಸ್ಥ ಹಮ್ಜಾ ಯೂಸುಫ್‌ ಅವರನ್ನು ಭೇಟಿ ಮಾಡಿದ್ದ ದೊರೈಸ್ವಾಮಿ ಅವರು, ಭಯೋತ್ಪಾದನೆ ಕೃತ್ಯಗಳ ಆರೋಪದ ಅಡಿ ಭಾರತದಲ್ಲಿ ಬಂಧನದಲ್ಲಿರುವ ಬ್ರಿಟನ್‌ನ ಸಿಖ್‌ ವ್ಯಕ್ತಿ ಜಗ್ತಾರ್ ಸಿಂಗ್‌ ಜೊಹಾಲ್‌ ಕುರಿತು ಚರ್ಚಿಸಿದ್ದರು. ಭಯೋತ್ಪಾದನೆ ಕೃತ್ಯಗಳಿಗೆ ಸಂಬಂಧಿಸಿ ಜಾಗೃತ್‌ ವಿರುದ್ಧ ಎಂಟು ಗಂಭೀರ ಆರೋಪಗಳಿವೆ.

ಬಹುತ್ವ ಮತ್ತು ಮುಕ್ತ ಪ್ರಜಾಪ್ರಭುತ್ವವನ್ನು ಎತ್ತಿಹಿಡಿವ ದೇಶವಾದ ಭಾರತದಲ್ಲಿ ಎಲ್ಲಾ ಸಮುದಾಯಗಳ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ರಾಯಭಾರಿ ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದು ಯೂಸುಫ್‌ ಅವರು ಶ್ಲಾಘಿಸಿದ್ದಾರೆ ಎಂದು ಭಾರತದ ಹೈಕಮಿಷನ್ ಕಚೇರಿಯು ‘ಎಕ್ಸ್‌’ನಲ್ಲಿ ಹೇಳಿದೆ.

ನಾಚಿಕೆಗೇಡಿನ ಸಂಗತಿ: ಭಾರತೀಯ ರಾಯಭಾರ ಕಚೇರಿ 

ಲಂಡನ್‌: ಬ್ರಿಟನ್‌ನ ಭಾರತದ ರಾಯಭಾರಿ ವಿಕ್ರಮ್‌ ದೊರೈಸ್ವಾಮಿ ಅವರನ್ನು ಖಾಲಿಸ್ತಾನ ಪರ ಬೆಂಬಲಿಗರು ಗುರುದ್ವಾರವನ್ನು ಪ್ರವೇಶಿಸದಂತೆ ತಡೆದಿದ್ದು ‘ನಾಚಿಕೆಗೇಡಿನ ಸಂಗತಿ’ ಎಂದು ಭಾರತದ ರಾಯಭಾರ ಕಚೇರಿ ಅಲ್ಲಿನ ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ಹೇಳಿದೆ.

ಸ್ಕಾಟ್ಲೆಂಡ್‌ ಹೊರಗಿನಿಂದ ಬಂದ ಮೂವರು ದೊರೈಸ್ವಾಮಿ ಅವರ ಗುರುದ್ವಾರ ಭೇಟಿಗೆ ಅಡ್ಡಿಪಡಿಸಿದರು. ದೊರೈಸ್ವಾಮಿ ಅವರಿದ್ದ ವಾಹನವು ಗುರುದ್ವಾರದ ಬಳಿ ಬರುತ್ತಲೇ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಭೆಯ ಆಯೋಜಕರು ಕೂಡಲೇ ಸ್ಥಳಕ್ಕೆ ಧಾವಿಸಿ ದುಷ್ಕರ್ಮಿಗಳನ್ನು ತಡೆದು ಸಂಭವನೀಯ ಅನಾಹುತವನ್ನು ತಪ್ಪಿಸಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪರಿಸ್ಥಿತಿ ಬಿಗಡಾಯಿಸುವುದನ್ನು ತಡೆಯುವ ಸಲುವಾಗಿ ರಾಯಭಾರಿ ದೊರೈಸ್ವಾಮಿ ಮತ್ತು ಭಾರತದ ಕಾನ್ಸುಲ್‌ ಜನರಲ್‌ ಅವರು ಸ್ಥಳದಿಂದ ವಾಪಸ್ಸಾದರು ಎಂದು ವರದಿಯಲ್ಲಿ ಮಾಹಿತಿ ನೀಡಲಾಗಿದೆ. 

ಈ ಘಟನೆಗೆ ಸಂಬಂಧಿಸಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬ್ರಿಟನ್‌ನ ವಿದೇಶಾಂಗ ಸಚಿವಾಲಯ ಮತ್ತು ಲಂಡನ್‌ನ ಮೆಟ್ರೊಪಾಲಿಟನ್ ಪೊಲೀಸರಿಗೆ ಸಲ್ಲಿಸಲಾಗಿರುವ ವರದಿಯಲ್ಲಿ ಹೇಳಲಾಗಿದೆ. 

ಲಂಡನ್ (ರಾಯಿಟರ್ಸ್): ವಿಕ್ರಮ್ ದೊರೈಸ್ವಾಮಿ ಅವರಿಗೆ ಗುರುದ್ವಾರ ಪ್ರವೇಶಕ್ಕೆ ಅಡ್ಡಿಪಡಿಸಿದ ಬಗ್ಗೆ ಬ್ರಿಟಿಷ್ ಸರ್ಕಾರವು ಕಳವಳ ವ್ಯಕ್ತಪಡಿಸಿದೆ. ‘ವಿದೇಶಿ ರಾಯಭಾರಿಗಳ ಸುರಕ್ಷತೆಯು ನಮಗೆ ಬಹಳ ಮಹತ್ವದ್ದು. ನಮ್ಮಲ್ಲಿನ ಪೂಜಾ ಸ್ಥಳಗಳು ಎಲ್ಲರಿಗೂ ಮುಕ್ತವಾಗಿರಬೇಕು’ ಎಂದು ಬ್ರಿಟನ್ ಸಚಿವೆ ಆ್ಯನಿ–ಮೇರಿ ಟ್ರವೆಲಿನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT