ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ ಸಂಘಟನೆಗೆ ಹೊಸ ನಾಯಕತ್ವ

ಬಗ್ದಾದಿ ಹತ್ಯೆಗೆ ಸಂಭ್ರಮಪಡಬೇಡಿ: ಅಮೆರಿಕಗೆ ಉಗ್ರರ ಎಚ್ಚರಿಕೆ
Last Updated 1 ನವೆಂಬರ್ 2019, 19:53 IST
ಅಕ್ಷರ ಗಾತ್ರ

ಬೈರೂತ್‌: ಇಸ್ಲಾಮಿಕ್ ಸ್ಟೇಟ್‌ (ಐಎಸ್‌) ಉಗ್ರಗಾಮಿ ಸಂಘಟನೆ ನೇತೃತ್ವವನ್ನು ಅಬು ಇಬ್ರಾಹಿಂ ಅಲ್‌–ಹಶಿಮಿ ಅಲ್‌–ಖುರೇಷಿಗೆ ವಹಿಸಲಾಗಿದೆ.

ಐಎಸ್‌ ಸ್ಥಾಪಕ ಅಬುಬಕರ್‌ ಅಲ್‌–ಬಗ್ದಾದಿ ಹತ್ಯೆಯನ್ನು ದೃಢಪಡಿಸಿರುವ ಐಎಸ್‌, ಆತನ ಉತ್ತರಾಧಿಕಾರಿಯಾಗಿ ಖುರೇಷಿಯನ್ನು ನೇಮಿಸಿದೆ.

ಬಗ್ದಾದಿಯ ವಕ್ತಾರನಾಗಿದ್ದ ಅಬು ಹಸ್ಸನ್‌ ಅಲ್‌–ಮುಹಾಜಿರ್‌ ಸಹ ಅಮೆರಿಕ ನಡೆಸಿದ ಸೇನಾ ಕಾರ್ಯಾಚರಣೆಯಲ್ಲಿ ಸಾವಿಗೀಡಾಗಿದ್ದಾನೆ ಎಂದು ಐಎಸ್‌ ದೃಢಪಡಿಸಿದೆ. ಮುಹಾಜಿರ್‌ ಬಗ್ದಾದಿಯ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗಿತ್ತು.

‘ಬಗ್ದಾದಿ ಹತ್ಯೆ ಬಳಿಕ ಐಎಸ್‌ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಬಗ್ದಾದಿಯ ಉತ್ತರಾಧಿಕಾರಿಯನ್ನುನೇಮಿಸಲು ಒಪ್ಪಿಗೆ ನೀಡಲಾಯಿತು‘ ಎಂದು ಸಂಘಟನೆಯ ವಕ್ತಾರ ಅಬು ಹಮ್ಜಾ ಅಲ್‌ ಖುರೇಷಿ ಧ್ವನಿಮುದ್ರಿತ ಹೇಳಿಕೆಯಲ್ಲಿ ತಿಳಿಸಿದ್ದಾನೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೂ ಐಎಸ್‌ ವಕ್ತಾರ ಎಚ್ಚರಿಕೆ ನೀಡಿದ್ದು, ’ಅಮೆರಿಕ ಸಂಭ್ರಮಪಡುವ ಅಗತ್ಯವಿಲ್ಲ. ಬಗ್ದಾದಿ ಸಾವಿನ ಸೇಡನ್ನು ಸಂಘಟನೆಯ ಬೆಂಬಲಿಗರು ತೀರಿಸಿಕೊಳ್ಳಲಿದ್ದಾರೆ. ಹೊಸ ಉತ್ತರಾಧಿಕಾರಿ ಭಯಾನಕ ಸನ್ನಿವೇಶವನ್ನು ಹೋಗಲಾಡಿಸಿ ಬಗ್ದಾದಿಯ ಸಾಧನೆಗಳ ದಿನಗಳನ್ನು ಮತ್ತೆ ಮರುಕಳಿಸುವಂತೆ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ‘ ಎಂದಿದ್ದಾನೆ.

’ಸಿರಿಯಾ ಮತ್ತು ಇರಾಕ್‌ನ ಕಾರಾಗೃಹದಲ್ಲಿರುವ ಸಾವಿರಾರು ಐಎಸ್‌ ಉಗ್ರರನ್ನು ಬಿಡುಗಡೆ ಮಾಡಬೇಕು‘ ಎಂದು ಒತ್ತಾಯಿಸಿದ್ದಾನೆ.

ಸಿರಿಯಾದಲ್ಲಿ ಸುಮಾರು 12 ಸಾವಿರ ಐಎಸ್‌ ಉಗ್ರರು ಕಾರಾಗೃಹದಲ್ಲಿದ್ದಾರೆ ಎಂದು ಅಂದಾಜಿಸಲಾಗಿದೆ. ಇಲ್ಲಿರುವ ಬಹುತೇಕರು ಇರಾಕ್‌ ಮತ್ತು ಸಿರಿಯಾಗೆ ಸೇರಿದ್ದಾರೆ. ಇವರಲ್ಲಿ ಸುಮಾರು ಎರಡು ಸಾವಿರ ಮಂದಿ 50 ದೇಶಗಳಿಗೆ ಸೇರಿದ್ದಾರೆ.

ಬಗ್ದಾದಿ ಉತ್ತರಾಧಿಕಾರಿಯಾಗಿರುವ ಖುರೇಷಿ ಬಗ್ಗೆ ಹೆಚ್ಚಿನ ಮಾಹಿತಿ ಸಾರ್ವಜನಿಕ ಲಭ್ಯವಾಗಿಲ್ಲ ಎಂದು ಹಲವು ವಿಶ್ಲೇಷಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT