ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಮಾಸ್‌: 50 ಒತ್ತೆಯಾಳು ಬಿಡುಗಡೆಗೆ ಒಪ್ಪಿಗೆ

ಕತಾರ್‌, ಈಜಿಪ್ಟ್‌– ಅಮೆರಿಕ ಮಧ್ಯಸ್ತಿಕೆ ಸೂತ್ರ ಫಲಪ್ರದ
Published 22 ನವೆಂಬರ್ 2023, 16:37 IST
Last Updated 22 ನವೆಂಬರ್ 2023, 16:37 IST
ಅಕ್ಷರ ಗಾತ್ರ

ಜೆರುಸಲೇಂ (ಪಿಟಿಐ): ಇಸ್ರೇಲ್‌ ಹಾಗೂ ಹಮಾಸ್‌ ನಡುವಿನ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಟೆಲ್ ಅವೀವ್‌ನಲ್ಲಿ ಬುಧವಾರ ಬೆಳಿಗ್ಗೆ ಆರು ಗಂಟೆ ಕಾಲ ಸುದೀರ್ಘ ಸಭೆ ನಡೆಯಿತು.

ಕತಾರ್‌, ಈಜಿಪ್ಟ್‌, ಅಮೆರಿಕ ಮಧ್ಯಸ್ತಿಕೆಯಡಿ ಮಂಡಿಸಿದ ಒಪ್ಪಂದಕ್ಕೆ ಇಸ್ರೇಲ್‌ನ ಸಚಿವ ಸಂಪುಟ ಸಭೆಯಲ್ಲಿ 35–3 ಮತಗಳ ಬೆಂಬಲ ದೊರೆಯಿತು. ಆದರೆ, ಇದಕ್ಕೆ ಬಲಪಂಥೀಯವಾದ ಪ್ರತಿಪಾದಿಸುವ ಒಟ್ಜ್ಮಾ ಯೆಹುದಿತ್ ಪಕ್ಷದ ರಾಷ್ಟ್ರೀಯ ರಕ್ಷಣಾ ಸಚಿವ ಇಟಮಾರ್ ಬೆನ್ ಜಿವಿರ್ ತೀವ್ರವಾಗಿ ವಿರೋಧಿಸಿದರು. ಒಪ್ಪಂದಕ್ಕೆ ವಿರುದ್ಧವಾಗಿ ಅವರು ಮತ ಚಲಾಯಿಸಿದರು.

ಮೊದಲ ಹಂತದಲ್ಲಿ 50 ಮಹಿಳೆಯರು ಹಾಗೂ ಮಕ್ಕಳ ಬಿಡುಗಡೆ ಹೊರತುಪಡಿಸಿ ಹೆಚ್ಚುವರಿಯಾಗಿ 10 ಒತ್ತೆಯಾಳುಗಳ ಬಿಡುಗಡೆಗಾಗಿ ಮತ್ತೆ ಕದನ ವಿರಾಮ ವಿಸ್ತರಣೆಯಾಗಲಿದೆ ಎಂದು ಇಸ್ರೇಲ್‌ ಪ್ರಧಾನಿ ಕಚೇರಿ ಹೇಳಿದೆ. ಆದರೆ, ಇದಕ್ಕೆ ಬದಲಾಗಿ ಸೆರೆಯಲ್ಲಿರುವ ಪ್ಯಾಲೆಸ್ಟೀನ್‌ನ ಎಷ್ಟು ಜನರನ್ನು ಬಿಡುಗಡೆಗೊಳಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

‘ಹಮಾಸ್‌ ಅಪಹರಿಸಿರುವ ಇಸ್ರೇಲ್‌ ಎಲ್ಲಾ ನಾಗರಿಕರನ್ನು ಸುರಕ್ಷಿತವಾಗಿ ಮನೆಗೆ ಕರೆತರಲು ಸರ್ಕಾರ ಬದ್ಧವಾಗಿದೆ’ ಎಂದು ಹೇಳಿದೆ.

ಇಸ್ರೇಲ್‌ ಕಾನೂನಿನ ಅನ್ವಯ ಇಂತಹ ಒಪ್ಪಂದದ ಜಾರಿಗೂ ಮೊದಲು ಸಾರ್ವಜನಿಕರ ಅಭಿಪ್ರಾಯಕ್ಕೆ ಮಂಡಿಸಲಾಗುತ್ತದೆ. ಈ ಬಗ್ಗೆ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಅವಕಾಶವಿದೆ. ಯಾವುದೇ ಅಡೆತಡೆ ಇಲ್ಲದಿದ್ದರೆ ಅಂತಿಮವಾಗಿ ಸರ್ಕಾರ ಅನುಮೋದನೆ ನೀಡುತ್ತದೆ. ಹಾಗಾಗಿ, ಒಪ್ಪಂದ ಜಾರಿಗೆ ಒಂದು ದಿನ ಹಿಡಿಯಬಹುದು ಎಂದು ಹೇಳಲಾಗಿದೆ.

ಬೈಡನ್‌ ಅಭಿನಂದನೆ: 

ಒತ್ತೆಯಾಳುಗಳ ಜೊತೆಗೆ ಏಳು ಮಂದಿ ಅಮೆರಿಕ ಪ್ರಜೆಗಳು ಬಿಡುಗಡೆಯಾಗಲಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

‘ಒಪ್ಪಂದ ಯಶಸ್ವಿಯಾಗುವಲ್ಲಿ ಕತಾರ್‌ ರಾಜ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಹಾಗೂ ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್-ಫತ್ತಾಹ್ ಇಲ್-ಸಿಸಿ ಅವರ ನಾಯಕತ್ವ ಹಾಗೂ ಪಾಲುದಾರಿಕೆ ನಿರ್ಣಾಯಕವಾಗಿದೆ’ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT