ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಸ್ರೇಲ್ ವಾಯುದಾಳಿಗೆ ಹಿಜ್ಬುಲ್ಲಾದ ಮತ್ತೊಬ್ಬ ಉನ್ನತ ನಾಯಕ ಹತ್ಯೆ

ಶನಿವಾರ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಹಿಜ್ಬುಲ್ಲಾ ಸಂಘಟನೆಯ ಮತ್ತೊಬ್ಬ ಮುಖಂಡ ಮೃತಪಟ್ಟಿದ್ದಾನೆ ಎಂದು ಇಸ್ರೇಲ್ ಸೇನಾಧಿಕಾರಿಗಳು ಹೇಳಿದ್ದಾರೆ.
Published : 29 ಸೆಪ್ಟೆಂಬರ್ 2024, 9:33 IST
Last Updated : 29 ಸೆಪ್ಟೆಂಬರ್ 2024, 9:33 IST
ಫಾಲೋ ಮಾಡಿ
Comments

ಜೇರುಸಲೇಂ: ಶನಿವಾರ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಹಿಜ್ಬುಲ್ಲಾ ಸಂಘಟನೆಯ ಮತ್ತೊಬ್ಬ ಮುಖಂಡ ಮೃತಪಟ್ಟಿದ್ದಾನೆ ಎಂದು ಇಸ್ರೇಲ್ ಸೇನಾಧಿಕಾರಿಗಳು ಹೇಳಿದ್ದಾರೆ.

ದಾಳಿಯಲ್ಲಿ ಹಿಜ್ಬುಲ್ಲಾ ಕೇಂದ್ರ ಸಮಿತಿಯ ಉಪ ಮುಖ್ಯಸ್ಥ ನಬಿಲ್ ಕಾವುಕ್ ಎನ್ನುವರು ಮೃತಪಟ್ಟಿದ್ದಾರೆ. ಶುಕ್ರವಾರವಷ್ಟೇ ಹಿಜ್ಬುಲ್ಲಾದ ಮುಖ್ಯಸ್ಥ ಸಯ್ಯದ್‌ ಹಸನ್‌ ನಸ್ರಲ್ಲಾರನ್ನು ಇಸ್ರೇಲ್ ವಾಯುದಾಳಿ ಮಾಡಿ ಹತ್ಯೆ ಮಾಡಿತ್ತು.

ನಸ್ರಲ್ಲಾ ನಿಧನದ ಬಳಿಕ ನಭಿ ಕಾವುಕ್ ಹಿಜ್ಬುಲ್ಲಾ ಸಂಘಟನೆಯನ್ನು ಮುನ್ನಡೆಸುವುದಾಗಿ ಹೇಳಿಕೊಂಡಿದ್ದ. ಆದರೆ, ಹೋರಾಟ ಅಣಿಗೊಳಿಸುವ ಮುನ್ನವೇ ಆತ ಮೃತಪಟ್ಟಿದ್ದಾನೆ ಎಂದು ಇಸ್ರೇಲ್ ಸೇನಾಧಿಕಾರಿಗಳು ಸುದ್ದಿಸಂಸ್ಥೆ ಎಪಿಗೆ ತಿಳಿಸಿದ್ದಾರೆ.

ಹಿಜ್ಬುಲ್ಲಾ ಸಂಘಟನೆಯ ಹಲವು ನಾಯಕರು ಲೆಬನಾನ್‌ನ ದಕ್ಷಿಣ ಬೈರೂತ್‌ನ ದಾಹಿಯಾ ಪ್ರದೇಶದಲ್ಲಿ ಶುಕ್ರವಾರ (ಸೆಪ್ಟೆಂಬರ್‌ 17ರಂದು) ಸಭೆ ಸೇರಿದ್ದರು. ಈ ಸಭೆಯಲ್ಲಿ ನಸ್ರಲ್ಲಾ ಭಾಗವಹಿಸಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಇಸ್ರೇಲ್‌ ಸೇನೆ, ವಾಯುದಾಳಿ ನಡೆಸಿತ್ತು. ನಸ್ರಲ್ಲಾ ಮಾತ್ರವಲ್ಲದೆ, ಸಂಘಟನೆಯ ಕಮಾಂಡರ್‌ ಅಲಿ ಕರ್ಕಿ ಸಹ ಮೃತಪಟ್ಟಿದ್ದರು.

ಲೆಬನಾನ್‌ ರಾಜಧಾನಿ ಬೈರೂತ್‌ನ ದಕ್ಷಿಣ ಭಾಗದ ಮೇಲೆ ಭಾನುವಾರ ಇಸ್ರೇಲ್‌ ಸೇನೆ ‘ನಿಖರ ದಾಳಿ’ ನಡೆಸಿದೆ. ‘ಈ ದಾಳಿಯಲ್ಲಿ ಒಟ್ಟು 24 ಮಂದಿ ಮೃತಪಟ್ಟಿದ್ದಾರೆ’ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಹಿಜ್ಬುಲ್ಲಾ ಕೂಡಾ ಉತ್ತರ ಇಸ್ರೇಲ್‌ ಮೇಲೆ ನೂರಾರು ರಾಕೆಟ್‌ಗಳು ಮತ್ತು ಕ್ಷಿಪಣಿಗಳನ್ನು ಹಾರಿಸಿದೆ. ಅವುಗಳಲ್ಲಿ ಹೆಚ್ಚಿನವನ್ನು ಇಸ್ರೇಲ್‌ ಸೇನೆ ಹೊಡೆದುರುಳಿಸಿದರೆ, ಕೆಲವು ನಿರ್ಜನ ಪ್ರದೇಶದಲ್ಲಿ ಬಿದ್ದಿವೆ.

ಅಲಿ ಕರ್ಕಿ ಸಾವು ದೃಢಪಡಿಸಿದ ಹಿಜ್ಬುಲ್ಲಾ: ತನ್ನ ಕಮಾಂಡರ್‌ ಅಲಿ ಕರ್ಕಿ ಅವರ ಸಾವನ್ನು ಹಿಜ್ಬುಲ್ಲಾ ಸಂಘಟನೆ ಧೃಡಪಡಿಸಿದೆ. ಇಸ್ರೇಲ್‌ ಸೇನೆ ಬೈರೂತ್‌ ಮೇಲೆ ಶುಕ್ರವಾರ ನಡೆಸಿದ ದಾಳಿಯಲ್ಲಿ ಸಂಘಟನೆಯ ಮುಖ್ಯಸ್ಥ ಹಸನ್‌ ನಸ್ರಲ್ಲಾ ಮೃತಪಟ್ಟಿದ್ದರು. ಅದೇ ದಾಳಿಯಲ್ಲಿ ಕರ್ಕಿ ಅವರೂ ಹತ್ಯೆಯಾಗಿದ್ದಾರೆ ಎಂದು ಇಸ್ರೇಲ್‌ ಹೇಳಿತ್ತು.

ಜಾಮಿಯಾ ಇಸ್ಲಾಮಿಯಾ ಮುಖಂಡನ ಹತ್ಯೆ: ಲೆಬನಾನ್‌ನ ಬೆಕಾ ಕಣಿವೆ ಭಾಗದಲ್ಲಿ ಇಸ್ರೇಲ್‌ ಭಾನುವಾರ ನಡೆಸಿದ ದಾಳಿಯಲ್ಲಿ ಇಲ್ಲಿನ ಸುನ್ನಿ ಇಸ್ಲಾಮಿಸ್ಟ್ ಸಂಘಟನೆ ಜಾಮಿಯಾ ಇಸ್ಲಾಮಿಯಾದ ಮುಖಂಡ ಮೊಹಮ್ಮದ್‌ ದಹ್ರೋಜ್ ಮೃತಪಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ. ಈ ಸಂಘಟನೆಯು ಹಲವು ಸಲ ಇಸ್ರೇಲ್‌ ಮೇಲೆ ರಾಕೆಟ್‌ ದಾಳಿ ನಡೆಸಿದೆ.

ಸಂಘರ್ಷ ನಿಲ್ಲಿಸಲು ಚೀನಾ ಕರೆ (ಬೀಜಿಂಗ್‌ ವರದಿ):

ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಸಂಘರ್ಷವನ್ನು ನಿಲ್ಲಿಸಲು ಸಂಬಂಧಪಟ್ಟ ಎಲ್ಲರೂ ಮುಂದಾಗಬೇಕು ಎಂದು ಚೀನಾ ಹೇಳಿದೆ.

‘ಸಂಘರ್ಷವು ಉಲ್ಬಣಗೊಳ್ಳದಂತೆ ಅಥವಾ ಕೈಮೀರಿ ಹೋಗದಂತೆ ನೋಡಿಕೊಳ್ಳಲು ಸಂಬಂಧಪಟ್ಟವರು ಅದರಲ್ಲೂ ಮುಖ್ಯವಾಗಿ, ಇಸ್ರೇಲ್‌ ತಕ್ಷಣವೇ ಕ್ರಮಗಳನ್ನು ತೆಗೆದುಕೊಳ್ಳುವಂತೆ ಚೀನಾ ಒತ್ತಾಯಿಸುತ್ತದೆ’ ಎಂದು ವಿದೇಶಾಂಗ ಇಲಾಖೆಯ ಹೇಳಿಕೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT