ಜೆರುಸಲೇಂ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹೃದಯಕ್ಕೆ ಪೇಸ್‌ಮೇಕರ್ ಅಳವಡಿಕೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
73 ವರ್ಷದ ನೇತನ್ಯಾಹು ಅವರಿಗೆ ಇತ್ತೀಚೆಗೆ ತಲೆ ಸುತ್ತುವಿಕೆ (ನಿರ್ಜಲೀಕರಣ) ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಶೆಬಾ ಮೆಡಿಕಲ್ ಸೆಂಟರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮುಂಜಾನೆ ನೆತನ್ಯಾಹು ಅವರ ಹೃದಯಕ್ಕೆ ಪೇಸ್‌ಮೇಕರ್ ಅಳವಡಿಸಲಾಗಿದೆ.
ನೆತನ್ಯಾಹು ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಸುಧಾರಣಾ ಕಾಯ್ದೆ ಮೂಲಕ ದೇಶದ ನ್ಯಾಯಾಂಗದಲ್ಲಿ ಭಾರಿ ಬದಲಾವಣೆ ತರಲು ಹೊರಟಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ನಡೆಯುತ್ತಿದೆ. ಟೇಲ್ ಅವಿವ್‌ನಿಂದ ಜೆರುಸಲೇಂ ವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದಾರೆ.
ನ್ಯಾಯಾಂಗದಲ್ಲಿನ ಬದಲಾವಣೆಗೆ ವಿರೋಧಗಳು ವ್ಯಕ್ತವಾದರೂ, ಪ್ರತಿಭಟನೆಗಳು ನಡೆದರೂ, ಮಿಲಿಟಿರಿ ಅಧಿಕಾರಿಗಳು ಪದತ್ಯಾಗ ಮಾಡಿದರೂ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಲಹೆ ನೀಡಿದರೂ ನೇತನ್ಯಾಹು ತಮ್ಮ ನಿರ್ಧಾರಕ್ಕೆ ಅಂಟಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೋರಾಟಗಾರರು 70 ಕಿ.ಮೀಗಳ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದರು.
ಮೊದಲಿಗೆ ನೂರರ ಸಂಖ್ಯೆಯಲ್ಲಿದ್ದ ಹೋರಾಟಗಾರರ ಸಂಖ್ಯೆ ನೋಡ ನೋಡುತ್ತ ಸಾವಿರ ಸಂಖ್ಯೆಗೆ ಏರಿತ್ತು. ಸರ್ಕಾರದ ನಿರ್ಧಾರಗಳನ್ನು ರದ್ದುಗೊಳಿಸಬಲ್ಲ ನ್ಯಾಯಾಂಗದ ಅಧಿಕಾರವನ್ನು ಮೊಟಕುಗೊಳಿಸುವುದಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ನ್ಯಾಯಾಂಗ ಸುಧಾರಣೆ ಕಾಯ್ದೆಯಲ್ಲಿ ಸೇರ್ಪಡೆ ಮಾಡಲು ಇತ್ತೀಚೆಗೆ ಸಂಸದೀಯ ಸಮಿತಿ ಒಪ್ಪಿಗೆ ನೀಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.