ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಮಾಸ್‌ ನಾಶಕ್ಕೆ ಹಲವು ತಿಂಗಳೇ ಬೇಕು: ಇಸ್ರೇಲ್‌

ಗಾಜಾಪಟ್ಟಿಯಲ್ಲಿ ಯುದ್ಧ ನಿಲ್ಲದು: ಮಿತ್ರ ರಾಷ್ಟ್ರ ಅಮೆರಿಕಕ್ಕೂ ದೃಢ ಸಂದೇಶ ರವಾನಿಸಿದ ಬೆಂಜಮಿತ್‌ ನೆತನ್ಯಾಹು
Published 15 ಡಿಸೆಂಬರ್ 2023, 13:35 IST
Last Updated 15 ಡಿಸೆಂಬರ್ 2023, 13:35 IST
ಅಕ್ಷರ ಗಾತ್ರ

ಟೆಲ್‌ ಅವಿವ್‌: ಹಮಾಸ್‌ ನಾಶಪಡಿಸಲು ತಿಂಗಳುಗಳು ಬೇಕಾಗಲಿವೆ ಎಂದು ಇಸ್ರೇಲ್‌ ರಕ್ಷಣಾ ಸಚಿವ ಯೋವ್‌ ಗ್ಯಾಲಂಟ್‌ ಹೇಳಿದ್ದಾರೆ.

ಗಾಜಾದಲ್ಲಿ ಮೂರನೇ ತಿಂಗಳಿಗೆ ಕಾಲಿಟ್ಟಿರುವ ಯುದ್ಧ ಕೊನೆಗೊಳಿಸುವ ಸಂಬಂಧ ವೇಳಾಪಟ್ಟಿ ಬಗ್ಗೆ ಚರ್ಚಿಸಲು ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು ಇಸ್ರೇಲ್‌ ನಾಯಕರನ್ನು ಭೇಟಿಯಾದ ಬೆನ್ನಲ್ಲೇ ಯೋವ್ ಗ್ಯಾಲಂಟ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

ಗಾಜಾ ಪಟ್ಟಿಯಲ್ಲಿ ಆಗಿರುವ ವಿನಾಶವನ್ನು ಗಮನದಲ್ಲಿಟ್ಟುಕೊಂಡು ತಕ್ಷಣವೇ ಕದನ ವಿರಾಮ ಘೋಷಿಸುವಂತೆ ಮತ್ತು ಮಾನವೀಯ ಪರಿಹಾರಕ್ಕೆ ಹಾದಿ ಮಾಡಿಕೊಡುವಂತೆ ಇಸ್ರೇಲ್ ಹಾಗೂ ಅದರ ಮಿತ್ರ ರಾಷ್ಟ್ರ ಅಮೆರಿಕದ ಮೇಲೆ ಅಂತರರಾಷ್ಟ್ರೀಯ ಒತ್ತಡ ಹೆಚ್ಚುತ್ತಿರುವುದರ ನಡುವೆಯೂ ಇಸ್ರೇಲ್‌ ಸದ್ಯಕ್ಕೆ ಯುದ್ಧ ನಿಲ್ಲಿಸದು ಎನ್ನುವುದು ಗ್ಯಾಲಂಟ್‌ ಅವರ ಈ ಹೇಳಿಕೆಯಿಂದ ವ್ಯಕ್ತವಾಗಿದೆ.     

ಅ.7ರಂದು ಹಮಾಸ್‌ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇಡೀ ಹಮಾಸ್‌ ಬಂಡುಕೋರ ಸಂಘಟನೆಯನ್ನು ಸಂಪೂರ್ಣ ನಾಶಪಡಿಸುವವರೆಗೂ ಕಾರ್ಯಾಚರಣೆ ನಿಲ್ಲದು ಎನ್ನುವ ತನ್ನ ದೃಢ ನಿಲುವನ್ನು ಇಸ್ರೇಲ್‌ ನಾಯಕರು ಪುನರುಚ್ಚರಿಸಿದ್ದಾರೆ.

‘ಹಮಾಸ್ ದಶಕಕ್ಕೂ ಹೆಚ್ಚು ಕಾಲದಿಂದ ಗಾಜಾದಲ್ಲಿ ಮಿಲಿಟರಿ ಮೂಲಸೌಕರ್ಯ ನಿರ್ಮಿಸುತ್ತಿದೆ. ಅವುಗಳನ್ನು ಸಂಪೂರ್ಣ ನಾಶಮಾಡುವುದು ಸುಲಭವಲ್ಲ. ಅದಕ್ಕೆ ಕಾಲಾವಕಾಶ ಬೇಕಾಗುತ್ತದೆ. ಆದರೆ, ನಾವು ಇದರಲ್ಲಿ ಗೆಲ್ಲುತ್ತೇವೆ ಮತ್ತು ಅವುಗಳನ್ನು ಸಂಪೂರ್ಣ ನಾಶಪಡಿಸುತ್ತೇವೆ’ ಎಂದು ಗ್ಯಾಲಂಟ್ ಹೇಳಿದರು.  

ಯುದ್ಧ ನಿಲ್ಲದು:

ಟೆಲ್ ಅವಿವ್‌ನಲ್ಲಿ ಜೇಕ್‌ ಸುಲ್ಲಿವಾನ್ ಜೊತೆಗಿನ ಮಾತುಕತೆಯ ನಂತರ, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, 'ಹಮಾಸ್ ಅನ್ನು ಸಂಪೂರ್ಣ ನಾಶಮಾಡುವವರೆಗೆ, ಸಂಪೂರ್ಣ ವಿಜಯ ಸಾಧಿಸುವವರೆಗೆ ಹೋರಾಟ ಮುಂದುವರಿಸಲು ದೇಶವು ಹಿಂದೆಂದಿಗಿಂತಲೂ ಈಗ ಹೆಚ್ಚು ದೃಢ ನಿರ್ಧಾರ ಮಾಡಿದೆ ಎಂದು ತಮ್ಮ ಮಿತ್ರರಾಷ್ಟ್ರಕ್ಕೆ ತಿಳಿಸಿದರು.

ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ, ‘ಸುಲ್ಲಿವಾನ್ ಅವರು ನೆತನ್ಯಾಹು ಅವರೊಂದಿಗೆ ಮಾತುಕತೆ ನೆಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಡಿಮೆ ತೀವ್ರತೆಯ ಕಾರ್ಯಾಚರಣೆಗಳಿಗೆ ಸೀಮಿತವಾಗುವಂತೆ ಸಲಹೆ ನೀಡಿದ್ದಾರೆ. ಆದರೆ, ಇದಕ್ಕೆ ಸಮಯದ ಗಡುವು ಹಾಕಲು ನಾವು ಬಯಸಿಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT