ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Kenya | ಕೆನ್ಯಾದಲ್ಲಿ ಹೊಸ ತೆರಿಗೆ ವಿವಾದ: ತೀವ್ರಗೊಂಡ ಪ್ರತಿಭಟನೆ, ಐದು ಜನ ಸಾವು

Published 26 ಜೂನ್ 2024, 2:32 IST
Last Updated 26 ಜೂನ್ 2024, 2:32 IST
ಅಕ್ಷರ ಗಾತ್ರ

ನೈರೋಬಿ: ಹೊಸ ತೆರಿಗೆ ಹಾಗೂ ವಿವಾದಾತ್ಮಕ ಹಣಕಾಸು ಮಸೂದೆ ವಿರೋಧಿಸಿ ಕೆನ್ಯಾದಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಐವರು ಮೃತಪಟ್ಟು 12ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಲ್ಲಿನ ಸಂಸತ್‌ನೊಳಗೆ ನುಗ್ಗುತ್ತಿದ್ದ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಸಿಡಿಸಿದರು. ಈ ವೇಳೆ ಐವರು ಮೃತಪಟ್ಟಿದ್ದು 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮಾನವ ಹಕ್ಕುಗಳ ಸಂಘಟನೆ ಆರೋಪಿಸಿದೆ.

ದೇಶದ ಹಲವು ಭಾಗಗಳಲ್ಲಿ ಸಹ ಪ್ರತಿಭಟನೆ ನಡೆಯುತ್ತಿದ್ದು, ಗಾಯಗೊಂಡವರಿಗೆ ಚಿಕಿತ್ಸೆ ನೀಡುವುದಕ್ಕಾಗಿ ವಿವಿಧೆಡೆ ತುರ್ತು ಸ್ಪಂದನಾ ಕೇಂದ್ರಗಳನ್ನು ಆರಂಭಿಸಲಾಗಿದೆ.

ಕಳೆದ ವಾರ ನಡೆದ ಪ್ರತಿಭಟನೆ ವೇಳೆ, ಪೊಲೀಸರು ಹಾರಿಸಿದ್ದ ಗುಂಡಿಗೆ ಇಬ್ಬರು ಮೃತಪಟ್ಟಿದ್ದರು. ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ 7 ಜನರು ಮೃತಪಟ್ಟಿದ್ದು 31ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಸ್ಯಾನಿಟರಿ ಟವೆಲ್‌ ಮತ್ತು ಡಯಪರ್ಸ್‌ಗಳ ಮೇಲಿನ ತೆರಿಗೆ ಹೆಚ್ಚಳ ಮಾಡಲು ಸರ್ಕಾರ ಮುಂದಾಗಿದೆ. ಇದರ ಜೊತೆಗೆ ಇನ್ನೂ ಹಲವು ಸರಕುಗಳ ಮೇಲಿನ ತೆರಿಗೆ ಹೆಚ್ಚಳಕ್ಕೆ ಅನುವು ಮಾಡಿಕೊಡುವ ಹಣಕಾಸು ಮಸೂದೆ ಮೇಲೆ ಸಂಸತ್‌ನಲ್ಲಿ ಚರ್ಚೆ ನಡೆದಿದ್ದು, ಮಸೂದೆಯನ್ನು ಮತಕ್ಕೆ ಹಾಕಲಾಗಿದೆ.

ಪ್ರಸ್ತಾವಿತ ತೆರಿಗೆಗಳನ್ನು ವಿರೋಧಿಸಿ ಕಳೆದ ಕೆಲ ದಿನಗಳಿಂದಲೂ ಪ್ರತಿಭಟನೆ ನಡೆಯುತ್ತಿದ್ದು, ಮಂಗಳವಾರದಿಂದ ಪ್ರತಿಭಟನೆ  ತೀವ್ರಗೊಂಡಿದೆ. ಪ್ರಸ್ತಾವಿತ ತೆರಿಗೆ ಮಸೂದೆಯನ್ನು ಹಿಂಪಡೆಯುವವರೆಗೂ ಪ್ರತಿಭಟನೆ ಮುಂದುವರೆಯಲಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT