ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 6ರಂದು ಬ್ರಿಟನ್‌ನ ನೂತನ ದೊರೆ 3ನೇ ಚಾರ್ಲ್ಸ್‌ ಪಟ್ಟಾಭಿಷೇಕ

Published 24 ಏಪ್ರಿಲ್ 2023, 13:52 IST
Last Updated 24 ಏಪ್ರಿಲ್ 2023, 13:52 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ನ ನೂತನ ದೊರೆ 3ನೇ ಚಾರ್ಲ್ಸ್‌ ಅವರ ಪಟ್ಟಾಭಿಷೇಕ ಮೇ 6ರಂದು ಇಲ್ಲಿ ನಡೆಯಲಿದ್ದು, 70 ವರ್ಷಗಳ ಬಳಿಕ ದೇಶವು ಅದ್ಧೂರಿ ಸಮಾರಂಭವೊಂದಕ್ಕೆ ಸಾಕ್ಷಿಯಾಗಲಿದೆ.

ರಾಣಿ 2ನೇ ಎಲಿಜಬೆತ್ ಅವರು ನಿಧನರಾದ ಎಂಟು ತಿಂಗಳ ಬಳಿಕ ಈ ಪಟ್ಟಾಭಿಷೇಕ ನಡೆಯುತ್ತಿದ್ದು, ಸೆಂಟ್ರಲ್‌ ಲಂಡನ್‌ ಚರ್ಚ್‌ನಲ್ಲಿ ಪಟ್ಟಕ್ಕೇರುವ 40ನೇ ದೊರೆಯಾಗಿ ಚಾರ್ಲ್ಸ್‌ ಇತಿಹಾಸ ಬರೆಯಲಿದ್ದಾರೆ. ಬ್ರಿಟನ್‌ಗೆ ಮಾತ್ರವಲ್ಲ, ಕಾಮನ್‌ವೆಲ್ತ್‌ನ 14 ದೇಶಗಳಿಗೂ ಅವರೇ ದೊರೆ ಆಗಿರುತ್ತಾರೆ. ಅವರ ಎರಡನೇ ಪತ್ನಿ ಕೆಮಿಲ್ಲಾ ಅವರು ಪಟ್ಟದ ರಾಣಿ ಆಗಿರಲಿದ್ದಾರೆ. ಕ್ರಿ.ಶ.1066ರಲ್ಲಿ ದೊರೆ 1ನೇ ವಿಲಿಯಂ ಅವರು ಇಲ್ಲಿ ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡಿದ್ದರು.

ಬ್ರಿಟನ್‌ನ ಒಂದು ತಲೆಮಾರು ದೊರೆಯ ಪಟ್ಟಾಭಿಷೇಕ ಕಣ್ತುಂಬಿಕೊಳ್ಳುವುದರಿಂದ ಬಹುತೇಕ ವಂಚಿತವಾಗಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಈ ಹಿಂದಿನ ಪಟ್ಟಾಭಿಷೇಕ ನಡೆದುದು 1953ರಲ್ಲಿ. ಆಂದು ಎಲಿಜಬೆತ್ ಅವರ ಪಟ್ಟಾಭಿಷೇಕಕ್ಕೆ 9.12 ಲಕ್ಷ ಪೌಂಡ್‌ (ಈಗಿನ ಕರೆನ್ಸಿ ಮೌಲ್ಯದಲ್ಲಿ ಸುಮಾರು ₹ 204 ಕೋಟಿ) ಖರ್ಚಾಗಿತ್ತು. ಈ ಬಾರಿ ಪಟ್ಟಾಭಿಷೇಕಕ್ಕೆ ಅತಿಯಾದ ದುಂದುವೆಚ್ಚ ಮಾಡುವುದಿಲ್ಲ ಎಂದು ಸಚಿವ ಒಲಿವರ್‌ ಡೌಂಡೆನ್‌ ಹೇಳಿದ್ದರೂ, 74 ವರ್ಷದ ಜಾರ್ಲ್ಸ್‌ ಅವರ ಪಟ್ಟಾಭಿಷೇಕ ಜಗತ್ತಿನ ಗಮನ ಸೆಳೆಯುವ ರೀತಿಯಲ್ಲಿ ಮಾತ್ರ ಇರುತ್ತದೆ ಎಂಬುದು ಈಗ ನಡೆದಿರುವ ಸಿದ್ಧತಾ ಕಾರ್ಯಗಳಿಂದಲೇ ಗೊತ್ತಾಗಿದೆ.

ಯುವಕರಿಂದ ನಿರುತ್ಸಾಹ: ರಾಜವಂಶ ಪರಂಪರೆಯನ್ನು ಮುಂದುವರಿಸಬೇಕೇ ಎಂಬ ಬಗ್ಗೆ ನಡೆದ ಸಮೀಕ್ಷೆಯಲ್ಲಿ ರಾಜಪರಂಪರೆ ಉಳಿಸಬಹುದು ಎಂಬ ಫಲಿತಾಂಶ ಬಂದಿದೆ. ಶೇ 58ರಷ್ಟು ಮಂದಿ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ. ಆದರೆ ಯುವಜನತೆಯಿಂದ ನೂತನ ದೊರೆಗೆ ಬೆಂಬಲ ವ್ಯಕ್ತವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT