ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲ್ದೀವ್ಸ್: ಮುಯಿಜು ವಿರುದ್ಧ ವಾಗ್ದಂಡನೆಗೆ ಸಿದ್ಧತೆ

Published 29 ಜನವರಿ 2024, 14:21 IST
Last Updated 29 ಜನವರಿ 2024, 14:21 IST
ಅಕ್ಷರ ಗಾತ್ರ

ಮಾಲೆ: ಮಾಲ್ದೀವ್ಸ್‌ನ ಪ್ರಮುಖ ವಿರೋಧ ಪಕ್ಷ ಮಾಲ್ದೀವಿಯನ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ), ಅಧ್ಯಕ್ಷ ಮೊಹಮ್ಮದ್‌ ಮುಯಿಜು ವಿರುದ್ಧ ವಾಗ್ದಂಡನೆ ನಿಲುವಳಿ ಮಂಡಿಸಲು ಸಿದ್ಧತೆ ನಡೆಸಿದೆ.

ಎಂದು ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.

ಮುಯಿಜು ಸಂಪುಟದ ನಾಲ್ವರು ಸದಸ್ಯರಿಗೆ ಅನುಮೋದನೆ ನೀಡುವ ವಿಚಾರವಾಗಿ ಮಾಲ್ದೀವ್ಸ್‌ ಸಂಸತ್ತಿನಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ಮಧ್ಯೆ ಹೊಡೆದಾಟ ನಡೆದ ಮರುದಿನ ಈ ಬೆಳವಣಿಗೆ ಉಂಟಾಗಿದೆ.

‘ಅಧ್ಯಕ್ಷರನ್ನು ವಾಗ್ದಂಡನೆಗೆ ಗುರಿಪಡಿಸಲು ಎಂಡಿಪಿಯು ದಿ ಡೆಮಾಕ್ರಟ್ಸ್ ಪಕ್ಷದ ಸಹಕಾರದೊಂದಿಗೆ ಅಗತ್ಯ ಪ್ರಮಾಣದಲ್ಲಿ ಸದಸ್ಯರ ಸಹಿ ಸಂಗ್ರಹಿಸಿದೆ. ನಿಲುವಳಿಯನ್ನು ಇನ್ನಷ್ಟೇ ಮಂಡಿಸಬೇಕಿದೆ’ ಎಂದು ಸಂಸದರೊಬ್ಬರ ಹೇಳಿಕೆ ಉಲ್ಲೇಖಿಸಿ ಸನ್‌.ಕಾಮ್‌ ವರದಿ ಮಾಡಿದೆ.

‘ವಿರೋಧ ಪಕ್ಷಗಳ ಸಂಸದೀಯ ಗುಂಪು, ಸೋಮವಾರ ಸಭೆ ನಡೆಸಿ ಅಧ್ಯಕ್ಷರ ವಿರುದ್ಧ ವಾಗ್ದಂಡನೆ ನಿಲುವಳಿ ಮಂಡಿಸಲು ಒಮ್ಮತದ ತೀರ್ಮಾನ ತೆಗೆದುಕೊಂಡಿದೆ’ ಎಂದು ದಿ ಎಡಿಷನ್.ಎಂವಿ ತನ್ನ ವರದಿಯಲ್ಲಿ ಹೇಳಿದೆ.

87 ಸಂಸದರನ್ನು ಒಳಗೊಂಡಿರುವ ಮಾಲ್ದೀವ್ಸ್‌ ಸಂಸತ್ತಿನಲ್ಲಿ ಎಂಡಿಪಿ ಮತ್ತು ಡೆಮಾಕ್ರಟ್ಸ್ ಜತೆಯಾಗಿ 56 ಸದಸ್ಯರನ್ನು ಹೊಂದಿವೆ. ಎಂಡಿಪಿಯ 43 ಹಾಗೂ ಡೆಮಾಕ್ರಟ್ಸ್‌ ಪಕ್ಷದ 13 ಸದಸ್ಯರು ಇದ್ದಾರೆ.

‘56 ಸದಸ್ಯರ ಮತಗಳ ಬಲದಿಂದ ಅಧ್ಯಕ್ಷರನ್ನು ವಾಗ್ದಂಡನೆಗೆ ಗುರಿಪಡಿಸುವ ಅವಕಾಶವನ್ನು ಸಂವಿಧಾನ ನೀಡುತ್ತದೆ’ ಎಂದು ಸನ್‌.ಡಾಮ್‌ ವರದಿ ಮಾಡಿದೆ. 

ಚೀನಾ ಪರ ಧೋರಣೆ ಹೊಂದಿರುವ ಮುಯಿಜು, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಇಬ್ರಾಹಿಂ ಮೊಹಮ್ಮದ್  ಅವರನ್ನು ಮಣಿಸಿದ್ದರು. ಇಬ್ರಾಹಿಂ ಅವರ ಅವಧಿಯಲ್ಲಿ ಭಾರತ– ಮಾಲ್ದೀವ್ಸ್‌ ನಡುವೆ ಉತ್ತಮ ಬಾಂಧವ್ಯ ಇತ್ತು.

ಮೂವರು ಸಚಿವರಿಗೆ ಸಿಗದ ಅನುಮೋದನೆ

ಮಾಲ್ದೀವ್ಸ್‌ ಸಂಸತ್ತು ಮುಯಿಜು ಸಂಪುಟದ ಮೂವರಿಗೆ ಅನುಮೋದನೆ ನಿರಾಕರಿಸಿದೆ. 22 ಸಚಿವರಲ್ಲಿ ನಾಲ್ವರು ಸಚಿವರ ಅನುಮೋದನೆಯನ್ನು ವಿರೋಧ ಪಕ್ಷ ಎಂಡಿಪಿ ತಡೆಹಿಡಿದಿತ್ತು. ಆದ್ದರಿಂದ ಸಂಸತ್ತಿನ ಅನುಮೋದನೆ ಪಡೆಯಲು ಸೋಮವಾರ ಮತದಾನ ನಡೆಯಿತು.  ವಸತಿ ಮತ್ತು ನಗರಾಭಿವೃದ್ದಿ ಸಚಿವ ಅಲಿ ಹೈದರ್‌ ಅಹ್ಮದ್ ಇಸ್ಲಾಮಿಕ್‌ ಸಚಿವ ಮೊಹಮ್ಮದ್‌ ಶಹೀಂ ಅಲಿ ಸಯೀದ್ ಮತ್ತು ಅಟಾರ್ನಿ ಜನರಲ್ ಅಹ್ಮದ್‌ ಉಶಾಮ್ ಅವರಿಗೆ ಅನುಮೋದನೆ ನಿರಾಕರಿಸಲಾಗಿದೆ. ಆರ್ಥಿಕ ಸಚಿವ ಮೊಹಮ್ಮದ್ ಸಯೀದ್‌ ಮತ್ತು ಇತರ 18 ಸಚಿವರಿಗೆ ಅನುಮೋದನೆ ದೊರೆಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸೋಮವಾರ ನಡೆದ ಮತದಾನದಲ್ಲಿ ಹೈದರ್‌ ಅವರ ಅನುಮೋದನೆಯನ್ನು 46–24 ರಿಂದ ತಿರಸ್ಕರಿಸಲಾಯಿತು. ಉಶಾಮ್‌ ಮತ್ತು ಶಹೀಂ ಅವರ ಅನುಮೋದನೆ ಕ್ರಮವಾಗಿ 44–24 ಹಾಗೂ 31–30 ರಿಂದ ತಿರಸ್ಕೃತಗೊಂಡಿದೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT