ಬೀಜಿಂಗ್: ಚೀನಾದ ಹೆಬೈ ಪ್ರಾಂತ್ಯದಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದ್ದು, ಪ್ರವಾಹದಿಂದಾಗಿ 29 ಮಂದಿ ಮೃತಪಟ್ಟು, 16 ಮಂದಿ ನಾಪತ್ತೆಯಾಗಿದ್ದಾರೆ. ಜತೆಗೆ, ಪ್ರವಾಹ ಪೀಡಿತ ಪ್ರದೇಶದಲ್ಲಿ ಭಾರಿ ನಷ್ಟ ಉಂಟಾಗಿದೆ ಎಂದು ‘ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ.
ನೈಸರ್ಗಿಕ ವಿಕೋಪದಿಂದಾಗಿ 95.811 ಬಿಲಿಯನ್ ಯುವಾನ್ ನಷ್ಟವಾಗಿದೆ ಹೆಬೈ ಪ್ರಾಂತೀಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಮಳೆ ಸಂಬಂಧಿತ ಅವಘಡಗಳಲ್ಲಿ ಸಾವಿಗೀಡಾದವರು ಮತ್ತು ಕರ್ತವ್ಯ ನಿರ್ವಹಣೆ ವೇಳೆ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
ದೀರ್ಘಕಾಲದವರೆಗೆ ಬೀಸಿದ ಬಿರುಗಾಳಿ ಮತ್ತು ಭಾರಿ ಮಳೆ ಸುರಿದ ಪರಿಣಾಮ ತೀವ್ರ ಅನಾಹುತದ ಪರಿಸ್ಥಿತಿಗಳಿಗೆ ಕಾರಣವಾಯಿತು ಎಂದು ಹೆಬೈ ಪ್ರಾಂತ್ಯದ ಕಾರ್ಯನಿರ್ವಾಹಕ ಉಪ ಗವರ್ನರ್ ಜಾಂಗ್ ಚೆಂಗ್‌ಜಾಂಗ್ ತಿಳಿಸಿದ್ದಾರೆ.
‘ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಇತ್ತೀಚೆಗೆ 744.8 ಮಿಲಿಮೀಟರ್‌ನಷ್ಟು (29.3 ಇಂಚು) ಮಳೆಯಾಗಿದ್ದು, ಇದು 140 ವರ್ಷದಲ್ಲೇ ಅಧಿಕವಾಗಿದೆ’ ಎಂದು ಹವಾಮಾನ ಇಲಾಖೆ ತಿಳಿಸಿತ್ತು.
‘ಡೊಕ್ಸುರಿ ಚಂಡಮಾರುತವು ದಕ್ಷಿಣ ಚೀನಾ ಪ್ರಾಂತ್ಯದಿಂದ ಉತ್ತರ ಚೀನಾದ ಕಡೆಗೆ ಚಲಿಸಿದ ಪರಿಣಾಮ ಬೀಜಿಂಗ್ ಹಾಗೂ ಹೆಬೈ ಸುತ್ತಮುತ್ತ ದಾಖಲೆ ಪ್ರಮಾಣದ ಮಳೆಯಾಗಿದೆ. ಪ್ರವಾಹದಿಂದ ವಿದ್ಯುತ್ ಅಭಾವ ಸೃಷ್ಟಿಯಾಗಿದ್ದು, ಕುಡಿಯುವ ನೀರನ್ನು ಪೂರೈಸುವ ಪೈಪ್‌ಗಳಿಗೂ ಹಾನಿಯಾಗಿದೆ’ ಎಂದು ಹವಾಮಾನ ಇಲಾಖೆ ಹೇಳಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.