ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Morocco Earthquake | ಒಮ್ಮೆಲೆ ಹಲವು ನದಿಗಳ ಕಟ್ಟೆಯೊಡೆದ ಭಾಸ: ಜನರ ಆಘಾತ

Published 9 ಸೆಪ್ಟೆಂಬರ್ 2023, 9:48 IST
Last Updated 9 ಸೆಪ್ಟೆಂಬರ್ 2023, 9:48 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಪ್ರಬಲ ಭೂಂಕಪದಿಂದಾಗಿ ಮೊರಾಕೊ ಅಕ್ಷರಶಃ ನಲುಗಿದೆ. ಈವರೆಗೂ 600ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಹಲವು ಕಟ್ಟಡಗಳು ಧರೆಗುರುಳಿವೆ. ಮನೆ, ತಮ್ಮವರನ್ನು ಕಳೆದುಕೊಂಡ ಜನರ ಆಕ್ರಂದನ ಮುಗಿಲು ಮುಟ್ಟಿದೆ. ಕಟ್ಟಡ ಪಕ್ಕದಲ್ಲಿ ರೈಲು ಹಾದಂತೆ, ಹಲವು ನದಿಗಳ ಕಟ್ಟೆಗಳು ಒಮ್ಮೆಲೆ ಒಡೆದಂತೆ ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವವಾಗಿದ್ದು, ಪ್ರಬಲ ಭೂಕಂಪದಿಂದ ಜನರು ಭಯಭೀತರಾಗಿದ್ದಾರೆ.

ದೇಶದ ನೈರುತ್ಯ ದಿಕ್ಕಿನಲ್ಲಿ 72 ಕಿ.ಮೀ. ದೂರದಲ್ಲಿರುವ ಪ್ರಮುಖ ಪ್ರವಾಸಿ ತಾಣ ಮಾರ್ರಾಕೇಶ್‌ನಲ್ಲಿ ರಾತ್ರಿ 11.11ಕ್ಕೆ ಸಂಭವಿಸಿದ ಭೂಕಂಪನ, ರಿಕ್ಟರ್‌ ಮಾಪನದಲ್ಲಿ 6.8 ತೀವ್ರತೆ ಇತ್ತು. ಇದರ ತೀವ್ರತೆಯನ್ನು ತೀರ ಪ್ರದೇಶಗಳಾದ ರಬಾಟ್‌, ಕಾಸಾಬ್ಲಾಂಕಾ ಹಾಗೂ ಎಸ್ಸೂರಿಯಾಗಳೂ ಅನುಭವಿಸಿವೆ.

‘ಭೂಕಂಪಕ್ಕೂ ಮುನ್ನ ದೊಡ್ಡದಾದ ಶಬ್ದ ಕಿವಿಗಪ್ಪಳಿಸಿತು. ಬಹುಶಃ ಇದು ಭೂಕಂಪವೇ ಇರಬೇಕು’ ಎಂದು ಭಾವಿಸಿದೆ ಎಂದು ಅಬ್ದೆಲ್ಲಾಕ್‌ ಎಲ್‌ ಇಮ್ರಾನಿ ತಮ್ಮ ಅನುಭವ ಹಂಚಿಕೊಂಡರು.

‘ಕಟ್ಟಡಗಳು ಚಲಿಸುತ್ತಿರುವಂತೆ ಅನುಭವವಾಯಿತು. ಹೊರಗೆ ಹೋಗಿ ನೋಡಿದಾಗ ಸಾಕಷ್ಟು ಜನ ಜಮಾಯಿಸಿದ್ದರು. ಎಲ್ಲರೂ ಗಾಬರಿ ಹಾಗೂ ಭಯದಿಂದಿದ್ದರು. ಮಕ್ಕಳು ಅಳುತ್ತಿದ್ದವು. ಪಾಲಕರು ಸುರಕ್ಷಿತ ತಾಣಕ್ಕಾಗಿ ಅಲೆದಾಡುತ್ತಿದ್ದರು. ಹೀಗಾದ ಹತ್ತು ನಿಮಿಷಗಳಲ್ಲೇ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತು. ಫೋನ್‌ ನೆಟ್ವರ್ಕ್‌ ಕೂಡಾ ಸ್ತಬ್ಧವಾಯಿತಾದರೂ, ಮರಳಿ ಬಂತು. ಎಲ್ಲರೂ ಹೊರಗೇ ಇರಲು ನಿರ್ಧರಿಸಿದೆವು’ ಎಂದು ವಿವರಿಸಿದರು.

ಒಳಾಡಳಿತ ಮಂತ್ರಾಲಯದ ಮಾಹಿತಿಯಂತೆ ಈವರೆಗೂ 632 ಜನ ಮೃತಪಟ್ಟಿದ್ದಾರೆ. 329 ಜನ ಗಾಯಗೊಂಡಿದ್ದಾರೆ. ಇವರಲ್ಲಿ 51 ಜನರ ಸ್ಥಿತಿ ಗಂಭೀರವಾಗಿದೆ ಎಂದೆನ್ನಲಾಗಿದೆ.

ಕೆಲವೆಡೆ ಮೂರು ಭಾರಿ ಭೂಮಿ ಕಂಪನಿಸಿದ ಅನುಭವವಾಗಿದೆ ಎಂದು ಎಂಜಿನಿಯರ್ ಫೈಝಲ್ ಬದ್ದೂರ್‌ ಹೇಳಿದರು. ಕಂಪನ ಮುಗಿದರೂ ಜನರು ಹೊರಗೇ ಮಲಗಿದ್ದಾರೆ. ಕಟ್ಟಡದೊಳಗೆ ಹೋಗಲು ಎಲ್ಲರೂ ಭಯಪಡುತ್ತಿದ್ದಾರೆ. ಕಂಪನದ ತೀವ್ರತೆ ಮನೆ ಪಕ್ಕದಲ್ಲೇ ಹೋದಂತಾ ಅನುಭವ ಅದಾಗಿತ್ತು’ ಎಂದರು.

ಮೊರಾಕೊದಲ್ಲಿ ಸಂಭವಿಸಿದ ಭೂಕಂಪನದ ಅನುಭವ ಪಕ್ಕದ ಅಲ್ಜೇರಿಯಾ ಜನರಿಗೂ ಆಗಿದೆ. ಆದರೆ ಅಲ್ಲಿ ಯಾವುದೇ ಜೀವ ಹಾಗೂ ಆಸ್ತಿಪಾಸ್ತಿ ಹಾನಿಯಾದ ಕುರಿತು ವರದಿಯಾಗಿಲ್ಲ ಎಂದು ನಾಗರಿಕ ಸೇನಾ ವಿಭಾಗ ಸ್ಪಷ್ಟಪಡಿಸಿದೆ. 

2004ರಲ್ಲಿ ಸಂಭವಿಸಿದ ಭೂಕಂಪದಲ್ಲಿ 628 ಜನ ಮೃತಪಟ್ಟಿದ್ದರು. 926 ಜನರ ಗಾಯಗೊಂಡಿದ್ದರು. 1960ರಲ್ಲಿ 6.7 ತೀವ್ರತೆಯ ಭೂಕಂಪನಕ್ಕೆ 12 ಸಾವಿರಕ್ಕೂ ಅಧಿಕ ಜನ ಮೃತಪಟ್ಟಿದ್ದರು. 1980ರಲ್ಲಿ ಅಲ್ಜೇರಿಯಾದಲ್ಲಿ 7.3 ಕಂಪನಾಂಕ ತೀವ್ರತೆಯ ಭೂಕಂಪ ಸಂಭವಿಸಿದ್ದು ಈ ಭಾಗದ ಇತಿಹಾಸದಲ್ಲೇ ಅತ್ಯಂತ ಪ್ರಬಲ ಎಂದೆನ್ನಲಾಗಿದೆ. ಆಗ 2,500 ಜನ ಮೃತಪಟ್ಟು 3 ಲಕ್ಷ ಜನ ಮನೆ ಕಳೆದುಕೊಂಡಿದ್ದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT