ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಅಕ್ರಮ ಸಾಬೀತು: ಸೂಕಿಗೆ ಜೈಲು ಶಿಕ್ಷೆ ಹೆಚ್ಚಳ

Last Updated 2 ಸೆಪ್ಟೆಂಬರ್ 2022, 13:52 IST
ಅಕ್ಷರ ಗಾತ್ರ

ಬ್ಯಾಂಕಾಕ್‌:ಮ್ಯಾನ್ಮಾರ್‌ನ ಉಚ್ಚಾಟಿತ ನಾಯಕಿ ಆಂಗ್ ಸಾನ್‌ ಸೂಕಿ ಅವರು ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿರುವುದು ಸಾಬೀತಾಗಿದ್ದು, ಅಲ್ಲಿನ ಸ್ಥಳೀಯ ನ್ಯಾಯಾಲಯವು ಶುಕ್ರವಾರ ಅವರಿಗೆ ಮೂರು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದೆ.

ಅಕ್ರಮವಾಗಿ ವಾಕಿ-ಟಾಕಿಗಳನ್ನು ಹೊಂದಿದ್ದಕ್ಕಾಗಿ, ಕೋವಿಡ್‌ ಮಾರ್ಗಸೂಚಿಗಳ ಉಲ್ಲಂಘನೆ, ದೇಶದ್ರೋಹ ಮತ್ತು ಭ್ರಷ್ಟಾಚಾರದ ಆರೋಪದಲ್ಲಿ ಸೂಕಿ ಅವರಿಗೆ ಈಗಾಗಲೇ ಅಲ್ಲಿನ ಮಿಲಿಟರಿ ಸರ್ಕಾರವು 17 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.ಇದೀಗ ಅವರ ಜೈಲುಶಿಕ್ಷೆಯ ಅವಧಿಯು 20 ವರ್ಷಕ್ಕೆ ಹೆಚ್ಚಳವಾಗಿದೆ.

ಸೂಕಿ ಅವರ ವಿರುದ್ಧ ಕಳೆದ ನವೆಂಬರ್‌ನಲ್ಲಿ ಚುನಾವಣಾ ಆಯೋಗವು ಚುನಾವಣಾ ವಂಚನೆಯ ದೂರನ್ನು ಸಲ್ಲಿಸಿತ್ತು.2020ರ ಸಾಮಾನ್ಯ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಸೂಕಿ ಮತ್ತು ಅವರ ಸಂಪುಟದ ಸಹೋದ್ಯೋಗಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ವಂಚನೆ ಮತ್ತು ಕಾನೂನುಬಾಹಿರ ಕ್ರಮಗಳಲ್ಲಿ ತೊಡಗಿಕೊಂಡಿದ್ದರು ಎಂದು ಆಯೋಗವು ಆರೋಪಿಸಿತ್ತು.

ಶುಕ್ರವಾರ ಅಲ್ಲಿನ ಸ್ಥಳೀಯ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ಸೂಕಿ ವಿರುದ್ಧದ ಆರೋಪವು ಸಾಬೀತಾಗಿದ್ದು, ನ್ಯಾಯಾಲಯವು ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಸ್ಥಳೀಯ ನ್ಯಾಯಾಲಯವು ನೀಡಿರುವ ತೀರ್ಪು ಸೂಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷದ ಮೇಲೆ ಮಹತ್ವದ ರಾಜಕೀಯ ಪರಿಣಾಮಗಳನ್ನು ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತ ವಿರೋಧಿಯಾಗಿರುವ ಸೂಕಿ ಅವರ ಪಕ್ಷವು 2023ಕ್ಕೆ ಹೊಸ ಚುನಾವಣೆಗಳನ್ನು ನಡೆಸುವಂತೆ ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT