ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೋಲೆಂಡ್‌ಗೆ ಬಂದಿಳಿದ ಮೋದಿ: 45 ವರ್ಷಗಳ ಬಳಿಕ ಭಾರತ ಪ್ರಧಾನಿಯ ಭೇಟಿ

Published 21 ಆಗಸ್ಟ್ 2024, 15:59 IST
Last Updated 21 ಆಗಸ್ಟ್ 2024, 20:53 IST
ಅಕ್ಷರ ಗಾತ್ರ

ವಾಸಾ(ಪೋಲೆಂಡ್)/ನವದೆಹಲಿ: ಇದೇ ಮೊದಲ ಬಾರಿಗೆ ಪೋಲೆಂಡ್‌ ಮತ್ತು ಉಕ್ರೇನ್‌ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ. 

ಪೋಲೆಂಡ್‌ ರಾಜಧಾನಿ ವಾಸಾಕ್ಕೆ ಬುಧವಾರ ಬಂದಿಳಿದಿರುವ ಮೋದಿ ಅವರು ಇಲ್ಲಿ ಎರಡು ದಿನಗಳು ವಾಸ್ತವ್ಯ ಹೂಡಲಿದ್ದಾರೆ. ಇದು 45 ವರ್ಷಗಳ ನಂತರ ಈ ದೇಶಕ್ಕೆ ಭಾರತದ ಪ್ರಧಾನಿಯೊಬ್ಬರ ಮೊದಲ ಅಧಿಕೃತ ಭೇಟಿಯಾಗಿದೆ. 

ಪೋಲೆಂಡ್‌ ಪ್ರವಾಸದ ನಂತರ ಮೋದಿ ಅವರು ಇದೇ 23ರಂದು ಉಕ್ರೇನ್‌ ರಾಜಧಾನಿ ಕೀವ್‌ಗೆ ಭೇಟಿ ಕೊಡಲಿದ್ದಾರೆ. ಅಂದು ಸುಮಾರು ಏಳು ತಾಸು ಅವರು ಕೀವ್‌ನಲ್ಲಿ ಇರಲಿದ್ದಾರೆ. ಪೋಲೆಂಡ್‌ನಿಂದ ಕೀವ್‌ಗೆ ‘ರೈಲ್ ಫೋರ್ಸ್ ಒನ್’ ರೈಲಿನಲ್ಲಿ ಮೋದಿ ಅವರು ಹೋಗಿ ಬರಲಿದ್ದಾರೆ. ಎರಡೂ ಕಡೆಯ ಪ್ರಯಾಣ ಅವಧಿ ಒಟ್ಟು 20 ತಾಸು ಆಗಲಿದೆ. 1991ರಲ್ಲಿ ಉಕ್ರೇನ್‌ ಸ್ವತಂತ್ರವಾದ ನಂತರ ಭಾರತದ ಪ್ರಧಾನಿಯೊ
ಬ್ಬರು ಭೇಟಿ ನೀಡುತ್ತಿರುವುದು ಇದೇ ಮೊದಲು. 

ನವದೆಹಲಿಯಿಂದ ಪ್ರಯಾಣ ಹೊರಡುವ ಮೊದಲು ಮೋದಿ ಅವರು ಉಕ್ರೇನ್‌ ಸಂಘರ್ಷ ಉಲ್ಲೇಖಿಸಿ, ‘ಸ್ನೇಹಿತ ಮತ್ತು ಪಾಲುದಾರನಾಗಿ ಭಾರತವು, ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯು ಮೊದಲಿನ ಸ್ಥಿತಿಗೆ ಆದಷ್ಟು ಶೀಘ್ರ ಮರಳಲಿ ಎಂದು ಆಶಿಸುತ್ತದೆ’ ಎಂದು ಹೇಳಿದ್ದಾರೆ.

‘ದ್ವಿಪಕ್ಷೀಯ ಸಹಕಾರ ಬಲಪಡಿಸಲು ಮತ್ತು ಸದ್ಯದ ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರದ ಬಗ್ಗೆ ದೃಷ್ಟಿಕೋನಗಳನ್ನು ಹಂಚಿಕೊಳ್ಳಲು ಅಧ್ಯಕ್ಷ ಝೆಲೆನ್‌ಸ್ಕಿ ಅವರೊಂದಿಗೆ ಮಾತುಕತೆ ನಡೆಸಲು ಅವಕಾಶವನ್ನು ಎದುರು ನೋಡುತ್ತಿದ್ದೇನೆ’ ಎಂದು ಅವರು ಹೇಳಿದರು.

ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಭಾರತ ಈವರೆಗೂ ಖಂಡಿಸಿಲ್ಲ. ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಸಂಘರ್ಷವನ್ನು ಪರಿಹರಿಸಲು ಉಭಯ ರಾಷ್ಟ್ರಗಳನ್ನು ಭಾರತ ಒತ್ತಾಯಿಸುತ್ತಲೇ ಬಂದಿದೆ.

ಅನಿವಾಸಿ ಭಾರತೀಯರ ಸಂತಸ: ಪೋಲೆಂಡ್‌ ರಾಜಧಾನಿಯಲ್ಲಿರುವ ಭಾರತೀಯರು ಮೋದಿ ಅವರ ಭೇಟಿಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಪೋಲೆಂಡ್‌ ಅಧ್ಯಕ್ಷ ಆಂಡ್ರೆ ಸೆಬಾಸ್ಟಿಯನ್ ಡೂಡಾ ಹಾಗೂ ಪ್ರಧಾನಿ ಡೊನಾಲ್ಡ್‌ ಟಸ್ಕ್ ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT