ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲಿಂಗ ವಿವಾಹವನ್ನು ಅಧಿಕೃತವಾಗಿ ನೋಂದಾಯಿಸಿದ ದಕ್ಷಿಣ ಏಷ್ಯಾದ ಮೊದಲ ದೇಶ ನೇಪಾಳ

2007ರಲ್ಲಿ ನೇಪಾಳದ ಸುಪ್ರೀಂ ಕೋರ್ಟ್ ಸಲಿಂಗ ವಿವಾಹಕ್ಕೆ ಅನುಮತಿ ನೀಡಿತ್ತು.
Published 30 ನವೆಂಬರ್ 2023, 6:37 IST
Last Updated 30 ನವೆಂಬರ್ 2023, 6:37 IST
ಅಕ್ಷರ ಗಾತ್ರ

ಕಠ್ಮಂಡು: ನೇಪಾಳದ ಸುಪ್ರೀಂ ಕೋರ್ಟ್ ಸಲಿಂಗ ವಿವಾಹವನ್ನು ಕಾನೂನು ಬದ್ಧಗೊಳಿಸಿದ 5 ತಿಂಗಳ ಬಳಿಕ ದೇಶದಲ್ಲಿ ಸಲಿಂಗ ವಿವಾಹದ ಮೊದಲ ನೋಂದಣಿಯಾಗಿದೆ. ಈ ಮೂಲಕ ನೇಪಾಳ ಸಲಿಂಗ ವಿವಾಹವನ್ನು ಅಧಿಕೃತವಾಗಿ ನೋಂದಾಯಿಸಿದ ಮೊದಲ ದಕ್ಷಿಣ ಏಷ್ಯಾದ ದೇಶವಾಗಿದೆ.

'ಲಿಂಗ ಪರಿವರ್ತಿತ ಮಹಿಳೆ ಮಾಯಾ ಗುರುಂಗ್ (35) ಹಾಗೂ ಸುರೇಂದ್ರ ಪಾಂಡೆ (27) ಕಾನೂನುಬದ್ಧವಾಗಿ ವಿವಾಹವಾದರು. ಅವರ ವಿವಾಹವನ್ನು ಪಶ್ಚಿಮ ನೇಪಾಳದ ಲಾಮ್‌ಜಂಗ್ ಜಿಲ್ಲೆಯ ಡೋರ್ಡಿ ಗ್ರಾಮೀಣ ಪುರಸಭೆಯಲ್ಲಿ ನೋಂದಾಯಿಸಲಾಗಿದೆ' ಎಂದು ಬ್ಲೂ ಡೈಮಂಡ್ ಸೊಸೈಟಿಯ ಅಧ್ಯಕ್ಷ ಸಂಜಿಬ್ ಗುರುಂಗ್ (ಪಿಂಕಿ) ತಿಳಿಸಿದ್ದಾರೆ. ('ಬ್ಲೂ ಡೈಮಂಡ್' ನೇಪಾಳದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಕಲ್ಯಾಣಕ್ಕಾಗಿ ಕೆಲಸ ಮಾಡುವ ಸಂಸ್ಥೆ)

2007ರಲ್ಲಿ ನೇಪಾಳ ಸುಪ್ರೀಂ ಕೋರ್ಟ್ ಸಲಿಂಗ ವಿವಾಹಕ್ಕೆ ಅನುಮತಿ ನೀಡಿತ್ತು. 2015ರಲ್ಲಿ ಅಂಗೀಕರಿಸಲ್ಪಟ್ಟ ಕಾಯಿದೆ ಲೈಂಗಿಕ ದೃಷ್ಟಿಕೋನದ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸುತ್ತದೆ.

2023ರ ಜೂನ್ 27ರಂದು ಗುರುಂಗ್ ಸೇರಿದಂತೆ ಅನೇಕರು ಸಲ್ಲಿಸಿದ ರಿಟ್ ಅರ್ಜಿಯಲ್ಲಿ ನೇಪಾಳದಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಲು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿತು. ಆದರೆ ಸಲಿಂಗ ವಿವಾಹವನ್ನು ತಾತ್ಕಾಲಿಕವಾಗಿ ನೋಂದಾಯಿಸುವ ಐತಿಹಾಸಿಕ ಆದೇಶದ ಹೊರತಾಗಿಯೂ, 4 ತಿಂಗಳ ಹಿಂದೆ ಕಠ್ಮಂಡು ಜಿಲ್ಲಾ ನ್ಯಾಯಾಲಯ ಅಗತ್ಯ ಕಾನೂನುಗಳ ಕೊರತೆಯನ್ನು ಉಲ್ಲೇಖಿಸಿ ಈ ಕ್ರಮವನ್ನು ತಿರಸ್ಕರಿಸಿತು.

ಆ ವೇಳೆ ಸುರೇಂದ್ರ ಪಾಂಡೆ ಮತ್ತು ಮಾಯಾ ಅವರ ವಿವಾಹದ ಅರ್ಜಿ ವಜಾ ಆಗಿತ್ತು. ಬಳಿಕ ಬುಧವಾರ (ಡಿ.29) ಔಪಚಾರಿಕವಾಗಿ ವಿವಾಹವನ್ನು ಇದೇ ಮೊದಲ ಬಾರಿಗೆ ನೋಂದಾಯಿಸಲಾಗಿದೆ.

'ಸಲಿಂಗ ವಿವಾಹದ ನೋಂದಣಿ ಮಾಡಿಸಿಕೊಂಡಿರುವ ವಿಷಯವನ್ನು ಕೇಳಿ ನನಗೆ ತುಂಬಾ ಸಂತೋಷವಾಯಿತು. ಇದು ನೇಪಾಳದ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ದೊಡ್ಡ ಸಾಧನೆ. ನೇಪಾಳ ಮಾತ್ರವಲ್ಲದೆ ಇಡೀ ದಕ್ಷಿಣ ಏಷ್ಯಾದಲ್ಲಿಯೇ ಮೊದಲ ಪ್ರಕರಣವಾಗಿದ್ದು, ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ' ಎಂದು ಲೈಂಗಿಕ ಅಲ್ಪಸಂಖ್ಯಾತರಾದ ಪಿಂಕಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT