ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ಸಲಿಂಗ ವಿವಾಹ– ಮಾನ್ಯತೆ ಬದಲು ಸುಪ್ರೀಂಕೋರ್ಟ್‌ನ ಮಮತೆಯ ಹೊನಲು
ಆಳ–ಅಗಲ: ಸಲಿಂಗ ವಿವಾಹ– ಮಾನ್ಯತೆ ಬದಲು ಸುಪ್ರೀಂಕೋರ್ಟ್‌ನ ಮಮತೆಯ ಹೊನಲು
‘ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಲು ನಮ್ಮ ಕಾನೂನಿನಲ್ಲಿ ಅವಕಾಶವಿಲ್ಲ’ ಎಂದು ಸುಪ್ರೀಂ ಕೋರ್ಟ್‌ನ ಐವರು ಸದಸ್ಯರ ಸಂವಿಧಾನ ಪೀಠವು ಮಂಗಳವಾರವಷ್ಟೇ 3:2ರ ಬಹುಮತದ ತೀರ್ಪು ನೀಡಿದೆ
Published 20 ಅಕ್ಟೋಬರ್ 2023, 0:31 IST
Last Updated 20 ಅಕ್ಟೋಬರ್ 2023, 0:31 IST
ಅಕ್ಷರ ಗಾತ್ರ

‘ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಲು ನಮ್ಮ ಕಾನೂನಿನಲ್ಲಿ ಅವಕಾಶವಿಲ್ಲ’ ಎಂದು ಸುಪ್ರೀಂ ಕೋರ್ಟ್‌ನ ಐವರು ಸದಸ್ಯರ ಸಂವಿಧಾನ ಪೀಠವು ಮಂಗಳವಾರವಷ್ಟೇ 3:2ರ ಬಹುಮತದ ತೀರ್ಪು ನೀಡಿದೆ. ಆದರೆ, ಸಲಿಂಗ ಜೋಡಿಗಳು ಒಟ್ಟಿಗೇ ಬದುಕುವುದನ್ನು ಯಾವುದೇ ಕಾನೂನು ನಿರ್ಬಂಧಿಸುವುದಿಲ್ಲ ಎಂದು ಈ ಪೀಠದಲ್ಲಿದ್ದ ಐವರು ನ್ಯಾಯಮೂರ್ತಿಗಳೂ ಒಪ್ಪಿಕೊಂಡಿದ್ದಾರೆ. ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ಇಲ್ಲದೇ ಇರುವುದು ದೊಡ್ಡ ತೊಡಕು ಎಂದು ಐವರು ನ್ಯಾಯಮೂರ್ತಿಗಳೂ ಅಭಿಪ್ರಾಯಪಟ್ಟಿದ್ದಾರೆ. ಇವುಗಳ ಜತೆಯಲ್ಲಿ ದೇಶದ ಎಲ್ಲಾ ನಾಗರಿಕರಿಗೆ ದತ್ತವಾಗಿರುವ ಹಕ್ಕುಗಳು ಸಲಿಂಗ ಜೋಡಿಗಳಿಗೂ ಅನ್ವಯವಾಗುತ್ತವೆ, ಅವುಗಳಿಂದ ಅವರು ವಂಚಿತರಾಗಬಾರದು ಎಂಬ ಅಭಿಪ್ರಾಯವೂ ಈ ತೀರ್ಪುಗಳಲ್ಲಿ ಸ್ಪಷ್ಟವಾಗಿದೆ.

ಸಲಿಂಗ ವಿವಾಹ, ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳು, ವಿಶೇಷ ವಿವಾಹ ಕಾಯ್ದೆ ಸೇರಿದಂತೆ 20 ಅಂಶಗಳ ಕುರಿತಾದ 20 ಅರ್ಜಿಗಳು ಈ ಪೀಠದ ಮುಂದೆ ಇತ್ತು. ಈ ಸಂಬಂಧ 10 ತಿಂಗಳ ದೀರ್ಘ ವಿಚಾರಣೆಯನ್ನು ಪೀಠವು ನಡೆಸಿತ್ತು. ಈ ಎಲ್ಲಾ ಅರ್ಜಿಗಳಿಗೆ ಸಂಬಂಧಿಸಿದಂತೆ  ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರು 247 ಪುಟಗಳ ದೀರ್ಘ ತೀರ್ಪನ್ನು ನೀಡಿದ್ದಾರೆ. ನ್ಯಾಯಮೂರ್ತಿ ಎಸ್‌.ಕೆ.ಕೌಲ್ ಅವರು ಮುಖ್ಯನ್ಯಾಯಮೂರ್ತಿಯ ತೀರ್ಪನ್ನೇ ಒಪ್ಪಿಕೊಂಡು ಪ್ರತ್ಯೇಕ ತೀರ್ಪು ನೀಡಿದ್ದಾರೆ. ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಬೇಕು ಎಂದು ಈ ಇಬ್ಬರೂ ತಮ್ಮ ತೀರ್ಪಿನಲ್ಲಿ ಹೇಳಿದ್ದರು. ಆದರೆ ಇದಕ್ಕೆ ಅಸಮ್ಮತಿ ಸೂಚಿಸಿ ನ್ಯಾಯಮೂರ್ತಿ ರವೀಂದ್ರ ಭಟ್ ಮತ್ತು ಹಿಮಾ ಕೊಹ್ಲಿ ಅವರು ಪ್ರತ್ಯೇಕ ತೀರ್ಪು ನೀಡಿದ್ದರು. ಈ ಮೂರನೇ ತೀರ್ಪನ್ನು ಬೆಂಬಲಿಸಿ ನ್ಯಾಯಮೂರ್ತಿ ಪಿ.ಎಸ್‌.ನರಸಿಂಹ ಅವರು ನಾಲ್ಕನೇ ಪ್ರತ್ಯೇಕ ತೀರ್ಪು ನೀಡಿದ್ದರು.

ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಬೇಕು ಎಂದು ಇಬ್ಬರು ಹೇಳಿದರೆ, ಮೂವರು ಈಗಿನ ಸಂವಿಧಾನ ಚೌಕಟ್ಟಿನಲ್ಲಿ ಅದಕ್ಕೆ ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಬಹುಮತದ ತೀರ್ಪಿನ ಆಧಾರದಲ್ಲಿ, ‘ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಲಾಗುವುದಿಲ್ಲ’ ಎಂಬುದು ಕಾರ್ಯಗೊತಗೊಳಿಸಬೇಕಾದ ತೀರ್ಪಾಯಿತು.

ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ಇಲ್ಲದೇ ಇರುವ ಕಾರಣಕ್ಕೇ ಸಲಿಂಗ ಜೋಡಿಗಳು ತಾರತಮ್ಯಕ್ಕೆ ಗುರಿಯಾಗಿದ್ದಾರೆ. ಲಿಂಗದ ಅಧಾರದಲ್ಲೂ ತಾರತಮ್ಯ ಮಾಡಬಾರದು ಎಂದು ಸಂವಿಧಾನ ಹೇಳುತ್ತದೆ. ಆದರೆ ಸಲಿಂಗ ಜೋಡಿಗಳು ಮತ್ತು ಲಿಂಗ ಪರಿವರ್ತಿತರು ತಮ್ಮ ಲಿಂಗತ್ವ ಒಲವಿನ ಕಾರಣಕ್ಕೇ ತಾರತಮ್ಯವನ್ನು ಎದುರಿಸಬೇಕಾಗುತ್ತದೆ. ಜತೆಗೆ ಅರ್ಹ ಸೌಕರ್ಯಗಳಿಂದ ವಂಚಿತರಾಗಬೇಕಾಗುತ್ತದೆ. ಈ ವಿಚಾರದಲ್ಲಿ ಶಾಸಕಾಂಗವು ಜಡವಾಗಿದ್ದ ಕಾರಣಕ್ಕೇ ಈ ಸಮಸ್ಯೆ ದೊಡ್ಡದಾಗಿದೆ. ಈ ತಾರತಮ್ಯ ಮತ್ತು ವಂಚಿತರಾಗುವುದನ್ನು ತಪ್ಪಿಸುವ ಹೊಣೆಗಾರಿಕೆ ಸರ್ಕಾರದ್ದು ಎಂದು ಐವರು ನ್ಯಾಯಮೂರ್ತಿಗಳೂ ಹೇಳಿದ್ದಾರೆ.

‘ಸಲಿಂಗ ಸಂಬಂಧಕ್ಕೆ ಅಡ್ಡಿಯಿಲ್ಲ’

ಯಾವುದೇ ಮದುವೆಯನ್ನು ಮಾನ್ಯ ಮಾಡಬೇಕಾಗಿದ್ದು ಕಾನೂನು ರಚನೆಯ ಮೂಲಕ ಮಾತ್ರ. ಹಾಗೆಂದ ಮಾತ್ರಕ್ಕೆ ಸಲಿಂಗ ಸಂಬಂಧದಲ್ಲಿ ಇರುವವರು ಒಟ್ಟಿಗೆ ಇರಬಾರದು ಎಂದು ನಿಷೇಧ ಹೇರಬೇಕಾಗಿಲ್ಲ. ಲಿಂಗತ್ವ ಅಲ್ಪಸಂಖ್ಯಾತರು ತಮ್ಮಿಚ್ಛೆಯ ಸಂಬಂಧದಲ್ಲಿ ಇರಬಹುದು ಮತ್ತು ಅದರಂತೆ ಬದುಕನ್ನು ಸಂಭ್ರಮಿಸಬಹುದು ಎಂದು ನ್ಯಾಯಮೂರ್ತಿ ರವೀಂದ್ರ ಭಟ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ. ನ್ಯಾಯಮೂರ್ತಿ ಪಿ.ಬಿ.ಎಸ್‌. ನರಸಿಂಹ ಸಹ ಇದನ್ನು ತಮ್ಮ ಪ್ರತ್ಯೇಕ ತೀರ್ಪಿನಲ್ಲಿ ಬೆಂಬಲಿಸಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಈ ಹಿಂದೆ ಹಲವು ತೀರ್ಪುಗಳನ್ನು ನೀಡಿದೆ. ಸಂವಿಧಾನದ 12ನೇ ವಿಧಿಯು ನೀಡುವ ಖಾಸಗಿತನದ ಹಕ್ಕು, ಆಯ್ಕೆಯ ಸ್ವಾತಂತ್ರ್ಯದ ಆಧಾರದಲ್ಲಿ ಮಾನಸಿಕ, ಭಾವನಾತ್ಮಕ ಮತ್ತು ಲೈಂಗಿಕವಾಗಿ ಸಲಿಂಗಿಗಳು ಸಂಬಂಧದಲ್ಲಿ ಇರಲು ಅವಕಾಶವಿದೆ ಎಂದು ಆ ತೀರ್ಪುಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಇಲ್ಲೂ ಆ ತೀರ್ಪುಗಳು ಅನ್ವಯವಾಗುತ್ತವೆ. ಆದರೆ ಅವು, ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಿ ಎಂದು ಆಗ್ರಹಿಸುವುದಕ್ಕೆ ಇದು ಆಸ್ಪದ ಕೊಡುವುದಿಲ್ಲ ಎಂದು ಆ ತೀರ್ಪಿನಲ್ಲಿ ಹೇಳಲಾಗಿದೆ.

ಸಲಿಂಗ ಸಂಬಂಧ ಹೊಂದಬಯಸುವವರು ಒಟ್ಟಿಗೇ ಇರಲು ಅಡ್ಡಿಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸರ್ಕಾರದ್ದು. ಅಂತಹ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಸರ್ಕಾರ ನಿಷ್ಕ್ರಿಯವಾದರೆ ಅದು ಅನ್ಯಾಯಕ್ಕೆ ಕಾರಣವಾಗುತ್ತದೆ ಎಂದೂ ಆ ತೀರ್ಪಿನಲ್ಲಿ ವಿವರಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್‌ ಅವರೂ ತಮ್ಮ ತೀರ್ಪಿನಲ್ಲಿ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಅಭಿಪ್ರಾಯವನ್ನು ನ್ಯಾಯಮೂರ್ತಿ ಎಸ್‌.ಕೆ.ಕೌಲ್‌ ಸಹ ಬೆಂಬಲಿಸಿದ್ದಾರೆ.

‘ಉನ್ನತಮಟ್ಟದ ಸಮಿತಿ ರಚಿಸಬೇಕು’

ಲಿಂಗತ್ವ ಅಲ್ಪಸಂಖ್ಯಾತರು ಎದುರಿಸುವ ತಾರತಮ್ಯ ನಿವಾರಣೆಯನ್ನು ಕಾರ್ಯಗತಗೊಳಿಸಲು ಸರ್ಕಾರವು ಉನ್ನತಮಟ್ಟದ ಸಮಿತಿ ರಚಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್‌ ಅವರು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ. ನ್ಯಾಯಮೂರ್ತಿ ಕೌಲ್‌ ಇದನ್ನು ಬೆಂಬಲಿಸಿದ್ದಾರೆ. 

ಲಿಂಗತ್ವ ಅಲ್ಪಸಂಖ್ಯಾತರು ತಮ್ಮ ಲೈಂಗಿಕ ಅಸ್ಮಿತೆಯ ಕಾರಣಕ್ಕೇ ಸಮಾಜದಲ್ಲಿ ತಾರತಮ್ಯಕ್ಕೆ ಗುರಿಯಾಗುತ್ತಾರೆ. ಅವರು ಎದುರಿಸುವ ತಾರತಮ್ಯ ಮತ್ತು ಅವುಗಳನ್ನು ತಪ್ಪಿಸಲು ನೀತಿಮಟ್ಟದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರವು ವಿಸ್ತೃತ ಅಧ್ಯಯನ ನಡೆಸಬೇಕಾದ ಅಗತ್ಯವಿದೆ. ಇದನ್ನು ಕಾರ್ಯಗತಗೊಳಿಸಲು ಸರ್ಕಾರವು ಉನ್ನತಮಟ್ಟದ ಸಮಿತಿಯನ್ನು ರಚಿಸಬಹುದು. ಕೇಂದ್ರ ಸಂಪುಟ ಕಾರ್ಯದರ್ಶಿಯು ಈ ಸಮಿತಿಯ ಮುಖ್ಯಸ್ಥರಾಗಿರಬೇಕು ಎಂದು ನ್ಯಾಯಮೂರ್ತಿಗಳಾದ ರವೀಂದ್ರ ಭಟ್ ಮತ್ತು ಹಿಮಾ ಕೊಹ್ಲಿ ಅವರು ತಮ್ಮ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಇದನ್ನು ನ್ಯಾಯಮೂರ್ತಿ ನರಸಿಂಹ ಅವರೂ ಬೆಂಬಲಿಸಿದ್ದಾರೆ.

ಅವರು ಎಲ್ಲರಂತೆ ಸ್ವತಂತ್ರರು. ಅವರ ಆಯ್ಕೆಗಳನ್ನು ಹೇಳಿಕೊಳ್ಳುವ ಹಕ್ಕು ಅವರಿಗಿದೆ. ಹಕ್ಕುಗಳನ್ನು ಚಲಾಯಿಸುವ ಕಾರಣಕ್ಕಾಗಿ ಅವರ ಮೇಲೆ ಹಿಂಸೆ ನಡೆದರೆ ಅವರಿಗೆ ರಕ್ಷಣೆ ಕೊಡಬೇಕಾಗಿದ್ದು ಸರ್ಕಾರದ ಹೊಣೆ
ನ್ಯಾಯಮೂರ್ತಿ ಹಿಮಾಕೊಹ್ಲಿ, ನ್ಯಾಯಮೂರ್ತಿ ರವೀಂದ್ರ ಭಟ್

–––––––––––

‘ಸಂವೇದನೆ ಇಲ್ಲದಿರುವುದೇ ಸಮಸ್ಯೆ’

ಕ್ವಿಯರ್‌ ಸಮುದಾಯದ ಬಗ್ಗೆ ಜನರಲ್ಲಿ ಸೂಕ್ಷ್ಮ ಸಂವೇದನೆ ಇಲ್ಲದಿರುವುದೇ ಈ ಸಮುದಾಯದವರು ತಮ್ಮ ಅಸ್ಮಿತೆಯನ್ನು ಮುಕ್ತ ಧ್ವನಿಯಲ್ಲಿ ಹೇಳಿಕೊಳ್ಳಲು ಸಾಧ್ಯವಾಗದಂತೆ ಮಾಡಿದೆ. ಲಿಂಗತ್ವ ಒಲವು ಮತ್ತು ಲೈಂಗಿಕ ಅಸ್ಮಿತೆಯನ್ನು ಹೇಳಿಕೊಳ್ಳುವುದೇ ಪ್ರತಿಭಟನಾತ್ಮಕ ಕ್ರಿಯೆಯಾಗಿದೆ. ಇದಕ್ಕೆ ಅತೀವವಾದ ಧೈರ್ಯ ಮತ್ತು ಶಕ್ತಿ ಬೇಕಾಗುತ್ತದೆ. ಮನೆಯವರಿಂದ ಹಿಡಿದು ಇಡೀ ಸಮಾಜದಿಂದ ಇವರು ಬಹಿಷ್ಕಾರಕ್ಕೆ ಒಳಗಾಗಬೇಕಾಗುತ್ತದೆ. ಇವರ ಮೇಲೆ ಸಾಮಾಜಿಕ ಮೌಲ್ಯವನ್ನು ಹೇರಲಾಗುತ್ತದೆ.

ಈ ಸಮುದಾಯದವರು ಮೊದಲು ದೌರ್ಜನ್ಯಕ್ಕೆ ಒಳಗಾಗುವುದು ತಮ್ಮ ಕುಟುಂಬದಿಂದಲೇ ಆಗಿದೆ. ಲಿಂಗವನ್ನು ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಮಗು ಜನಿಸಿದಾಗ, ಅದಕ್ಕೆ ಶಸ್ತ್ರಚಿಕಿತ್ಸೆ ಮಾಡಲು ಒಪ್ಪಿಕೊಳ್ಳದಿರುವುದರಿಂದ ದೌರ್ಜನ್ಯ ಆರಂಭವಾಗುತ್ತದೆ. ಬಹಳ ಸಣ್ಣ ವಯಸ್ಸಿಗೆ ಕುಟುಂಬದವರ ನಿರಾಕರಣೆಯನ್ನು ಅನುಭವಿಸಬೇಕಾಗುತ್ತದೆ. ವಿರುದ್ಧ ಲಿಂಗಿಗಳೊಂದಿಗೆ ಒತ್ತಾಯದ ಮದುವೆ, ಒತ್ತಾಯದ ಮನೋವೈಜ್ಞಾನಿಕ ಚಿಕಿತ್ಸೆ, ಪುನರ್ವಸತಿ ಕೇಂದ್ರಗಳಿಗೆ ದೂಡುವುದು... ಇಂಥ ಹಲವಾರು ದೌರ್ಜನ್ಯಗಳಿಗೆ ಒಳಗಾಗುತ್ತಾರೆ. ‘ಬಾಗಿಲು ಇಲ್ಲದ ಶೌಚಾಲಯ, ವೈಯಕ್ತಿಕವಲ್ಲದ ಬದುಕು. ನನ್ನ ಜೀವಮಾನದಲ್ಲಿ ನಾನು ಜೈಲನ್ನು ಕಂಡಿಲ್ಲ. ಆದರೆ, ಈ ಪುನರ್ವಸತಿ ಕೇಂದ್ರಕ್ಕಿಂತ ಜೈಲು ಉತ್ತಮವಾಗಿರುತ್ತದೆ ಎಂಬುದನ್ನು ಕೇಳಿ ತಿಳಿದಿದ್ದೇನೆ’ ಎನ್ನುತ್ತಾರೆ ಕ್ವಿಯರ್‌ ಸಮುದಾಯದವರು.

ಸಾಮಾಜಿಕ ನೈತಿಕತೆಯ ಕಾರಣಕ್ಕಾಗಿ ಹಲವು ವಿಧಗಳಲ್ಲಿ ಈ ಸಮುದಾಯದವರು ದೌರ್ಜನ್ಯ, ತಾರತಮ್ಯವನ್ನು ಅನುಭವಿಸುತ್ತಿದ್ದಾರೆ. ಜನರಲ್ಲಿ ಈ ಸಮುದಾಯದ ಬಗ್ಗೆ ಸೂಕ್ಷ್ಮತೆ ಬೆಳೆಸಿಕೊಳ್ಳುವಂತೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದ ಕಾರಣಕ್ಕಾಗಿಯೇ ಇಂಥ ನೈತಿಕತೆಗಳು ದೌರ್ಜನ್ಯಕ್ಕೆ ಕಾರಣವಾಗುತ್ತಿವೆ. ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿಯೂ ದೌರ್ಜನ್ಯ ನಡೆಯುತ್ತಿದೆ. ಕೆಲವು ಕಣ್ಣಿಗೆ ಕಾಣುತ್ತವೆ. ಕೆಲವು ಕಾಣುವುದಿಲ್ಲ.

ಕ್ವಿಯರ್‌ ಸಮುದಾಯದವರು ಸಾರ್ವಜನಿಕವಾಗಿ ತಮ್ಮ ಸಂಗಾತಿಯೊಂದಿಗೆ ಇದ್ದರೂ ಜನರು ಅವರ ಮೇಲೆ ಹಿಂಸೆಗೆ ಇಳಿಯುತ್ತಾರೆ. ಮಹಿಳೆಯೊಬ್ಬರು ಇನ್ನೊಬ್ಬ ಮಹಿಳೆಯೊಂದಿಗೆ ಇದ್ದಾರೆ ಎಂದು ತಿಳಿದ ಜನ, ಮಹಿಳೆಯೊಬ್ಬರನ್ನು ಬಡಿದು, ಮುಖಕ್ಕೆ ಮಸಿ ಬಳಿದು, ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡಿದ್ದ ಪ್ರಕರಣ ನಡೆದಿದೆ. ಸಾಮಾಜಿಕ ಹಾಗೂ ಆರ್ಥಿಕ ಕಾರಣಕ್ಕಾಗಿಯೇ ಈ ಸಮುದಾಯದವರ ಹೆಚ್ಚು ಪ್ರಮಾಣದ ದೌರ್ಜನ್ಯಕ್ಕೆ ಗುರಿಯಾಗುತ್ತಾರೆ. 

ಸರ್ಕಾರವೇ ಒದಗಿಸುವ ಸೌಲಭ್ಯಗಳಲ್ಲೂ ದೌರ್ಜನ್ಯ ನಡೆಯುತ್ತದೆ. ಲಿಂಗ ಪರಿವರ್ತಿತ ಮಹಿಳೆ ಎಂದು ತಿಳಿಯುತ್ತಿದ್ದರೂ ಪುರುಷರು ಭದ್ರತಾ ಪರೀಕ್ಷೆ ನಡೆಸುತ್ತಾರೆ. ಸಾರ್ವಜನಿಕ ಶೌಚಾಲಯಗಳಲ್ಲಿ ಒತ್ತಾಯಪೂರ್ವಕವಾಗಿ ಪುರುಷ ಶೌಚಾಲಯಗಳಿಗೆ ದೂಡಲಾಗುತ್ತದೆ. ಇಂಥ ಘಟನೆಗಳು ಅವರ ಮಾನಸಿಕ ಅಸ್ವಸ್ಥತೆಗೆ ಕಾರಣವಾಗುತ್ತವೆ. ಮತ್ತು ಅವರ ಇರುವಿಕೆಯನ್ನೇ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತವೆ.

ಲಿಂಗತ್ವ ಅಸ್ಮಿತೆಯ ಕಾರಣಕ್ಕಾಗಿಯೇ ವಿದ್ಯೆ ಹಾಗೂ ಉದ್ಯೋಗದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ತಮ್ಮ ಅಸ್ಮಿತೆಯು ಎಲ್ಲರಿಗೂ ತಿಳಿದ ತಕ್ಷಣವೇ ಅವರು ಶಾಲೆಯನ್ನೂ ಉದ್ಯೋಗವನ್ನೂ ಬಿಟ್ಟುಬಿಡಬೇಕಾದ ಸ್ಥಿತಿ ಇದೆ. ಉದ್ಯೋಗದಲ್ಲಿ ಅವರಿಗೆ ಬಡ್ತಿಯನ್ನು, ಅವಕಾಶವನ್ನು ನಿರಾಕರಿಸಲಾಗುತ್ತದೆ. ಇದು ಅವರಿಗೆ ಸಮಾನ ಅವಕಾಶ ಇಲ್ಲದಿರುವುದನ್ನು ಸ್ಪಷ್ಟಪಡಿಸುತ್ತದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಕೆಲಸ ಮಾಡಲು ಇಷ್ಟವಿಲ್ಲದ ಕಾರಣಕ್ಕೆ ಅವರು ಭಿಕ್ಷೆ ಬೇಡುವುದಿಲ್ಲ. ಅವರಿಗೆ ಯಾರೂ ಉದ್ಯೋಗವನ್ನೇ ಕೊಡುವುದಿಲ್ಲ.

ಪೊಲೀಸರಿಂದಲೇ ದೌರ್ಜನ್ಯ ಹೆಚ್ಚು

ಒಬ್ಬ ಲಿಂಗ ಪರಿವರ್ತಿತ ಮಹಿಳೆಯನ್ನು ಎರಡು ಸಾವಿರ ಪುರುಷರು ಇರುವ ಜೈಲಿಗೆ ಹಾಕಲಾಗಿತ್ತು. ಈ ವೇಳೆ ಆಕೆಯ ಮೇಲೆ ಪುರುಷ ಕೈದಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಮತ್ತು ಆಕೆಗೆ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಜನರ ಮಾನವ ಹಕ್ಕುಗಳನ್ನು ಕಾಪಾಡುವುದು ಮತ್ತು ಹಿಂಸೆಯನ್ನು ತಡೆಗಟ್ಟುವುದು ಸರ್ಕಾರದ ಕೆಲಸ. ಆದರೆ, ಪೊಲೀಸರು ಹಾಗೂ ಜೈಲು ಅಧಿಕಾರಿಗಳೇ ಕ್ವಿಯರ್‌ ಸಮುದಾಯದವರ ಮೇಲೆ ಹೆಚ್ಚು ಹಿಂಸೆ ಹಾಗೂ ದೌರ್ಜನ್ಯವನ್ನು ಎಸಗುತ್ತಿದ್ದಾರೆ.

ಸೆಕ್ಷನ್‌ 377 ಎನ್ನುವ ಗುಮ್ಮ

ಸಲಿಂಗ ಸಂಬಂಧವು ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದರೂ ಅವರ ಮೇಲಿನ ದೌರ್ಜನ್ಯ ನಿಂತಿಲ್ಲ. ಪ್ರತಿ ದಿನ ಅವರು ಹಿಂಸೆ ಅನುಭವಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣಗಳಲ್ಲಿ ಐಪಿಸಿ ಸೆಕ್ಷನ್‌ 377 ಕೂಡ ಒಂದು. ಯಾವುದೇ ಪುರುಷ, ಮಹಿಳೆ ಅಥವಾ ಪ್ರಾಣಿಯ ಜೊತೆಗೆ ಅಸಹಜ ಸಂಭೋಗ ನಡೆಸಿದವರನ್ನು ಜೀವಾವಾಧಿ ಅಥವಾ ಹತ್ತು ವರ್ಷವರೆಗಿನ ಶಿಕ್ಷೆಗೆ ಒಳಪಡಿಸಬಹುದು ಮತ್ತು ದಂಡವನ್ನೂ ವಿಧಿಸಬಹುದು– ಹೀಗೆಂದು ಸೆಕ್ಷನ್‌ 377 ಹೇಳುತ್ತಿತ್ತು. ಇದನ್ನು ರದ್ದುಪಡಿಸಿದ್ದರೂ,ಈ ಸೆಕ್ಷನ್‌ನ ಗುಮ್ಮ ಇನ್ನೂ ಕಾಡುತ್ತಲೇ ಇದೆ. ಇದರಿಂದಾಗಿಯೇ ಸಲಿಂಗಿಗಳ ಮೇಲೆ ಸಾಮಾಜಿಕ ನೈತಿಕತೆಯನ್ನು ಹೊರಿಸಲಾಗುತ್ತಿದೆ.

–ಡಿ.ವೈ. ಚಂದ್ರಚೂಡ್‌, ಮುಖ್ಯ ನ್ಯಾಯಮೂರ್ತಿ

******

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT